ಧಾರವಾಡ

ಬಾಂಧವರ ನೆನೆಪಿಸುವ ಪಂಚಮಿ

Published On :

ಕನ್ನಡಪ್ರಭ ವಾರ್ತೆ, ಕುಂದಗೋಳ, ಆ. 10
ನಾಗರ ಪಂಚಮಿ ಹಬ್ಬವ ಬಂತ
ಜೋಕಾಲಿ ನಾವ್ ಆಡೋಣ ಅಂತ
ಬಾಬಾರ ಗೆಳತಿ ನೀ, ಸುಮ್ಮನೆ ಯಾಕ ಕುಳತಿ...!
ಎಂದು ಕವಿಯೊಬ್ಬ ನಾಗರ ಪಂಚಮಿ ಹಬ್ಬದಲ್ಲಿ ಆಡುವ ಜೋಕಾಲಿ ಕುರಿತು ಹಾಡಿದ್ದಾನೆ. ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಹಬ್ಬ, ಹರಿದಿನಗಳು ಜರುಗುತ್ತವೆ. ಪ್ರತಿ ಹಬ್ಬವೂ ತನ್ನದೆಯಾದ ವೈಶಿಷ್ಟ್ಯ ಪೂರ್ಣದಿಂದ ಕೂಡಿರುತ್ತವೆ.
ಅಣ್ಣ-ತಂಗಿಯರ ಸಂಭ್ರಮ: ನಾಗರ ಪಂಚಮಿ ಹಬ್ಬದಲ್ಲಿ ಅಣ್ಣ ತನ್ನ ತಂಗಿಯನ್ನು ಕರೆಯಲೋಸುಗ ಆಕೆಯ ಗಂಡನ ಮನೆಗೆ ಸಡಗರ, ಸಂಭ್ರಮದಲ್ಲಿ ಹೋಗಿ ಕರೆತರುವ ಆ ಸಂತಸ ಹೇಳತೀರದು. ತಂಗಿ ಬಂದು ತನ್ನ ತವರಿನ ತೊಟ್ಟಿಲಾದ ಅಣ್ಣ ಕಟ್ಟಿದ ಜೋಕಾಲಿಯಲ್ಲಿ ಜೀಕಿ-ಜಗಿದು ಮೇಲಕ್ಕೇರುತ ಹರುಷ ಪಟ್ಟರೆ ಅಣ್ಣ ಅದನ್ನು ನೋಡಿ ಆನಂದಿಸುವ ಆ ದೃಶ್ಯ ನೋಡಲೆರಡು ಕಣ್ಣು ಸಾಲದು.
ಜೋಕಾಲಿ ವಿಧಗಳು: ಜೋಕಾಲಿ ಆಟ ತನ್ನದೆಯಾದ ವೈಶಿಷ್ಟ್ಯವನ್ನು ಹೊಂದಿದ್ದು, ಅತ್ತಿಂದಿತ್ತ ಇತ್ತಿಂದತ್ತ ಸಾಗುತ್ತ ತನ್ನ ಮೇಲೆ ಕುಳಿತ ವ್ಯಕ್ತಿಗೆ ಸಂತಸವನ್ನು ತಂದುಕೊಡುತ್ತದೆ. ಜೋಕಾಲಿಯಲ್ಲಿ ಅನೇಕ ಬಗೆಗಳಿದ್ದು, ಮರದ ಜೋಕಾಲಿ, ಮನೆಯ ಜೋಕಾಲಿ, ಸಾರ್ವಜನಿಕರ ಜೋಕಾಲಿಗಳು ಮುಖ್ಯವಾಗಿವೆ.
ಬಂಧು, ಬಾಂಧವರ ನೆನಪು: ಜೋಕಾಲಿಗಳಲ್ಲಿಯೇ ನಮ್ಮ ಹೆಣ್ಣು ಮಕ್ಕಳು ನಾಗದೇವನಿಗೆ ಪೂಜಿಸಿ ಒಣಗೊಬ್ಬರಿ ಅರ್ಧ ಬಟ್ಟಲಲ್ಲಿ ಹಾಲು ಹಾಕುತ್ತ ಅಜ್ಜನ ಪಾಲು, ಅಮ್ಮನ ಪಾಲು, ಅಪ್ಪನ ಪಾಲು, ಅಣ್ಣನ ಪಾಲು ಅವರ ಪಾಲು, ಇವರ ಪಾಲು ದೇವರ ಪಾಲು ಎನ್ನುತ್ತ ನಾಗದೇವನಿಗೆ ಭಕ್ತಿ, ಭಾವದಿಂದ ಪೂಜೆ ಸಲ್ಲಿಸುತ್ತಾರೆ.
ತಟ್ಟೆಯಲ್ಲಿನ ವಿವಿಧ ಸಿಹಿ ಉಂಡಿಗಳು, ತಂಬಿಟ್ಟು ಅಳ್ಳುಗಳ ನೈವೇದ್ಯ ಅರ್ಪಿಸಿ ಮನೆಯಲ್ಲಿ ಸಹೋದರ-ಸಹೋದರಿಯರ ಜೊತೆಗೆ ಸಿಹಿ ಭೋಜನ ಸವಿದು ಇಡೀ ಸಂಜೆಯಲ್ಲಿ ಬಣ್ಣದ ಬಟ್ಟೆ ಧರಿಸಿ ಅಣ್ಣ ಕೊಟ್ಟ ಸೀರೆ ಉಟ್ಟು, ಹಸಿರು ಬಳೆ ತೊಟ್ಟು ಓಣಿಯ ಗೆಳತಿಯರೊಂದಿಗೆ ಮರದ ಜೋಕಾಲಿಗಾಗಿ ಜೀಕಿಯಾಡುವ ಸಂಭ್ರಮ ನೋಡಲೆಷ್ಟು ಚನ್ನ....!
ಸಂತ ಶಿಶುನಾಳ ಶರೀಫರು ನಾಗರ ಪಂಚಮಿ ಹಬ್ಬ ಕುರಿತು ತಮ್ಮ ಜಾನಪದ ಶೈಲಿಯಲ್ಲಿ ಪಂಚಮಿ ಹಬ್ಬ ತೀರಿತೆ ಗೆಳತಿ,
ಯಾರಿಗೆ ಹೇಳಲಿ ಅವ್ವಕ್ಕನಾಗಿ
ಜೋಕಾಲಿ ಏರಿ, ಕೈ ಬೀಸಿ ಕರೆಯುವ
ಕೊಬ್ಬರಿ ತಂಬಿಟ್ಟು ಅರಳಿಟ್ಟು ಮುಡುಪಿಟ್ಟು
ನಾಗಪ್ಪನಿಗೆ ಹಾಲು ಹೊಯ್ಯರಿ..... ಹೀಗೆ ಹಾಡಿ ಹೊಗಳಿದ್ದಾರೆ.
ಇಂಥ ಸಂಭ್ರಮ ಇಂದಿನ ನಾಗರ ಪಂಚಮಿಯಲ್ಲಿ ಕಾಣುವುದು ಅಪರೂಪವಾಗಿದೆ. ಕೆಲವೇ ಕೆಲವು ಗ್ರಾಮೀಣ ಪ್ರದೇಶದ ಮಹಿಳೆಯರು ಪಂಚಮಿ ಜೋಕಾಲಿ ಆಡುವ ದೃಶ್ಯ ಕಾಣಬಹುದಾಗಿದೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಮನುಷ್ಯರು ಯಂತ್ರದಂತೆ ವರ್ತಿಸುತ್ತಿದ್ದು, ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬಗಳು ಈಗ ಕಣ್ಮರೆಯಾಗುತ್ತಿದ್ದು, ಹಬ್ಬದ ದಿನಗಳಲ್ಲಿ ಆಡುವ ಆಟಗಳೂ ಈಗ ಕಣ್ಣಂಚಿನಿಂದ ಮರೆಯಾಗುತ್ತಿವೆ. ಆ ಹಬ್ಬದ ಸಿಹಿ ಊಟವೂ ಇಲ್ಲದಾಗಿದೆ.

- ಶೀತಲ ಎಸ್. ಮುರಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.