ಕೈ ಬಲ ಕುಸಿಯಿತು ಕಮಲ ಅರಳಿತು
ಒಂದು ಕಾಲದಲ್ಲಿ ಕಾಂಗ್ರೆಸ್.ನ ಭದ್ರಕೋಟೆ ಎಂದೇ ಹೆಸರಾಗಿದ್ದ ಹುಬ್ಬಳ್ಳಿ ಗ್ರಾಮೀಣ ವಿಧಾನಸಭೆ ಕ್ಷೇತ್ರ (ಈಗಿನ ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರ)ದಲ್ಲಿ ಕಾಂಗ್ರೆಸ್.ನ ಸದ್ಯದ ಸ್ಥಿತಿ ಗೆಲುವಿಗಾಗಿ ಪರದಾಡುವಂತಹದ್ದು.
ಹುಬ್ಬಳ್ಳಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ 1994ರಿಂದ 2004ರವರೆಗೆ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ನಂತರದ ಹುಟ ಧಾ ಸೆಂಟ್ರಲ್ ಕ್ಷೇತ್ರದ 2008ರ ಚುನಾವಣೆಯಲಿ ಬಿಜೆಪಿಯ ಜಗದೀಶ ಶೆಟ್ಟರ ಗೆಲುವು ಸಾಧಿಸುತ್ತ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಸಾಧಿಸಿದ ಸತತ ನಾಲ್ಕು ಗೆಲುವು ಕಾಂಗ್ರೆಸ್.ನ್ನು ಒಂದು ಬಾರಿ ಮೂರನೇ ಸ್ಥಾನಕ್ಕೆ ಮತ್ತು ಇನ್ನೂ ಮೂರು ಬಾರಿ ಎರಡನೇ ಸ್ಥಾನಕ್ಕೆ ನೂಕಿದೆ.
1989ರಲ್ಲಿ ಕಾಂಗ್ರೆಸ್.ನ ಜಿ.ಆರ್. ಸಾಂಡ್ರಾ ಸಾಧಿಸಿದ ಗೆಲುವೇ ಈ ಕ್ಷೇತ್ರದಲ್ಲಿ ಇದುವರೆಗೆ ನಡೆದ ಚುನಾವಣೆಯಲ್ಲಿ ಆ ಪಕ್ಷದ ಅಂತಿಮ ಗೆಲುವು. ಅಂದಿನಿಂದ ಕ್ಷೇತ್ರ ಪುನರ್ ವಿಂಗಡಣೆ ನಂತರ 2008ರಲ್ಲಿ ನಡೆದ ಚುನಾವಣೆವರೆಗೂ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಜಯ ಗಳಿಸಲು ಸಾಧ್ಯವಾಗಿಲ್ಲ.
ಹಾಗೆ ನೋಡಿದರೆ ರಾಜ್ಯ ವಿಧಾನಸಭೆಗೆ ಮೊದಲ ಬಾರಿಗೆ ಅಂದರೆ 1957ರ ಚುನಾವಣೆಯ ಆರಂಭದ ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಾಲಿಗೆ ಹುಬ್ಬಳ್ಳಿ ಗ್ರಾಮೀಣ ವಿಧಾನಸಭೆ ಕ್ಷೇತ್ರ ಭದ್ರಕೋಟೆಯಾಗಿತ್ತು. ಕಾಂಗ್ರೆಸ್.ನ ಎಂ.ಆರ್. ಪಾಟೀಲ 1957ರ ಚುನಾವಣೆಯಲ್ಲಿ 11,470 ಮತಗಳ ಅಂತರದಿಂದ, 1962ರ ಚುನಾವಣೆಯಲ್ಲಿ 18,867 ಮತಗಳ ಅಂತರದಿಂದ ಹಾಗೂ 1967ರ ಚುನಾವಣೆಯಲ್ಲಿ 13,827 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಸತತ ಮೂರು ಬಾರಿ ಗೆಲುವು ಸಾಧಿಸಿದ್ದು 1967ರ ಚುನಾವಣೆಯೇ ಕೊನೆಯಾಯಿತು. ನಂತರದ 1972ರ ಚುನಾವಣೆಯಲ್ಲಿ ಕಾಂಗ್ರೆಸ್.ನ ಜಿ.ಆರ್. ಸಾಂಡ್ರಾ ಗೆಲುವು ಸಾಧಿಸಿದರಾದರೂ ಮುಂದಿನ 1978ರ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದರು.
ಜನತಾ ಪಕ್ಷದ ಹಿಡಿತ: 1978, 1983 ಹಾಗೂ 1985ರ ಚುನಾವಣೆಗಳಲ್ಲಿ ಜನತಾ ಪಕ್ಷದ ಎಸ್.ಆರ್. ಬೊಮ್ಮಾಯಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದರು. ಆ ಸಂದರ್ಭ ಈ ಕ್ಷೇತ್ರ ಜನತಾ ಪಕ್ಷದ ಹಿಡಿತದಲ್ಲಿತ್ತು. ಆದರೆ, ಈ ಹಿಡಿತ ಹೆಚ್ಚು ದಿನ ಉಳಿಯಲಿಲ್ಲ. 1989ರಲ್ಲಿ ಕಾಂಗ್ರೆಸ್.ನ ಜಿ.ಆರ್. ಸಾಂಡ್ರಾ ಗೆಲುವು ಸಾಧಿಸುವ ಮೂಲಕ ಜನತಾ ಪಕ್ಷದ ಹಿಡಿತ ಸಡಿಲುಗೊಳಿಸಿದರು. ಆ ಚುನಾವಣೆಯಲ್ಲಿ ಜನತಾ ದಳದ ಎಸ್.ಆರ್. ಬೊಮ್ಮಾಯಿ ಸೋತ ಸಮೀಪದ ಅಭ್ಯರ್ಥಿಯಾದರಷ್ಟೇ. 1978 ಹಾಗೂ 1985ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಆರ್. ಸಾಂಡ್ರಾ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಕುಸಿದರು. 1983ರ ಚುನಾವಣೆಯಲ್ಲಿ ಕಾಂಗ್ರೆಸ್.ನ ಆರ್.ಎ. ವಾಲಿ ಎರಡನೇ ಸ್ಥಾನಕ್ಕೆ ಇಳಿದರು. ಮತ್ತೆ 1989ರ ಚುನಾವಣೆಯಲ್ಲಿ ಕಾಂಗ್ರೆಸ್.ನ ಜಿ.ಆರ್. ಸಾಂಡ್ರಾ ಈ ಕ್ಷೇತ್ರದಲ್ಲಿ ಗೆಲುವು ಪಡೆದರು.
ಅಂದಿನಿಂದ ಕ್ಷೇತ್ರ ಪುನರ್ ವಿಂಗಡಣೆಯ ಹುಟ ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರದಲ್ಲಿ 2004ರಲ್ಲಿ ನಡೆದ ಚುನಾವಣೆವರೆಗೂ ಕಾಂಗ್ರೆಸ್ ಮರಳಿ ಇಲ್ಲಿ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.
ಹುಬ್ಬಳ್ಳಿ ಗ್ರಾಮೀಣ ವಿಧಾನಸಭೆಯ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಎನ್. ದೇಸಾಯಿ ಮೂರನೇ ಸ್ಥಾನಕ್ಕೆ, 1999ರಲ್ಲಿ ಕಾಂಗ್ರೆಸ್.ನ ಗೋಪಿನಾಥ ಸಾಂಡ್ರಾ, 2004ರಲ್ಲಿ ಅನಿಲಕುಮಾರ ಪಾಟೀಲ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ನಂತರದ ಹುಟ ಧಾ ಸೆಂಟ್ರಲ್ ಕ್ಷೇತ್ರದಲ್ಲಿ 2008ರ ಚುನಾವಣೆಯಲ್ಲಿ ಕಾಂಗ್ರೆಸ್.ನ ಶಂಕ್ರಣ್ಣ ಮುನವಳ್ಳಿ ಎರಡನೇ ಸ್ಥಾನಕ್ಕೆ ಇಳಿಯುವ ಮೂಲಕ ಕಾಂಗ್ರೆಸ್ ಭಾರೀ ಕುಸಿತ ಕಂಡಿತು.
ಸದ್ಯ ಹುಟ ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಪಾರುಪತ್ಯವಿದೆ. ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಸಿಎಂ ಶೆಟ್ಟರ್ ಈ ಚುನಾವಣೆಯಲ್ಲಿಯೂ ಗೆಲ್ಲುವ ಕುದುರೆಯೆಂದೇ ಬಿಂಬಿಸಲ್ಪಡುತ್ತಿದ್ದಾರೆ. ಈ ಚುನಾವಣೆಯಲ್ಲಿಯೂ ಹುಟ ಧಾ ಸೆಂಟ್ರಲ್ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೇ ಬೀಳುತ್ತದೆಯೋ ಅಥವಾ ಕಾಂಗ್ರೆಸ್ ಈ ಕ್ಷೇತ್ರವನ್ನು ತನ್ನ ಮಡಿಲಿಗೆ ಮರಳಿ ಪಡೆಯುವಲ್ಲಿ ಸಫಲವಾಗುತ್ತದೆಯೋ ಎಂಬುದನ್ನು ಸಮಯವೇ ನಿರ್ಧರಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

