ಸಚಿವ ಸಂತೋಷ್ ಲಾಡ್ಗೆ ರಜತ ಪದಕ
ಕಲಘಟಗಿ: ಆ. 15ರಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಜತ ಪದಕ ನೀಡಿ ಗೌರವಿಸಲಿದ್ದಾರೆ. ಇತ್ತೀಚಿಗೆ ಉತ್ತರಾಖಂಡ ರಾಜ್ಯದಲ್ಲಿ ಪ್ರವಾಹಕ್ಕೆ ಸಿಲುಕಿದ ಕರ್ನಾಟಕದ ಯಾತ್ರಾರ್ಥಿಗಳನ್ನು ರಕ್ಷಿಸಲು ಅವಿರತ ಸೇವೆ ಮಾಡಿದ್ದನ್ನು ಗಮನಿಸಿ ಅಂದು ಬೆಂಗಳೂರಿನ ಮಾಣಿಕ ಷಾ ಕವಾಯತು ಮೈದಾನದಲ್ಲಿ ಸ್ವತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ರಜತ ಪದಕ ನೀಡಿ ಗೌರವಿಸಲಿದ್ದಾರೆಂದು ಸಚಿವರ ಕಚೇರಿ ಮೂಲಗಳು ತಿಳಿಸಿವೆ.
ಶಸ್ತ್ರ ಚಿಕಿತ್ಸೆ ಶಿಬಿರ
ಧಾರವಾಡ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧೆಡೆ ಉದರ ದರ್ಶಕ ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಂಡಿದೆ. ಅಳ್ನಾವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ. 14, ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಆ. 16ರಂದು, ಕುಂದಗೋಳ ತಾಲೂಕು ಆಸ್ಪತ್ರೆ ಹಾಗೂ ಗುಡಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 19ರಂದು, ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ 22ರಂದು, ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ 23ರಂದು ಹಾಗೂ ಚಿಟಗುಪ್ಪಿ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಲಿಕೆಯಲ್ಲಿ ಧ್ವಜಾರೋಹಣ
ಧಾರವಾಡ: ಹು-ಧಾ ಮಹಾನಗರ ಪಾಲಿಕೆಯ ಧಾರವಾಡದ ಆಡಳಿತ ಕಚೇರಿಯಲ್ಲಿ ಆ. 15ರಂದು ಮುಂಜಾನೆ 8.15ಕ್ಕೆ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಜರುಗಲಿದೆ. ಅಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಧ್ವಜಾರೋಹಣ ನೆರವೇರಿಸುವರು ಎಂದು ಪಾಲಿಕೆಯ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್ ಮನವಿ ಮಾಡಿದ್ದಾರೆ.
ಮಹಿಳೆ ಆತ್ಮಹತ್ಯೆ: ವ್ಯಕ್ತಿ ಬಂಧನ
ಹುಬ್ಬಳ್ಳಿ: ವರದಕ್ಷಿಣೆ ತರುವಂತೆ ಪೀಡಿಸಿ ಮಹಿಳೆಯ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣನಾಗಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸುನೀಲ ಪಿ. ದೇಶಪಾಂಡೆ ಬಂಧಿತ ವ್ಯಕ್ತಿ. ಇಲ್ಲಿನ ನವನಗರದ 13ನೇ ಕ್ರಾಸ್ ನಿವಾಸಿ ಹನುಮಂತರಾವ್ ಕುಲಕರ್ಣಿ ಅವರ ಮಗಳು ಸ್ವಪ್ನಾ ಅಲಿಯಾಸ್ ನಿಧಿ ಅವರನ್ನು ಸುನೀಲ ದೇಶಪಾಂಡೆಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಪಡೆದಿದ್ದರೂ ಮತ್ತೆ ತರುವಂತೆ ಪೀಡಿಸಿದ್ದ ಹಿನ್ನೆಲೆಯಲ್ಲಿ ಸೋಮವಾರ ಸ್ವಪ್ನಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಜೂಜಾಟ: 8 ಬಂಧನ
ಧಾರವಾಡ: ತಾಲೂಕಿನ ಕೋಟೂರು ಗ್ರಾಮದಲ್ಲಿ ಜೂಜಾಡುತ್ತಿದ್ದ ಎಂಟು ಜನರನ್ನು ಗರಗ ಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಗ್ರಾಮದ ಉಡಚಮ್ಮನ ಗುಡಿ ಬಳಿಯ ಖಾಲಿ ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಸಂದರ್ಭ ದಾಳಿ ನಡೆಸಿದ ಪೊಲೀಸರು ಬಂಧಿತರಿಂದ ರು. 8,135 ನಗದು ವಶಪಡಿಸಿಕೊಂಡಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

