ಆರೋಗ್ಯವಾಣಿಗೆ ನಿತ್ಯ 2 ಸಾವಿರ ಕರೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 17
'ಸುಲಭದಲ್ಲಿ ಆರೋಗ್ಯ' 104 ಆರೋಗ್ಯವಾಣಿ ಶುರುವಾಗಿ ಶನಿವಾರಕ್ಕೆ ಬರೋಬ್ಬರಿ 58 ದಿನಗಳಾಗಿವೆ. ಇಂತಹದ್ದೊಂದು ಸಹಾಯವಾಣಿ ಇದೆ ಎಂಬ ಕಲ್ಪನೆ ಬಹುತೇಕ ಜನಸಾಮಾನ್ಯರಲ್ಲಿ ಇಲ್ಲದಿದ್ದರೂ ನಿಧಾನವಾಗಿ ಜನರ ಮನದಲ್ಲಿ ನೆಲೆಯೂರುವ ಪ್ರಯತ್ನ ಮಾಡುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಮ್ಮುಖದಲ್ಲಿ ವಿಧ್ಯುಕ್ತವಾಗಿ ತನ್ನ ಕೆಲಸ ಆರಂಭಿಸಿದ 104 ಆರೋಗ್ಯವಾಣಿ ಸಹಾಯ ಕೇಂದ್ರಕ್ಕೆ ಈಗ ಪ್ರತಿದಿನ ಏನಿಲ್ಲವೆಂದರೂ ಎರಡರಿಂದ ಎರಡೂವರೆ ಸಾವಿರ ಕರೆಗಳು ಬರುತ್ತಿದ್ದು, ಈ ಎಲ್ಲ ಕರೆಗಳಿಗೆ ಆರೋಗ್ಯವಾಣಿ ಸಿಬ್ಬಂದಿ ಉತ್ತರಿಸುತ್ತಿದ್ದಾರೆ.
104 ಡಯಲ್ ಮಾಡಿ ಸಣ್ಣ ಪುಟ್ಟ ಆರೋಗ್ಯದ ತೊಂದರೆಗಳು ಮತ್ತು ದೀರ್ಘಕಾಲೀನ ಕಾಯಿಲೆಗಳಿಗೆ ಆಪ್ತ ಸಲಹೆಗಳನ್ನು ಪಡೆಯುತ್ತಿದ್ದಾರೆ. ಕೆಲವರು ವಾತಾವರಣದಲ್ಲಿ ಆಗುವ ಏಕಾಏಕಿ ಬದಲಾವಣೆಯ ಪರಿಣಾಮವಾಗಿ ಬರುವ ಶೀತ, ನೆಗಡಿ ಮತ್ತು ಜ್ವರಕ್ಕೆ ಸಂಬಂಧಿಸಿದಂತೆ ಫೋನ್ ಮುಖಾಂತರ ವೈದ್ಯಕೀಯ ಸಲಹೆ ಮತ್ತು ತೆಗೆದುಕೊಳ್ಳಬೇಕಾದ ಮಾತ್ರೆಗಳ ಬಗ್ಗೆ ಮಾಹಿತಿ ಪಡೆದರೆ ಇನ್ನೂ ಕೆಲವರು ದೀರ್ಘಕಾಲೀನ ಕಾಯಿಲೆಗಳಾದ ಮಧುಮೇಹ, ರಕ್ತದೊತ್ತಡ, ಅಸ್ತಮಾ, ಮಂಡಿನೋವು ಸೇರಿದಂತೆ ಇನ್ನಿತರ ಕಾಯಿಲೆಗಳ ಬಗ್ಗೆ ಮಾಹಿತಿ ಪಡೆದು ಅನುಸರಿಸಬೇಕಾದ ಆಹಾರ ವಿಧಾನ, ತೆಗೆದುಕೊಳ್ಳಬೇಕಾದ ಮಾತ್ರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯಬಹುದಾದ ಚಿಕಿತ್ಸೆಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.
ಆದಾಗ್ಯೂ ಕೂಡ ಆರೋಗ್ಯವಾಣಿಗೆ ಮಾನಸಿಕ ಕಾಯಿಲೆಗಳಿಗೆ ಸಂಬಂಧಿಸಿದಂತೆ ಕರೆಗಳು ಬರುತ್ತಿರುವುದು ಅತಿ ಕಡಿಮೆಯೇ.
ಹೀಗಿದೆ ಕಾರ್ಯ ವೈಖರಿ: ಹುಬ್ಬಳ್ಳಿ ಐಟಿ ಪಾರ್ಕ್ನಲ್ಲಿ ಆರಂಭವಾಗಿರುವ ಆರೋಗ್ಯವಾಣಿ ಸಹಾಯ ಕೇಂದ್ರದಲ್ಲಿ ಒಂದು ನೂರು ಸಿಬ್ಬಂದಿ ಕೆಲಸ ಮಾಡುವಷ್ಟು ಸಾಮರ್ಥ್ಯ ಹೊಂದಿದ್ದು, ಮೂರು ಹಂತದಲ್ಲಿ ವೈದ್ಯಕೀಯ ಸಲಹೆಗಳನ್ನು ನೀಡಲಾಗುತ್ತಿದೆ. ಜನಸಾಮಾನ್ಯರಿಂದ ಬರುವ ಕರೆಗಳನ್ನು ಮೊದಲು ಆರ್ಓ, ಎಚ್ಓ ಮತ್ತು ಎಂಓ ಎಂದು ಮೂರು ಶ್ರೇಣಿಯ ಸಿಬ್ಬಂದಿ ಇರುತ್ತಾರೆ. ದಿನದ 24 ಗಂಟೆ ನಿರಂತರವಾಗಿ ಕಾರ್ಯನಿರ್ವಹಿಸುವ ಆರೋಗ್ಯವಾಣಿ ಕೇಂದ್ರದಲ್ಲಿ ಒಂದು ಪಾಳಿಯಲ್ಲಿ ಕನಿಷ್ಠ 10 ವೈದ್ಯಾಧಿಕಾರಿಗಳು, 30ಕ್ಕಿಂತ ಹೆಚ್ಚು ಆರ್ಓ ಮತ್ತು ಎಚ್ಓಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಆರೋಗ್ಯವಾಣಿ ಸಿಬ್ಬಂದಿ ಸಾಮರ್ಥ್ಯವನ್ನು 300ಕ್ಕೆ ಏರಿಸುವ ಗುರಿ ಸರ್ಕಾರದ ಮುಂದಿದೆ.
ಸಾಮಾನ್ಯ ಮಾಹಿತಿ ಅಥವಾ ಸಣ್ಣಪುಟ್ಟ ಕಾಯಿಲೆಗಳಿಗೆ ಆರ್ಓ ಮತ್ತು ಎಚ್ಓ ಮಾಹಿತಿ ನೀಡಿದರೆ, ತೀರ ಗಂಭೀರ ಎನ್ನಿಸುವಂತಹ ಅಥವಾ ಆಪ್ತ ಸಮಾಲೋಚನೆ ಅಗತ್ಯವಿರುವಂತಹ ಕರೆಗಳಿಗೆ ಕರ್ತವ್ಯದಲ್ಲಿರುವ ವೈದ್ಯಾಧಿಕಾರಿ (ಮೆಡಿಕಲ್ ಆಫೀಸರ್) ಸ್ಪಂದಿಸುತ್ತಾರೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಆರೋಗ್ಯವಾಣಿಯಲ್ಲಿ ವೈದ್ಯಾಧಿಕಾರಿ ಆಗಿರುವ ಡಾ. ಪರಶು ಅವರು, ಅವಘಡಕ್ಕೆ ಸಿಲುಕಿ ಪ್ರಾಣ ಹೋಗುವಂತಹ ಸ್ಥಿತಿಯಲ್ಲೂ ಕೂಡ ಆರೋಗ್ಯವಾಣಿ ನೆರವಾಗಬಲ್ಲದು. ಸ್ಥಳದಲ್ಲಿರುವ ವ್ಯಕ್ತಿ 104ಕ್ಕೆ ಕರೆ ಮಾಡಿದರೆ ತಕ್ಷಣವೇ ಆತನಿಗೆ ಜೀವರಕ್ಷಣೆಗೆ ಅನುಸರಿಸಬೇಕಾದ ವಿಧಾನಗಳನ್ನು ಫೋನ್ ಮುಖಾಂತರ ಕೂಡ ತಿಳಿಸಿದರೆ ವ್ಯಕ್ತಿಯೊಬ್ಬನ ಜೀವ ಉಳಿಯಬಲ್ಲುದು. ಇಂತಹ ಅನೇಕ ಪ್ರಕರಣಗಳಲ್ಲಿ ಫೋನ್ ಮುಖಾಂತರ ಸಲಹೆ ನೀಡಿ ಜೀವ ಉಳಿಸಿದ್ದಿದೆ. ತಕ್ಷಣಕ್ಕೆ ಆರೋಗ್ಯ ಕವಚ ಆ್ಯಂಬುಲೆನ್ಸ್ ತಲುಪದ ಸ್ಥಳಗಳಲ್ಲಿ ಆರೋಗ್ಯವಾಣಿ ಜೀವ ಉಳಿಸುವಲ್ಲಿ ಯಶಸ್ವಿಯಾಗುತ್ತದೆ ಎನ್ನುತ್ತಾರೆ.
ಬಡವರಿಗೆ ಅನುಕೂಲ: ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದಕ್ಕೆ ನೂರು, ಐವತ್ತು ರು.ಗಳನ್ನು ವೈದ್ಯರಿಗೆ ತೆರುವ ಬದಲು ಉಚಿತವಾಗಿರುವ ಆರೋಗ್ಯವಾಣಿಗೆ ಕರೆ ಮಾಡಿದರೆ ಬಡವರ ಎಷ್ಟೊ ಹಣ ಉಳಿಯುತ್ತದೆ. ಅಲ್ಲದೆ, ತೀರ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೂ ತಜ್ಞ ವೈದ್ಯರು ಮಾಹಿತಿ ನೀಡುತ್ತಿರುವುದರಿಂದ ಅಂತಹ ರೋಗಿಗಳ ಸಮಯ ಕೂಡ ಉಳಿದು ರೋಗಿ ಬೇಗನೆ ಗುಣಮುಖನಾಗಬಹುದು ಎನ್ನುತ್ತಾರೆ ಡಾ. ಪರಶು.
ಈಗಾಗಲೇ ಆಂಧ್ರಪ್ರದೇಶ, ನಾಗಾಲ್ಯಾಂಡ್ ಮತ್ತು ಆಸ್ಸಾಂಗಳಲ್ಲಿ ಆರೋಗ್ಯವಾಣಿ ಕಾರ್ಯಾಚರಣೆ ಮಾಡುತ್ತಿದ್ದು, ಜಗತ್ತಿನ ಸಂಪರ್ಕವಿಲ್ಲದ ಗುಡ್ಡಗಾಡು ಪ್ರದೇಶಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಪಿರಾಮಲ್ ಫಾರ್ಮಾಸ್ಯೂಟಿಕಲ್ಸ್ನ ಪಿರಾಮಲ್ ಫೌಂಡೇಷನ್ ಸಹಯೋಗದಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ಆರೋಗ್ಯವಾಣಿ ನಿಧಾನವಾಗಿ ಜನರ ಮನಸ್ಸಿನಲ್ಲಿ ಮನೆ ಮಾಡುವ ಮೂಲಕ 'ಸುಲಭದಲ್ಲಿ ಮನೆ ಬಾಗಿಲಿಗೆ ಆರೋಗ್ಯ' ತತ್ವ ಅಕ್ಷರಶಃ ತಲುಪುತ್ತಿದೆ. ಆದರೆ, ಈ ನಿಟ್ಟಿನಲ್ಲಿ ಗ್ರಾಮೀಣ ಜನರಲ್ಲಿ ಈ ಬಗ್ಗೆ ತಿಳಿವಳಿಕೆ ಮೂಡಬೇಕಾದ ಅಗತ್ಯವಿದೆ.
ಸತೀಶ ಪಾಗಾದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

