ಸುರಕ್ಷಿತವಾಗಿಲ್ಲ ಧಾರವಾಡ!
ಬಸವರಾಜ ಹಿರೇಮಠ
ಧಾರವಾಡ: ನಿವೃತ್ತರ ಸ್ವರ್ಗ, ಶೈಕ್ಷಣಿಕ ಕೇಂದ್ರ ಎಂದೆಲ್ಲಾ ಹೆಸರು ಪಡೆದ ಧಾರವಾಡ ನಗರವು, ಇತ್ತೀಚಿನ ದಿನಗಳಲ್ಲಿ ಕಳ್ಳರ, ದರೋಡೆಕೋರರ ಕೇಂದ್ರ ಸ್ಥಾನವಾಗಿದೆ.
ಕಳೆದ ಜನವರಿಯಿಂದ ಜುಲೈ ಅಂತ್ಯದ ವರೆಗೆ ಬರೋಬ್ಬರಿ ನೂರು ಕಳ್ಳತನದ ಪ್ರಕರಣ ದಾಖಲಾಗಿದ್ದು ಇದಕ್ಕೆ ಸಾಕ್ಷಿ. ಕಳೆದ ಮೇ, ಜೂನ್ ಹಾಗೂ ಜುಲೈ ತಿಂಗಳಲ್ಲಂತೂ ಧಾರವಾಡ ನಗರದಲ್ಲಿ ನಡೆದ ಸರಣಿ ಮನೆ ಕಳ್ಳತನಗಳು ಎಲ್ಲರಿಗೂ ಭಯ ಹುಟ್ಟಿಸುವಂತಿವೆ. ಎರಡು ಬಾರಿ ಒಂದೇ ದಿನ ಮೂರ್ನಾಲ್ಕು ಕಳ್ಳತನ ಎಗ್ಗಿಲ್ಲದೇ ಇಲ್ಲಿ ನಡೆದಿವೆ. ನಗರದಲ್ಲಿ ನಿರಂತರವಾಗಿ ಕಳ್ಳತನಗಳು ನಡೆದರೂ ಪೊಲೀಸ್ ಇಲಾಖೆ ಮಾತ್ರ ಆ ಕಳ್ಳತನಗಳ ಕುರಿತು ಪ್ರಕರಣ ದಾಖಲಿಸುವುದನ್ನು ಬಿಟ್ಟು ಪತ್ತೆ ಹಚ್ಚುವ ಕಾರ್ಯ ಮಾಡದಿರುವುದು ಜನತೆಗೆ ಬೇಸರ ಮೂಡಿಸಿದೆ. ಹೀಗಾಗಿ ಧಾರವಾಡ ಸುರಕ್ಷಿತವಾಗಿಲ್ಲ ಎಂಬ ಮನೋಭಾವನೆ ಎಲ್ಲರಲ್ಲೂ ಮೂಡಿರುವುದರಲ್ಲಿ ವಿಶೇಷವೇನಲ್ಲ.
90 ತೊಲೆ, ರು. 7 ಲಕ್ಷ: ದರೋಡೆ, ಸುಲಿಗೆ, ಮನೆ ಕಳವು, ವಾಹನ ಕಳವು ಸೇರಿದಂತೆ ಒಟ್ಟು ನೂರು ಕಳ್ಳತನದ ಪೈಕಿ ನಗರದ ಯು.ಬಿ. ಹಿಲ್ ಹತ್ತಿರ ಜೂನ್ ತಿಂಗಳಲ್ಲಿ ಕೋರಿಶೆಟ್ಟರ್ ಎಂಬುವರ ಮನೆ ಹಿಂದಿನ ಬಾಗಿಲು ಮುರಿದು ನಡೆಸಿದ ಕಳ್ಳತನ ಅತಿ ದೊಡ್ಡದು. ಏಕೆಂದರೆ, ಲಕ್ಷಾಂತರ ರುಪಾಯಿ ಮೌಲ್ಯದ 90 ತೊಲೆ ಬಂಗಾರದ ಆಭರಣ ಹಾಗೂ ರು. 7 ಲಕ್ಷ ನಗದು ಕಳ್ಳತನವಾಗಿತ್ತು. ಅದೇ ಜೂನ್ ತಿಂಗಳಲ್ಲಿ ಕಲಾಭವನ ಬಳಿ ಟಿವಿಎಸ್ ಶೋರೂಂ ಕಳ್ಳತನ, ಮುರುಘಾಮಠದ ಕಮತಿ ಪ್ಲಾಟ್ನಲ್ಲಿ ಒಂದೇ ದಿನ ಮೂರು ಮನೆಗಳ ಕೀಲಿ ಮುರಿದು ಚಿನ್ನ, ಬೆಳ್ಳಿ ಹಾಗೂ ನಗದು ದೋಚಿಕೊಂಡು ಹೋಗಿದ್ದರು. ಈ ಘಟನೆ ನಡೆದು ಎರಡೇ ದಿನಗಳಲ್ಲಿ ಮತ್ತೆ ಒಂದೇ ದಿನ ರಾತ್ರಿ ಉಪ ನಗರ ಠಾಣೆ ವ್ಯಾಪ್ತಿ ಮೂರು ಕಡೆ ಕಳ್ಳತನವಾಗಿತ್ತು. ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿನ ಶಾಂತಿ ನಿವಾಸ ಚಾಳನಲ್ಲಿನ ರುಕ್ಮಿಣಿ ನಿಂಗಪ್ಪ ಸೊಪ್ಪಿನ ಮನೆಯ ಹಿಂದಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಸುಮಾರು ರು. 2.29 ಲಕ್ಷ ಮೌಲ್ಯದ 11 ತೊಲೆ ಚಿನ್ನದ ಆಭರಣ ಮತ್ತು ಐದು ಸಾವಿರ ನಗದು ದೋಚಿದ್ದರು.
ಜು.16ರಂದು ನಗರದಲ್ಲಿ ಮತ್ತೆ ಸರಣಿ ಕಳ್ಳತನ ಮುಂದುವರೆಯಿತು. ಉಪ ನಗರ ಠಾಣೆ ವ್ಯಾಪ್ತಿಯ ಕೊಪ್ಪದಕೇರಿಯ ಮಹಾಂತ ಬಸವೇಶ್ವರ ನಗರದ ವ್ಯಾಪಾರಸ್ಥ ಶಿವಯೋಗಿ ಮುರಿಗೆಪ್ಪ ಕೋರಿ ಎಂಬುವರ ಮನೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿತ್ತು. ರಾಣಿಚನ್ನಮ್ಮ ನಗರದ ಅಣ್ಣ ಹಾಗೂ ಕುಟುಂಬದವರು ವಿದೇಶಿ ಪ್ರವಾಸಕ್ಕೆಂದು ಹೋದ ಹಿನ್ನೆಲೆಯಲ್ಲಿ ಅಣ್ಣನ ಮನೆ ಕಾಯಲು ಕುಟುಂಬ ಸಮೇತ ಹೋದ ಶಿವಯೋಗಿ ಕೋರಿ ಎಂಬುವರ ಮನೆಗೆ ಕಳ್ಳರು ಕನ್ನ ಹಾಕಿದ್ದರು. ಅಲ್ಮೇರಾ ಮುರಿದು 10 ತೊಲೆ ಬಂಗಾರ, 260 ಗ್ರಾಮ ಬೆಳ್ಳಿ ಹಾಗೂ ರು. 25 ಸಾವಿರ ನಗದು ಆಗ ಕಳುವಾಗಿತ್ತು. ಇನ್ನು, ಮೇ 19ಕ್ಕೆ ದೇಸಾಯಿ ಓಣಿಯಲ್ಲಿ ಬನಸಿಲಾಲ ಪ್ರಭುರಾಮ ಶರ್ಮಾ ಎಂಬುವರ ಮನೆಯ ಅಲ್ಮೇರಾ ತೆಗೆದು ರು. 20 ಸಾವಿರ ನಗದು ಹಾಗೂ ಅಂದಾಜು ರು. 1 ಲಕ್ಷ ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು. ಬಿಸಿಲಿನ ತಾಪ ತಾಳಲಾರದೆ ಮನೆಯಲ್ಲಿನ ವೃದ್ಧೆ ಬಾಗಿಲಲ್ಲಿ ಮಲಗಿದ್ದಾಗ, ಒಳನುಗ್ಗಿದ ಕಳ್ಳರು ಅಲ್ಮೇರಾದ ಮೇಲಿದ್ದ ಕೀಲಿ ಬಳಸಿ ಚಿನ್ನ ಮತ್ತು ನಗದು ದೋಚಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಂಚಿನ ಅಧಿಕಾರ ಈಗಿಲ್ಲ: ಬರೀ ಧಾರವಾಡ ನಗರವೊಂದರಲ್ಲಿಯೇ ಇಷ್ಟೊಂದು ಸಂಖ್ಯೆ ಕಳ್ಳತನವಾಗಿದ್ದು, ಪೊಲೀಸ್ ಇಲಾಖೆ ನಿಷ್ಕ್ರಿಯ ಆಡಳಿತವೇ ಒಂದು ಕಾರಣ ಎನ್ನುವುದಾದರೆ, ವಿವಿಧ ಆರೋಪದಡಿ ಸೆರೆಸಿಕ್ಕ ಆರೋಪಿಗಳಿಂದ ತಾವು ಮಾಡಿದ ಅಪರಾಧ ಬಾಯಿ ಬಿಡಿಸಲು ನಮಗೆ ಮುಂಚೆ ಇದ್ದ ಅಧಿಕಾರ ಈಗಿಲ್ಲ. ಕಳ್ಳನನ್ನು ಒಂದು ಪೆಟ್ಟು ಹೊಡೆದರೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಆರೋಪಿಯನ್ನು ವಿಚಾರಣೆ ಮಾಡುವಾಗ ವಕೀಲರನ್ನು ಕೂರಿಸಿಕೊಂಡೇ ವಿಚಾರಣೆ ಮಾಡಬೇಕು. ಪೊಲೀಸರಿಗೂ ಹಲವು ವಿಷಯಗಳಲ್ಲಿ ಕೈ ಕಟ್ಟಿ ಹಾಕಲಾಗಿದ್ದು, ಈ ರೀತಿಯ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿವೆ ಹೊರತು ಪತ್ತೆಯಾಗುತ್ತಿಲ್ಲ ಎನ್ನುವುದು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಯೊಬ್ಬರ ಬೇಸರ.
ಒಟ್ಟಿನಲ್ಲಿ ಸಮಾಜದಲ್ಲಿ ಅಪರಾಧಗಳನ್ನು ತಗ್ಗಿಸುವುದು ಹಾಗೂ ಅವುಗಳನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಯದ್ದು. ಅದನ್ನು ಇಲಾಖೆ ಸರಿಯಾಗಿ ನಿಭಾಯಿಸಬೇಕಿದೆ ಎಂಬುದು ಜನರ ಅಭಿಪ್ರಾಯ.
ಸುಮ್ಮನೆ ಕೂತಿಲ್ಲ
ಧಾರವಾಡ ನಗರದಲ್ಲಿ ಒಂದೆರೆಡು ತಿಂಗಳಲ್ಲಿ ಏಕಾಏಕಿ ಹತ್ತಾರು ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಪೊಲೀಸ್ ಇಲಾಖೆ ಸುಮ್ಮನೆ ಕೂತಿಲ್ಲ. ಸಂಶಯ ಬಂದವರನ್ನು ವಿಚಾರಿಸಲಾಗುತ್ತಿದೆ. ರಾತ್ರಿ ವೇಳೆ ಗಸ್ತು ತಿರುಗುವ ಪೊಲೀಸರ ಸಂಖ್ಯೆಯನ್ನೂ ಜಾಸ್ತಿ ಮಾಡಲಾಗಿದೆ. ಚಾಲುಕ್ಯ ಹಾಗೂ ಚೀತಾ ವಾಹನಗಳನ್ನು ಬಿಡಲಾಗಿದೆ. ಆದಷ್ಟು ಬೇಗ ಕಳ್ಳರ ಜಾಲ ಪತ್ತೆ ಮಾಡುತ್ತೇವೆ. ಮನೆ ಕಳ್ಳತನ ವಿಷಯದಲ್ಲಿ ಸಾರ್ವಜನಿಕರೂ ತುಸು ಹುಷಾರಾಗಿರಬೇಕು.
- ಬಿ.ಎ. ಪದ್ಮನಯನ, ಪೊಲೀಸ್ ಆಯುಕ್ತರು, ಹು-ಧಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

