ಅತ್ಯಾಚಾರ: ಸಚಿವ ಲಾಡ್ ಸಾಂತ್ವನ
ಹುಬ್ಬಳ್ಳಿ: ನಗರದ ರೇಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಇಲ್ಲಿಯ ಚಾಲುಕ್ಯ ನಗರದಲ್ಲಿ ನಡೆದ ಅತ್ಯಾಚಾರದಿಂದ ತೀವ್ರ ಅಸ್ವಸ್ಥಗೊಂಡಿರುವ ಮಹಿಳೆ ಕಳೆದ ನಾಲ್ಕು ದಿನಗಳಿಂದ ರೇಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸೋಮವಾರ ರೇಲ್ವೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸಂತೋಷ ಲಾಡ್, ಮಹಿಳೆಯ ಆರೋಗ್ಯದ ಕುರಿತು ಹಿರಿಯ ವೈದ್ಯರೊಂದಿಗೆ ಚರ್ಚೆ ನಡೆಸಿದರು. ನಂತರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಹಿಳೆ ಚೇತರಿಸಿಕೊಳ್ಳುತ್ತಿದ್ದಾಳೆ. ಆಕೆಯ ಚಿಕಿತ್ಸೆಗಾಗಿ ತಜ್ಞವೈದ್ಯರನ್ನು ನೇಮಕ ಮಾಡಲಾಗಿದೆ ಎಂದರು. ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬೀಳಲು ಕನಿಷ್ಠ ವಾರವಾದರೂ ಬೇಕು. ಅತ್ಯಾಚಾರಕ್ಕೊಳಗಾದ ಮಹಿಳೆಯ ಹೇಳಿಕೆಯನ್ನು ಪೊಲೀಸ್ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಪಡೆದ ನಂತರ ತನಿಖೆ ತೀವ್ರಗೊಳ್ಳಲಿದೆ ಎಂದರು.
ಬಾಳಾಸಾಹೇಬಗೆ ಡಾಕ್ಟರೇಟ್
ಧಾರವಾಡ: ಜೆಎಸ್ಸೆಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ ಉಪನ್ಯಾಸಕ ಬಾಳಾಸಾಹೇಬ ಪಾಟೀಲ ಅವರು ಮಂಡಿಸಿದ ಕರ್ನಾಟಕ ವೀರಶೈವ ಪರಂಪರೆಯ ಚಿತ್ರಕಲೆ ಎಂಬ ಪ್ರಬಂಧಕ್ಕೆ ಹಂಪಿ ಕನ್ನಡ ವಿವಿ ಡಾಕ್ಟರೇಟ್ ಪ್ರದಾನ ಮಾಡಿದೆ. ಅವರ ಈ ಪ್ರಬಂಧಕ್ಕೆ ಲಲಿತಕಲಾ ವಿವಿಯ ವಿಶೇಷಾಧಿಕಾರಿ ಡಾ.ಎಸ್.ಸಿ. ಪಾಟೀಲ ಮಾರ್ಗದರ್ಶನ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಸವಾನಂದಶ್ರೀ ನಿಧನ: ಅಂತಿಮ ದರ್ಶನ
ಕಲಘಟಗಿ: ತಾಲೂಕಿನ ಸೋಮನಕೊಪ್ಪ ಗ್ರಾಮದ ಸಿದ್ಧಾರೂಢ ಆಶ್ರಮದ ಶ್ರೀ ಬಸವಾನಂದ ಸ್ವಾಮೀಜಿ (70) ಭಾನುವಾರ ನಿಧನರಾಗಿದ್ದು, ಸೋಮವಾರ ಸಂಜೆ ಜರುಗಿದ ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ, ಮುಖಂಡರು ಹಾಗೂ ಸಾವಿರಾರು ಭಕ್ತರು ಶೋಕ ಸಾಗರದಲ್ಲಿ ಅಂತಿಮ ದರ್ಶನ ಪಡೆದರು. ಎರಡು ದಶಕಗಳಿಂದಲೂ ಸ್ಥಳೀಯ ರೈತರು ಆಶ್ರಮಕ್ಕೆ ನೀಡಿದ ಜಮೀನಿನಲ್ಲಿ ಆಶ್ರಮ ಸ್ಥಾಪಿಸಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಶ್ರಮದ ಸುತ್ತಲೂ ಗಿಡ ಮರಗಳು, ತೋಟ, ಕೃಷಿ ಕೆಲಸವನ್ನು ತಾವೇ ಭಕ್ತರೊಂದಿಗೆ ಶ್ರಮ ಜೀವಿಗಳಾಗಿ ಬೆಳೆಸಿದ್ದರು. ಅಲ್ಲದೆ ಪ್ರತಿವರ್ಷ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವುದನ್ನು ಭಕ್ತರು ಸ್ಮರಿಸಿದರು. ಬೀದರ್ ಜಿಲ್ಲೆಯ ಶ್ರೀ ಶಿವಕುಮಾರ ಸ್ವಾಮೀಜಿ, ತಾವರಗೇರಿ ಸಿದ್ಧಾರೂಢ ಆಶ್ರಮದ ಶ್ರೀ ನಿರ್ಗುಣಾನಂದ ಸ್ವಾಮೀಜಿ, ಶ್ರೀ ವಾಸುದೇವ ಸ್ವಾಮೀಜಿ, ಶ್ರೀ ಚನ್ನಯ್ಯ ಸ್ವಾಮೀಜಿ, ಬೆಲವಂತರ ಹಿರೇಮಠದ ಶ್ರೀ ರೇವಣಸಿದ್ದ ಸ್ವಾಮೀಜಿ, ನ್ಯಾಯವಾದಿ ಸಿ.ಎಂ. ನಿಂಬಣ್ಣವರ, ಜಿಪಂ ಸದಸ್ಯರಾದ ವೈ.ಬಿ. ದಾಸನಕೊಪ್ಪ, ಬಸವರಾಜ ಕರಡಿಕೊಪ್ಪ, ಕಸ್ತೂರಿ ಧಾರವಾಡ, ಶಂಕ್ರಣ್ಣ ಅಗಡಿ, ತಾಪಂ ಅಧ್ಯಕ್ಷ ಬಸವಣ್ಣಯ್ಯ ಹಿರೇಮಠ, ಮಾಜಿ ಅಧ್ಯಕ್ಷ ಶೇಖಪ್ಪ ಹುಲಗೂರ, ಸದಸ್ಯೆ ಪಾರವ್ವ ಪಾಟೀಲ, ಯಲ್ಲಾರಿ ಶಿಂಧೆ, ಎಂ.ಎಫ್. ಜಾವೂರ, ಚನ್ನಯ್ಯ ಹಿರೇಮಠ, ಮಾಜಿ ಗ್ರಾಪಂ ಅದ್ಯಕ್ಷ ಬೈಲಪ್ಪ ಹೊನ್ನಳ್ಳಿ ಸೇರಿದಂತೆ ತಾಲೂಕು ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಂಜೆ ಜರುಗಿದ ಶ್ರೀಗಳ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

