ಪೊಲೀಸರಿಗೆ ಲಡ್ಡು, ಗುಲಾಬಿ ಕೊಟ್ಟು ಪ್ರತಿಭಟನೆ!
ಕನ್ನಡಪ್ರಭ ವಾರ್ತೆ, ಕಾರವಾರ, ಮೇ 24
ಅರ್ಗಾ ಗೇಟ್ ಎದುರು ಸೀಬರ್ಡ್ ನಿರಾಶ್ರಿತರು ಪ್ರತಿಭಟನೆ ಮಾಡುವಾಗ ಶಾಂತಿಗೆ ಭಂಗ ತರುವ ಯಾವುದೇ ಕೃತ್ಯದಲ್ಲಿ ಭಾಗಿಯಾಗಿರದಿದ್ದರೂ ಪೊಲೀಸರು ತಮ್ಮ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಶನಿವಾರ ಬೆಳಗ್ಗೆ ಪೊಲೀಸರಿಗೆ ಲಡ್ಡು ಹಾಗೂ ಗುಲಾಬಿ ಒಯ್ದು ಮನಃ ಪರಿವರ್ತನೆ ಮಾಡಿಕೊಳ್ಳುವಂತೆ ಒತ್ತಾಯಿಸುವ ಮೂಲಕ ಪ್ರತಿಭಟನೆ ನಡೆಸಿದ ಮಾಧವ ನಾಯ್ಕ, ಮೇ 22ರಂದು ಅರ್ಗಾ ಗೇಟ್ ಎದುರು ಸೀಬರ್ಡ್ ನಿರಾಶ್ರಿತರು ಹಾಗೂ ಸ್ಥಳೀಯರು ಪರಿಹಾರ ಹಾಗೂ ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡಿದ್ದರು. ಆಗ ಸಂದೇಶ ತಾಂಡೇಲ್ ಎಂಬಾತ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಯತ್ನಿಸಿದ. ಆಗ ನಾವು ಸಂಭವನೀಯ ದುರ್ಘಟನೆ ತಡೆಯಲು ಆತನ ಮೇಲೆ ನೀರು ಸುರಿದು ಬದುಕಿಸಿದೆವು. ಆದರೆ ಪೊಲೀಸರು ಮಾತ್ರ ತಮ್ಮ ಮೇಲೆ ಹಳೆಯ ದ್ವೇಷಕ್ಕಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾವು ಶಾಂತಿಗೆ ಭಂಗ ತರುವ ಯಾವುದೇ ಕೆಲಸ ಮಾಡಿಲ್ಲವಾದರೂ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಈ ಹಿಂದೆಯೂ ತಮ್ಮ ಮೇಲೆ ಹಾಕಿದ್ದ ಹಲವು ಪ್ರಕರಣಗಳು ಸುಳ್ಳೆಂದು ನ್ಯಾಯಾಲಯವೇ ತೀರ್ಪು ನೀಡಿದೆ ಎಂದು ವಿವರಿಸಿದರು.
ಪೊಲೀಸರು ತಮ್ಮ ನ್ಯಾಯಯುತವಾದ ಹೋರಾಟವನ್ನು ನಿಯಂತ್ರಿಸಲು ಹಾಗೂ ಹತ್ತಿಕ್ಕಲು ಈ ರೀತಿ ಸಾಕ್ಷ್ಯಾಧಾರಗಳಿಲ್ಲದ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ದೂರಿದರು.
ಮಾಧವ ನಾಯ್ಕ ಪ್ರತಿಭಟನೆಗೆ ಪೂರಕವಾಗಿ ಸೀಬರ್ಡ್ ನಿರಾಶ್ರಿತರ ಹಾಗೂ ಸ್ಥಳೀಯರ ಹೋರಾಟ ಸಮಿತಿ ಕಾರವಾರ ಹಾಗೂ ಅಂಕೋಲಾದ ಗೌರವಾಧ್ಯಕ್ಷ ಪಿ.ಎಂ. ತಾಂಡೆಲ್ ಹಾಗೂ ಸಂಚಾಲಕ ನಾಗರಾಜ ನಾಯ್ಕ ಪ್ರತಿಭಟನೆ ಸಮಯದಲ್ಲಿ ಮುಗ್ಧರ ಮೇಲೆ ದಾಖಲಿಸಲಾದ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸಿಪಿಐ ದಿನಕರ ಶೆಟ್ಟಿ ಅವರಿಗೆ ಮನವಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

