ಸೋಯಾ, ಹೆಸರಿಗೂ ಬಂತು ಕೀಟಬಾಧೆ
ಧಾರವಾಡ: ಇನ್ನೇನು, ಉತ್ತಮ ಮಳೆಯಾಗಿ ಪೈರು ಕೈಗೆ ಬಂತು ಎನ್ನುವಷ್ಟರಲ್ಲಿ ಮುಂಗಾರಿನ ಪ್ರಮುಖ ಬೆಳೆಗಳಿಗೆ ಅಂಟಿದ ಕೀಟಬಾಧೆ ಧಾರವಾಡ ಜಿಲ್ಲೆ ರೈತರನ್ನು ಮತ್ತೊಮ್ಮೆ ಆತಂಕಕ್ಕೀಡು ಮಾಡಿದೆ.
ಬಿತ್ತನೆ ಆರಂಭದಲ್ಲಿಯೇ ಮಳೆರಾಯ ಕಾಡಿದ್ದು ಒಂದೆಡೆಯಾದರೆ, ಪ್ರಸ್ತುತ ಬೆಳೆಗಳಿಗೆ ಅಂಟಿಕೊಂಡಿರುವ ಕೀಟಗಳ ಬಾಧೆ ಕೃಷಿಕರನ್ನು ಸಂಕಷ್ಟಕ್ಕೆ ನೂಕಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಬಿತ್ತನೆ ಕಾರ್ಯಕ್ಕೆ ಅಡ್ಡಿ ಉಂಟಾಗಿರಲಿಲ್ಲ. ಕಳೆದ ಇಪ್ಪತ್ತು ದಿನಗಳಿಂದ ಬಂದ ಮಳೆಯಂತೂ ರೈತರನ್ನು ಸಂತಸದಲ್ಲಿಟ್ಟಿತ್ತು. ಆದರೆ, ಇಂತಹ ಸಂದರ್ಭ ಹೊಲದಲ್ಲಿ ಬೆಳೆದು ನಿಂತ ಬೆಳೆಗಳಿಗೆ ಕೀಟಗಳ ಹಾವಳಿ ಹೆಚ್ಚಾಗಿರುವುದು ಅನ್ನದಾತನ ತಲೆ ಬಿಸಿ ಮಾಡಿದೆ.
ಯಾವ್ಯಾವ ರೋಗ: ಮುಂಗಾರು ಹಂಗಾಮಿನ ಪ್ರಮುಖ ಆಹಾರ ಮತ್ತು ವಾಣಿಜ್ಯ ಬೆಳೆಗಳಾಗಿರುವ ಹೆಸರು, ಶೇಂಗಾ, ಸೋಯಾ, ಬಟಾನಿ, ಉದ್ದು, ಆಲೂಗಡ್ಡೆ, ಹತ್ತಿ, ಬೆಳೆಗಳಿಗೆ ಬೂದಿರೋಗ, ಬೆಂಕಿರೋಗ ಹಾಗೂ ಅಂಗಮಾರಿ ರೋಗ ತಗುಲಿದೆ. ಅಲ್ಲದೇ, ಕೀಟಗಳ ವಿಪರೀತ ಕಾಟದಿಂದ ಉತ್ತಮವಾಗಿ ಬೆಳೆದ ಬೆಳೆಗಳು ನೆಲಕಚ್ಚಲಾರಂಬಿಸಿವೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಈ ಬೆಳೆಗಳು ಕೈಗೆಟಕುತ್ತವೋ ಇಲ್ಲವೋ ಎಂಬ ಭಯ ಶುರುವಾಗಿದೆ. ಇಂತಹ ಪರಿಸ್ಥಿಯಲ್ಲಿಯೂ ಸಾಲ-ಶೂಲ ಮಾಡಿ ರೈತರು ಸಾವಿರಾರು ರು. ಮೌಲ್ಯದ ಔಷಧಿಗಳನ್ನು ಸಿಂಪಡಿಸುವ ಮೂಲಕ ಬೆಳೆಗಳ ಆರೈಕೆ ಮಾಡುತ್ತಿದ್ದಾರೆ. ಆದರೂ ಬೆಳೆಗಳಿಗೆ ಅಂಟಿಕೊಂಡಿರುವ ಕೀಟಗಳ ಬಾಧೆ ಮಾತ್ರ ಹತೋಟಿಗೆ ಬರುತ್ತಿಲ್ಲ ಎಂಬುದೇ ದೊಡ್ಡ ಕೊರಗು.
ಯಾವ ಔಷಧಿ: ಕೃಷಿ ಇಲಾಖೆಯ ಸಬ್ಸಿಡಿಯಲ್ಲಿ ನೀಡುತ್ತಿರುವ ಆಸ್ಪೆಡ್, ಕ್ಲೋರಿಪ್ಯೂರಿಯಸ್, ಲ್ಯಾಂಬಡಾ ಕೀಟನಾಶಕ ಔಷಧಿಗಳು ಕಡಿಮೆ ಬೆಲೆಯದ್ದಾಗಿವೆ. ಆದರೆ, ಈ ಔಷಧ ಸಿಂಪಡಿಸುವುದರಿಂದ ಕೀಟಗಳ ಬಾಧೆಯಿಂದ ಬೆಳೆಗಳು ಪಾರಾಗುತ್ತಿಲ್ಲ. ಹಾಗಾಗಿ, ಹೆಚ್ಚಾನು ಹೆಚ್ಚು ರೈತರು ಖಾಸಗಿ ಕಂಪನಿಯ ಅಂವಾಟ್, ಪಿಎಂ, ಎಂ45, ನ್ಯೂ ಸ್ಟಾರ್ಥಿನ್ ಪುಡಿ, ಕೋರಿಜೀನ್, ನೇಟಿವ್, ಪನ್ನಿಸೈಡ್ ನಂತಹ ಕೀಟನಾಶಕ ಔಷಧಿ ಖರೀದಿಸಿ ಬೆಳೆಗಳ ಆರೈಕೆ ಮಾಡುತ್ತಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿನ ಕೆಲವೊಂದಿಷ್ಟು ಪ್ರದೇಶಗಳನ್ನು ಬಿಟ್ಟು ಉಳಿದೆಲ್ಲ ಪ್ರದೇಶಗಳಲ್ಲಿ ಬೆಳೆಗಳಿಗೆ ಆವಶ್ಯಕವಾದ ಸಮೃದ್ಧ ಮಳೆಯಾಗಿದೆ. ಒಟ್ಟು ಬಿತ್ತನೆ ಪ್ರಮಾಣದಲ್ಲಿ ಹೆಸರು 20,783 ಹೆಕ್ಟೇರ್, ಶೇಂಗಾ 25,783 ಹೆಕ್ಟೇರ್, ಸೋಯಾ 32,895 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳು ತಿಳಿಸುತ್ತವೆ.
ಕಳೆದ ಮೂರು ವಾರಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಕೀಟನಾಶಕ ಸಿಂಪಡಣೆಗೆ ಸೂಕ್ತ ಅವಕಾಶ ದೊರೆಯಲ್ಲಿಲ್ಲ. ಇದರಿಂದಾಗಿ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕೀಟಗಳ ಮೆತ್ತಿಕೊಂಡಿವೆ. ಅಲ್ಲದೇ, ನಾನಾ ರೋಗಗಳಿಗೆ ತುತ್ತಾಗಿವೆ. ಕಳೆದ ಒಂದೇ ವಾರದಲ್ಲಿ ಮೂರ್ನಾಲ್ಕು ಬಾರಿ ದುಬಾರಿಯ ಕೀಟನಾಶಕ ಸಿಂಪಡಿಸಿದರೂ ಕೀಟಗಳು ಸಾಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ತಾಲೂಕಿನ ಲಕಮಾಪುರ ಗ್ರಾಮದ ನಿಂಗನಗೌಡ ಪಾಟೀಲ.
ಣ ಚಿತ್ರ, ಲೇಖನ: ಕಲ್ಮೇಶ ಪಟ್ಟಣದವರ
ಸತತ ಬರಗಾಲ ಎದುರಿಸಿದ ರೈತರ ಕೈಯಲ್ಲಿ ಬಿಡಿಗಾಸು ಇಲ್ಲದಂತಾಗಿದೆ. ಬಿತ್ತನೆ ಸಂದರ್ಭದಲ್ಲಿಯೇ ಸಾಲ ಮಾಡಿ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದೇವೆ. ಇಂತಹ ವೇಳೆಯಲ್ಲಿಯೇ ಇದೀಗ ಬೆಳೆಗಳಿಗೆ ಕೀಟ ಬಾಧೆ ಅಂಟಿಕೊಂಡಿದ್ದು, ಸಾಕಷ್ಟು ರೈತರಿಗೆ ಕೀಟನಾಶಕ ಸಿಂಪಡಿಸಿಲು ಆಗುತ್ತಿಲ್ಲ. ಹಾಗಾಗಿ ಕೃಷಿ ಇಲಾಖೆಯಲ್ಲಿ ಈಗ ನೀಡುವ ಕೀಟನಾಶಕಗಳ ಜೊತೆಗೆ ಅಂವಾಟ್, ಎಂ45, ಪಿಎಂ, ನೇಟಿವ್ ಸೇರಿದಂತೆ ಉಳಿದ ಕೀಟನಾಶಕಗಳನ್ನು ರೈತರಿಗೆ ನೀಡಬೇಕು.
-ಶಿವಾನಂದ ಬೆಂಡಿಗೇರಿ
ಯಾದವಾಡ ಗ್ರಾಮದ ರೈತ
*****
ಬೆಳೆಗಳಿಗೆ ಕೀಟಬಾಧೆ ಉಂಟಾಗುವ ಲಕ್ಷಣಗಳಿವೆ, ಔಷಧಿ ಸಿಂಪಡಿಸಿ ಎಂದು ಒಂದು ತಿಂಗಳ ಹಿಂದೆಯೇ ರೈತರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ವಿವಿಧ ಬೆಳೆಗಳಿಗೆ ಔಷಧಿ ಸಿಂಪಡಿಸಲು ಸಬ್ಸಿಡಿ ದರದಲ್ಲಿ ವಿತರಿಸಲಾಗಿದೆ. ಕೆಲ ರೈತರು ಔಷಧಿ ಸಿಂಪಡಿಸದಿರುವುದು ಕೀಟಬಾಧೆ ಉಂಟಾಗಿರಬಹುದು.
- ಸಂಗಮೇಶ ಗಡಾದ
(ಕೃಷಿ ಇಲಾಖೆ ಜಂಟಿ ನಿರ್ದೇಶಕ, ಧಾರವಾಡ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

