ಧಾರವಾಡ

ಅವಳಿ ನಗರದಲ್ಲಿ ಮಳೆ ಅವಾಂತರ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 1
ಜಿಟಿ ಜಿಟಿ ಮಳೆಗೆ, ಸಾಕಪ್ಪಾ ಸಾಕು ಮಳೆ... ಎಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆ ರಾಗ ಎಳೆಯುತ್ತಿದ್ದಾರೆ.
ಬಟ್ಟೆಗಳು ಒಣಗುತ್ತಿಲ್ಲ, ಶಾಲಾ-ಕಾಲೇಜು, ಕಚೇರಿ ಹಾಗೂ ಕೆಲಸಕ್ಕೆ ಸರಿಯಾಗಿ ಹೋಗಲಾಗುತ್ತಿಲ್ಲ.
ವರುಣನ ಕೃಪೆಯಿಂದ ಅವಳಿ ನಗರದ ರಸ್ತೆಗಳಂತೂ ಗುಂಡಿಗಳಾಗಿ ಪರಿವರ್ತನೆಗೊಂಡಿವೆ. ಪಕ್ಕಾ ಕೆಸರು ಗದ್ದೆಯ ಓಡಾಟದಂತಾಗಿದೆ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
15 ದಿನಗಳಿಂದ ಹಗಲು-ರಾತ್ರಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತೊಯ್ದು ತೊಪ್ಪೆಯಾಗಿರುವ ಅವಳಿ ನಗರದ ಜನತೆ, ಯಾವಾಗ ಸೂರ್ಯನನ್ನು ಕಾಣುತ್ತೇವೆಯೋ ಎಂದು ಹಂಬಲಿಸುತ್ತಿದ್ದಾರೆ. ಒಳಚರಂಡಿ ಕಾಮಗಾರಿ ಹುಟ್ಟು ಹಾಕಿರುವ ರಾಡಿಯಿಂದ ರಸ್ತೆಯ ಮೇಲೆ ಕಾಲಿಡುವುದೇ ಬೇಡ ಎನ್ನುವಂತಾಗಿದೆ. ಮಾರುಕಟ್ಟಿ ಪ್ರದೇಶದಲ್ಲಿ ಜನರ ಓಡಾಟ ಇದ್ದಕ್ಕಿದ್ದಂತೆ ಕರಗಿದೆ. ತರಕಾರಿ ಮಾರಾಟಗಾರರಂತೂ ಅಕ್ಷರಶಃ ರಾಡಿಯಲ್ಲಿಯೇ ಕುಳಿತು ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಬೃಹತ್ ಒಳಚರಂಡಿ ನಿರ್ಮಾಣ ಕಾಮಗಾರಿಯಿಂದಾಗಿ ಪ್ರಮುಖ ರಸ್ತೆ ಸೇರಿದಂತೆ ಒಳರಸ್ತೆಗಳ ಡಾಂಬರ್ ಕಿತ್ತುಹೋಗಿದೆ. ಮಣ್ಣೆಲ್ಲ ರಸ್ತೆ ಮೇಲಿ ಬಿದ್ದಿದೆ. ಸತತ ಮಳೆಯಿಂದಾಗಿ ಈ ಮಣ್ಣು ಮಳೆ ನೀರಿನ ಜೊತೆಗೆ ತಗ್ಗು ಪ್ರದೇಶದಲ್ಲಿನ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗುತ್ತಿದೆ. ರಸ್ತೆಯೆಲ್ಲ ಕೊಳಚೆಮಯವಾಗಿದ್ದರಿಂದ ಪಾದಚಾರಿಗಳು ನಡೆದಾಡಲು ಸಾಧ್ಯವಾಗದಂಥ ಸ್ಥಿತಿ ತಲೆದೋರಿದೆ. ಬೈಕ್ ಸವಾರರು ಜಾರಿ ಬೀಳುವುದು ಸಾಮಾನ್ಯದ ಸಂಗತಿಯಾಗಿದೆ. ಮಳೆಗಾಲದಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭಿಸಿದ್ದರಿಂದ ಸಾರ್ವಜನಿಕರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ನೀರಿನಿಂದ ಆವೃತ: ನಿರಂತರವಾಗಿ ಮಳೆಯಾಗುತ್ತಿದ್ದ ಕಾರಣ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ್ ಅವರು ಗುರುವಾರ ಕಲಘಟಗಿ, ಧಾರವಾಡ ತಾಲೂಕು, ಹು-ಧಾ ಶಹರದ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಇದೇ ರೀತಿ ಮಳೆ ಮುಂದುವರೆದರೆ ಶಾಲೆಗೆ ರಜೆ ಘೋಷಿಸುವ ಕುರಿತಂತೆ ಬಿಇಓ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ತೀರ್ಮಾನ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಮಳೆಯಿಂದ ಶಾಲೆಗಳ ಆಟದ ಮೈದಾನಗಳು ನೀರಿನಿಂದ ಆವೃತ್ತವಾಗಿವೆ. ಅಲ್ಲದೇ, ಕೆಲ ಶಾಲೆಗಳು ಸೋರುತ್ತಿದ್ದು, ಈ ನಿಟ್ಟಿನಲ್ಲಿ ರಜೆ ಘೋಷಿಸುವ ತೀರ್ಮಾನ ಮಾಡಲಾಗಿದೆ ಎಂದು ಡಿಡಿಪಿಐ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
131 ಮನೆ ನೆಲಸಮ: ಮಳೆ ಹೊಡೆತಕ್ಕೆ ಅದೃಷ್ಟವಶಾತ್ ಜಿಲ್ಲೆಯಲ್ಲಿ ಯಾವ ಜೀವಹಾನಿಯಾಗಿಲ್ಲ. ಧಾರವಾಡದಲ್ಲಿ 40, ಹುಬ್ಬಳ್ಳಿಯಲ್ಲಿ 63, ಕಲಘಟಗಿಯಲ್ಲಿ 8, ಕುಂದಗೋಳದಲ್ಲಿ 20 ಮನೆಗಳು ಸೇರಿದಂತೆ ಒಟ್ಟು 131 ಮನೆಗಳು ಭಾಗಶಃ ಹಾನಿಯಾಗಿವೆ.
ವಾಡಿಕೆ ಮಳೆಯಾಗಿಲ್ಲ: ಮಳೆಯಿಂದ ಇಷ್ಟೆಲ್ಲ ತೊಂದರೆಯಾಗಿದ್ದರೂ ಧಾರವಾಡ ಜಿಲ್ಲೆಗೆ ಪ್ರತಿ ವರ್ಷ ಆಗುವ ವಾಡಿಕೆಯಷ್ಟು ಮಳೆಯಾಗಿಲ್ಲ. ವಾಡಿಕೆಯಂತೆ ಜನವರಿಯಿಂದ ಜುಲೈ 30ರ ವರೆಗೆ ಜಿಲ್ಲೆಯಲ್ಲಿ 406.3 ಮಿ.ಮೀ. ಮಳೆಯಾಗಬೇಕಿತ್ತು. 356.9 ಮಿ.ಮೀ. ಆಗಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಪೈಕಿ ಕಲಘಟಗಿ ತಾಲೂಕಿನಲ್ಲಿ ಮಾತ್ರ (548ರ ಪೈಕಿ 585 ಮಿ.ಮೀ) ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ.
ಹಗಲು ಹೊತ್ತಲ್ಲಿ ತೇಪೆ ಕೆಲಸ: ಸದಾ ವಾಹನ ಸಂಚಾರ ದಟ್ಟಣೆಯಿಂದ ಗಿಜಿಗಿಡುವ ಪುಣೆ-ಬೆಂಗಳೂರು ಹಳೇ ರಸ್ತೆಯ ತುರ್ತು ಅಭಿವೃದ್ಧಿ ಕಾಮಗಾರಿಯನ್ನು ಹಗಲು ಹೊತ್ತಿನಲ್ಲಿ ಕೈಗೆತ್ತಿಕೊಂಡ ಪರಿಣಾಮ ಕೆಲ ಗಂಟೆಗಳ ಕಾಲ ಉಣಕಲ್ ಕ್ರಾಸ್ ಬಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
15 ದಿನಗಳಿಂದ ಎಡೆಬಿಡದೇ ಸುರಿದ ಮಳೆಯಿಂದಾಗಿ ಇಲ್ಲಿನ ರಸ್ತೆ ಸಂಪೂರ್ಣ ಹಾಳಾಗಿದೆ. ಅದರ ಜೊತೆಗೆ ಭೂಮಿಯೂ ಕೂಡ ಸಾಕಷ್ಟು ಮೆದುವಾಗಿದ್ದು, ಏಕಕಾಲಕ್ಕೆ ಭಾರಿ ಯಂತ್ರಗಳನ್ನು ತಂದು ರಸ್ತೆ ಅಗೆಯಲು ಆರಂಭಿಸಿದ್ದರಿಂದ ಸುತ್ತಲಿನ ಕೆಲವು ಕಟ್ಟಡಗಳಲ್ಲಿ ಕಂಪನದ ಅನುಭವ ಆಗಿ ಹಲವಾರು ನಿವಾಸಿಗಳು ಗಾಬರಿಗೊಂಡು ಹೊರಗೆ ಓಡಿದರು. ಈ ಸಂದರ್ಭದಲ್ಲಿ ನಡೆಯುತ್ತಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ನೋಡಿ, ಮಳೆಗಾಲ ಅದೂ ಹಗಲು ಹೊತ್ತಿನಲ್ಲೇ ಟ್ರಾಫಿಕ್‌ಗೆ ಕಿರಿಕಿರಿ ಮಾಡಿ ರಸ್ತೆ ಮಾಡಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತಿಯಾದ ವಾಹನ ಸಂಚಾರ ಇರುವ ರಸ್ತೆಗಳಲ್ಲಿ ಏನೇ ಕೆಲಸ ಮಾಡುವುದಿದ್ದರೂ ರಾತ್ರಿ ಮಾಡಬೇಕು ಎಂಬ ನಿಯಮವಿದ್ದರೂ ಅಂತಹ ನಿಯಮ ಗಾಳಿಗೆ ತೂರಿ ಒಮ್ಮೆಲೆ ರಸ್ತೆ ಅಗೆದು ಒಂದಿಷ್ಟು ಸಿಮೆಂಟ್, ಮುರ್ರಂ ಹಾಕಿ ಕೆಲಸ ಮಾಡುತ್ತಿದ್ದ ಪರಿಣಾಮ, ಕೆಲ ಗಂಟೆಗಳ ಇಡೀ ರಸ್ತೆಯಲ್ಲಿ ವಾಹನ ಸಂಚಾರ ಅದ್ವಾನಗೊಂಡಿತು.
ಬೆಳೆಗೆ ಬಸವನ ಹುಳು ಕಾಟ: ಬಿತ್ತನೆಯಾಗಿ ವಾತಾವರಣದಲ್ಲಿ ತೇವಾಂಶ ಕಾಣಿಸಿಕೊಳ್ಳುತ್ತಿದ್ದಂತೆಯೇ ತಾಲೂಕಿನ ಗಬ್ಬೂರು, ಗಿರಿಯಾಲ, ಕಟ್ನೂರು, ಬುಡರಶಿಂಗಿ, ಬೆಳಗಲಿ ಮತ್ತು ವಿರಾಪುರ ಗ್ರಾಮಗಳಲ್ಲಿ ಬಸವನ ಹುಳುವಿನ ಬಾಧೆ ವಿಪರೀತವಾಗಿದ್ದು, ಈಗಾಗಲೇ ಒಂದು ಹಂತಕ್ಕೆ ಬಂದಿರುವ ಸೋಯಾ, ಜೋಳ, ಬತ್ತ, ಹೆಸರು, ಮೆಕ್ಕೆಜೊಳವನ್ನು ತಿನ್ನುತ್ತಿರುವುದರಿಂದ ಈ ಭಾಗದ ರೈತಾಪಿ ವರ್ಗ ಕಂಗಾಲಾಗಿದೆ.
ಮುಂಗಾರು ಬೆಳೆಗಳ ಜೊತೆಗೆ ಕರ್ಕಿಹಳ್ಳದ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕವಾಗಿ ಸೀಬೆ ಮತ್ತು ಚಿಕ್ಕು ತೋಟಗಳಿಗೂ ಬಸವನ ಹುಳು ಲಗ್ಗೆ ಹಾಕಿದೆ. ಸೀಬೆ ಹಣ್ಣು ಮಾಗುತ್ತಿರುವ ಈ ವೇಳೆ ಏಕಾಏಕಿ ಸೀಬೆ ತೋಟಗಳ ಮೇಲೆ ದಾಳಿ ಮಾಡುತ್ತಿರುವ ಬಸವನ ಹುಳುವಿನಿಂದಾಗಿ ಇಳುವರಿ ಪ್ರಮಾಣದಲ್ಲಿ ಸಾಕಷ್ಟು ಕುಂಠಿತವಾಗಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಇನ್ನೂ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.

ಉತ್ತಮ ಬಿತ್ತನೆ
ಈ ವರ್ಷ ಜಿಲ್ಲೆಯಲ್ಲಿ 2,08,900 ಹೆಕ್ಟೇರ್ ಪೈಕಿ 1,79,075 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬತ್ತ (20777), ಗೋವಿನ ಜೋಳ (27,291), ಹೆಸರು (20605), ಶೇಂಗಾ (25783), ಸೋಯಾ (32,678) ಹಾಗೂ ಹತ್ತಿ (38,895 ಹೆಕ್ಟೇರ್)  ಬಿತ್ತನೆಯಾಗಿದೆ. ಈ ಮಳೆಯು ರೈತರಿಗೆ ಸಂತಸ ತಂದಿದ್ದು, ಕಲಘಟಗಿ ಭಾಗದ ಗೋವಿನ ಜೋಳ ಬೆಳೆದ ರೈತರಿಗೆ ಮಾತ್ರ ತುಸು ತೊಂದರೆಯಾಗಿದೆ. ಹೆಚ್ಚಿನ ಮಳೆಯಿಂದ ಬೆಳೆಗಳು ಹಾಳಾಗುತ್ತಿದೆ ಎನ್ನುವುದು ಕೃಷಿ ಇಲಾಖೆ ಮಾಹಿತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.