ಧಾರವಾಡ

ಆದರ್ಶ ವಿದ್ಯಾಲಯ ಅವ್ಯವಸ್ಥೆ ಆಗರ

Published On :

ಧಾರವಾಡ: ಗ್ರಾಮೀಣ ಪ್ರದೇಶದ ಮಕ್ಕಳು ಸಹ ಜಾಗೃತಿಕ ಸ್ಪರ್ಧೆ ಎದುರಿಸುವ ಉದ್ದೇಶದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಆದರ್ಶ ಹೆಸರಿನ ಮಾಧ್ಯಮಿಕ ಶಾಲೆಗಳನ್ನು ರಾಜ್ಯಾದ್ಯಂತ ಸರ್ಕಾರವೇ ಆರಂಭಿಸಿತು. ಆದರೆ, ಆ ಶಾಲೆಗಳಿಗೆ ನಿರ್ದಿಷ್ಟ ಸೌಲಭ್ಯಗಳನ್ನು ನೀಡದಿರುವುದರಿಂದ ಆ ಶಾಲೆಗಳ ಸ್ಥಿತಿ ಈಗ ಅಧೋಗತಿಗೆ ಇಳಿದಿದೆ.
ರಾಜ್ಯದ ವಿವಿಧೆಡೆ ಒಟ್ಟು 74 ಆದರ್ಶ ವಿದ್ಯಾಲಯಗಳಿದ್ದು, ಒಂದೊಂದು ಶಾಲೆಗಳ ಸ್ಥಿತಿ ಅಲ್ಲಿನ ವಿದ್ಯಾರ್ಥಿಗಳಿಗೇ ಗೊತ್ತು. ಈ ಪೈಕಿ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಲೋಕೋಪಯೋಗಿ ಇಲಾಖೆ ಒಡೆತನದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಶುರುವಾಗಿರುವ ಈ ಶಾಲೆ ಮೂಲಸೌಕರ್ಯಗಳಿಂದ ನಲುಗುತ್ತಿದೆ.
ಶಿಥಿಲಗೊಂಡ ಕಟ್ಟಡ: ಕಳೆದ 20 ದಿನಗಳಿಂದ ಜಿಟಿಜಿಟಿಯಾಗಿ ಸುರಿದ ಮಳೆಯಿಂದಾಗಿ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಅಭ್ಯಾಸಿಸಬೇಕಿದೆ. ಮಳೆಗಾಲದಲ್ಲಂತೂ ಕಟ್ಟಡ ಸೋರುವುದು ಸಾಮಾನ್ಯ. ಇದರಿಂದಾಗಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಹೆಂಚಿನ ಮೇಲ್ಛಾವಣಿ ಹೊಂದಿದ ಈ ಕಟ್ಟಡ ಸುಮಾರು ನೂರು ವರ್ಷದ ಹಳೆಯದು. ಕಟ್ಟಡ ನೋಡಿದರೆ ಇದು ಶಾಲೆಯೇ ಎಂದು ಹುಬ್ಬೇರಿಸುವುದು ಖಂಡಿತ.
ಇರುವುದು ಒಂದೇ ಶೌಚ: ಕಟ್ಟಡದಲ್ಲಿ ಒಟ್ಟು ಎಂಟು ಕೊಠಡಿಗಳಿದ್ದು, ಸದ್ಯ 6ರಿಂದ 9ನೇ ತರಗತಿವರೆಗೆ ಒಟ್ಟು 262 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ವರ್ಷ 10ನೇ ತರಗತಿ ಆರಂಭವಾಗುತ್ತದೆ. ಅಂತೆಯೇ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಶಿಕ್ಷಣ ನೀಡಲು ಏಳು ಸಹಶಿಕ್ಷಕರು ಹಾಗೂ ಓರ್ವ ನಿಯೋಜಿತ ಶಿಕ್ಷಕರಿದ್ದಾರೆ. ಆದರೆ, ಕೊಠಡಿಗಳ ಸ್ಥಿತಿ ಮಾತ್ರ ಸರಿಯಲ್ಲ. ಒಟ್ಟಾರೆಯಾಗಿ ತರಗತಿ ನಡೆಸುವ ಕೊಠಡಿಗಳು ಕುರಿ ದೊಡ್ಡಿಯಂತೆ ಕಾಣುತ್ತವೆ.
ಇದಕ್ಕಿಂತ ಬೇಸರದ ಸಂಗತಿ ಏನೆಂದರೆ, 262 ವಿದ್ಯಾರ್ಥಿಗಳು ಹಾಗೂ ಎಂಟು ಶಿಕ್ಷಕರಿಗೆ ಒಂದೇ ಶೌಚಾಲಯವಿದೆ. ಹಾಗಾಗಿ, ಈ ಶೌಚಾಲಯದಲ್ಲಿ ಮಹಿಳೆ ಹಾಗೂ ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದ ವಿದ್ಯಾರ್ಥಿಗಳು ಬಯಲನ್ನೇ ನೆಚ್ಚಬೇಕು. ವಿದ್ಯಾಲಯ ಆರಂಭವಾಗಿ ನಾಲ್ಕು ವರ್ಷಗಳಾದರೂ ಈ ಶಾಲೆಗೆ ಸುಸಜ್ಜಿತ ಕಟ್ಟಡದ ಭಾಗ್ಯ ಸಿಗುತ್ತಿಲ್ಲ.
ಇನ್ನೂ ಆರಂಭವಾಗಿಲ್ಲ ಕಾಮಗಾರಿ: ಕಳೆದ ಎರಡು ವರ್ಷಗಳ ಹಿಂದೆಯೇ, ವಿದ್ಯಾಲಯ ನಿರ್ಮಾಣಕ್ಕೆ ಇಲ್ಲಿನ ಜರ್ಮನ್ ಆಸ್ಪತ್ರೆ ಬಳಿಯ ಸರ್ಕಾರಿ ಮುದ್ರಾಣಾಲಯದ ಹಿಂದಿರುವ ನಾಲ್ಕು ಎಕರೆ ಜಮೀನು ಸರ್ಕಾರ ನಿಗದಿಪಡಿಸಿದೆ.
ಅಂತೆಯೇ, ಕಟ್ಟಡ ನಿರ್ಮಾಣಕ್ಕೆ ಸರ್ಕಾರವೂ ಅನುಮೋದನೆ ಸಲ್ಲಿಸಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿರುವುದು ಬಿಟ್ಟರೆ ಮತ್ಯಾವ ಕೆಲಸವಾಗಿಲ್ಲ. ರಾಜ್ಯದಲ್ಲಿನ ಎಲ್ಲ ಕಟ್ಟಡಗಳು ಏಕ ಮಾದರಿಯಲ್ಲಿ ನಿರ್ಮಿಸಬೇಕೆಂಬ ದೃಷ್ಟಿಯಿಂದ ನಾಗಾರ್ಜುನ ಕನ್‌ಸ್ಟ್ರಕ್ಷನ್‌ಗೆ ಟೆಂಡರ್ ನೀಡಿದೆ. ಆದರೆ, ಕಟ್ಟಡ ಮಾತ್ರ ನೆಲ ಬಿಟ್ಟು ಮೇಲೇಳುತ್ತಿಲ್ಲ.
ನಿಗದಿತ ಜಾಗದಲ್ಲಿ ಸುಮಾರು 30 ಗಿಡಗಳಿದ್ದು, ಒಂದು ವಿದ್ಯುತ್ ಕಂಬವಿದೆ. ಇವುಗಳನ್ನು ತೆರವುಗೊಳಿಸಲು ತಿಂಗಳಾನುಗಟ್ಟಲೇ ಸಮಯ ತೆಗೆದುಕೊಳ್ಳಲಾಗುತ್ತಿದೆ. ಈ ರೀತಿಯ ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದ್ದು, ಸುಸಜ್ಜಿತ ಕಟ್ಟಡಕ್ಕಾಗಿ ನಾವೆಲ್ಲರು ಪ್ರತಿಭಟನೆಯನ್ನೂ ಮಾಡಿದ್ದೇವೆ. ಧಾರವಾಡ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಸಹ ಈ ಕುರಿತು ಕಾಳಜಿ ವಹಿಸಿ ಶೀಘ್ರವಾಗಿ ನೂತನ ಕಟ್ಟಡ ಕಾಮಗಾರಿ ಆರಂಭಿಸಲಿ ಎನ್ನುವುದು ಪಾಲಕರ ಆಗ್ರಹ.
ಇಷ್ಟೊಂದು ಅವ್ಯವಸ್ಥೆ ಮಧ್ಯೆಯೂ ಶಾಲೆಯ ಪ್ರವೇಶದ ಸಂಖ್ಯೆ ಮಾತ್ರ ಇನ್ನುಳಿದ ಸರ್ಕಾರಿ ಶಾಲೆಗಳಿಂತ ಚೆನ್ನಾಗಿದೆ. ಪ್ರತಿ ವರ್ಷ ಉತ್ತಮ ಶಿಕ್ಷಕರ ನೇಮಕವಾಗುತ್ತಿದ್ದು, ಮೂಲಸೌಕರ್ಯ ಒದಗಿಸಿದರೆ ಯಾವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಈ ಶಾಲೆ ಕಮ್ಮಿಯಿಲ್ಲ ಎನ್ನುವ ಫಲಿತಾಂಶ ಈ ಶಾಲೆ ಮಕ್ಕಳಿಂದ ಬಂದರೂ ಅಚ್ಚರಿ ಏನಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕೂಡಲೇ ಕಾಮಗಾರಿ ಆರಂಭಿಸಲು ಮುತುವರ್ಜಿ ವಹಿಸಬೇಕಿದೆ.
- ಲೇಖನ - ಕಲ್ಮೇಶ ಪಟ್ಟಣದವರ
ಆದರ್ಶ ವಿದ್ಯಾಲಯಕ್ಕೆ ಕಟ್ಟಡದ ಕೊರತೆ ಬಿಟ್ಟರೆ ಮತ್ತೇನು ಸಮಸ್ಯೆ ಇಲ್ಲ. ಸರ್ಕಾರ ಜಾಗ ನಿಗದಿಗೊಳಿಸಿದ್ದು ಆರಂಭದಲ್ಲಿ ರು. 64 ಲಕ್ಷ ಅನುದಾನವೂ ಬಿಡುಗಡೆಯಾಗಿದೆ. ಇದೇ ಆ. 30ರೊಳಗೆ ಕಟ್ಟಡದ ಕಾಮಗಾರಿ ಆರಂಭಿಸಿ ಒಂದು ವರ್ಷದೊಳಗೆ ಕಟ್ಟಡ ಪೂರ್ಣವಾಗುವಂತೆ ಕಾಳಜಿ ವಹಿಸುತ್ತೇವೆ.
- ಎಸ್.ಬಿ. ಬಿಂಗೇರಿ (ಕ್ಷೇತ್ರ ಶಿಕ್ಷಣಾಧಿಕಾರಿ, ಧಾರವಾಡ ಗ್ರಾಮೀಣ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.