ಧಾರವಾಡ

ವಿಧಾನ ಪರಿಷತ್: ಶೇ.99.59 ಮತದಾನ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 22
ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಗುರುವಾರ ನಡೆದ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ. 99.59ರಷ್ಟು ಮತದಾನವಾಗಿದೆ.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತುರುಸಾಗಿ ನಡೆದ ಮತದಾನ, ಮಧ್ಯಾಹ್ನದ ನಂತರ ನಿಧಾನಗೊಂಡಿತು. ಮಧ್ಯಾಹ್ನ ಸುಮಾರು 3 ಗಂಟೆಯವರೆಗೆ ಶೇ. 65ಕ್ಕೂ ಹೆಚ್ಚು ಮತದಾನ ನಡೆದಿತ್ತು. ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಜನಪ್ರತಿನಿಧಿಗಳು ಉತ್ಸಾಹದಿಂದಲೇ ಮತದಾನದಲ್ಲಿ ತೊಡಗಿಕೊಂಡಿದ್ದರು. ಧಾರವಾಡ ಜಿಲ್ಲೆಯಲ್ಲಿ ಶೇ. 99.38, ಗದಗ ಜಿಲ್ಲೆಯಲ್ಲಿ ಶೇ. 99.37 ಹಾಗೂ ಹಾವೇರಿ ಜಿಲ್ಲೆಯಲ್ಲಿ ಶೇ. 99.85ರಷ್ಟು ಮತದಾನವಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು, ಗದಗ ಜಿಲ್ಲೆಯ ಮುಂಡರಗಿ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಹಾವೇರಿ ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ಶೇ. 100ರಷ್ಟು ಮತದಾನವಾಗಿದೆ.
ಲೆಕ್ಕಾಚಾರ: ಉಪ ಚುನಾವಣೆಯ ಮತ ಕ್ಷೇತ್ರ ವ್ಯಾಪ್ತಿಯ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಗ್ರಾಪಂ, ಪುರಸಭೆ, ಪಪಂ, ನಗರಸಭೆ, ತಾಪಂ, ಜಿಪಂ, ಮಹಾನಗರ ಪಾಲಿಕೆಗಳ ಕಚೇರಿಗಳಲ್ಲಿ ಮತದಾರರಾದ ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ಶಾಸಕ, ಸಂಸದರು ಮತ ಚಲಾಯಿಸಿದರು. ಮೂರು ಜಿಲ್ಲೆಗಳಲ್ಲಿರುವ ಒಟ್ಟು 7,316 ಮತದಾರರಲ್ಲಿ ಬಹುತೇಕರು ಮಧ್ಯಾಹ್ನದೊಳಗೆ ಮತ ಚಲಾಯಿಸಿ, ಚುನಾವಣೆ ಫಲಿತಾಂಶದ ಲೆಕ್ಕಾಚಾರದಲ್ಲಿ ನಿರತರಾಗಿದ್ದುದು ಕಂಡುಬಂತು.
ಶಾಸಕ ಹಾಗೂ ಮಾಜಿ ಸಿಎಂ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ಬಸವರಾಜ ಹೊರಟ್ಟಿ ಮಹಾನಗರ ಪಾಲಿಕೆ ಕಚೇರಿಯಲ್ಲಿ, ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಧಾರವಾಡ ತಾಪಂ ಕಚೇರಿಯಲ್ಲಿ ಮತದಾನ ಮಾಡಿದರು.
26ರಂದು ಮತ ಎಣಿಕೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ ಗದಗ ತಾಪಂನಲ್ಲಿ, ಶಾಸಕರಾದ ಬಿ.ಆರ್. ಯಾವಗಲ್ ನರಗುಂದದಲ್ಲಿ, ರಾಮಕೃಷ್ಣ ದೊಡ್ಡಮನಿ ಮುಂಡರಗಿಯಲ್ಲಿ, ಸಿ.ಎಸ್. ಪಾಟೀಲ ರೋಣದಲ್ಲಿ ಮತ ಚಲಾಯಿಸಿದರು. ಸಂಸದ ಶಿವಕುಮಾರ ಉದಾಸಿ ಹಾವೇರಿ ತಾಪಂ ಕಚೇರಿಯಲ್ಲಿ, ಶಾಸಕ ಹಾಗೂ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ, ಶಾಸಕರಾದ ರುದ್ರಪ್ಪ ಲಮಾಣಿ ಹಾವೇರಿಯಲ್ಲಿ, ಬಸವರಾಜ ಶಿವಣ್ಣವರ ಹಾಗೂ ಸೋಮಣ್ಣ ಬೇವಿನಮರದ ಶಿಗ್ಗಾಂವಿಯಲ್ಲಿ, ವಿಧಾನ ಪರಿಷತ್ ಸದಸ್ಯ ಯು.ಬಿ. ಬಣಕಾರ ಹಾನಗಲ್‌ನಲ್ಲಿ ಮತದಾನ ಮಾಡಿದರು.
ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಅವರಿಗೆ ರಾಜ್ಯ ರಾಜಕೀಯದಲ್ಲಿ ನೆಲೆ ಒದಗಿಸಲು ಈ ಉಪ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಮತದಾನದ ನಂತರ ಮತಪೆಟ್ಟಿಗೆಗಳನ್ನು ಮತ ಎಣಿಕೆ ಸ್ಥಳವಾದ ಧಾರವಾಡ ಕೃಷಿ ವಿವಿಯ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದ್ದು, ಆ. 26ರಂದು ಮತ ಎಣಿಕೆ ನಡೆಯಲಿದೆ.

ನಾನು ಬೆಂಗಳೂರಿನಿಂದ ಗುರುವಾರ ಬೆಳಗ್ಗೆ ನೇರವಾಗಿ ಹುಬ್ಬಳ್ಳಿಗೆ ಬಂದು ಮತ ಚಲಾಯಿಸಿದ್ದೇನೆ. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ವಿಧಾನ ಪರಿಷತ್ ಉಪ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗಾಗಿ ನಡೆಸಿದ್ದ ಪ್ರಚಾರದ ವೈಖರಿಯ ಮಾಹಿತಿ ನನಗೆ ತಿಳಿದಿಲ್ಲ. ಅದಲ್ಲದೆ ಅವಿಭಜಿತ ಧಾರವಾಡ ಜಿಲ್ಲೆಯಾದ್ಯಂತ ಶೇ. 99ರಷ್ಟು ಮತದಾನವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಚುನಾವಣೆ ಫಲಿತಾಂಶದ ಬಗ್ಗೆ ನಿಖರವಾಗಿ ಪ್ರತಿಕ್ರಿಯೆ ನೀಡುವುದು ಕಷ್ಟಕರ.
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯರು

ಮೂರೂ ಜಿಲ್ಲೆಗಳ ಕಾಂಗ್ರೆಸ್ ಶಾಸಕರು, ಸಚಿವರು ಹಾಗೂ ಕಾರ್ಯಕರ್ತರು ಹಗಲಿರುಳು ಕೆಲಸ ಮಾಡಿದ್ದಾರೆ. ಪ್ರಚಾರಕ್ಕೆ ಹೋದಾಗಲೂ ಹೆಚ್ಚಿನ ಜನಪ್ರತಿನಿಧಿಗಳು ತಮಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಹರಸಿದ್ದಾರೆ. ಇದೆಲ್ಲದರ ಫಲವಾಗಿ ಈ ಉಪ ಚುನಾವಣೆಯಲ್ಲಿ ನಾನು ಬಹುಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ರಾಜ್ಯ ಕಾಂಗ್ರೆಸ್ ಸರ್ಕಾರದ ಜನೋಪಯೋಗಿ ಯೋಜನೆ, ಅಭಿವೃದ್ಧಿ ಕಾರ್ಯಗಳೂ ನಾನು ಚುನಾವಣೆಯಲ್ಲಿ ಜಯ ಸಾಧಿಸಲು ಸಹಕಾರಿಯಾಗಲಿವೆ.
-ನಾಗರಾಜ ಛಬ್ಬಿ, ಕಾಂಗ್ರೆಸ್ ಅಭ್ಯರ್ಥಿ, ಅವಿಭಜಿತ ಧಾರವಾಡ ಜಿಲ್ಲೆಯ ವಿಪ ಕ್ಷೇತ್ರ.

 ಸುಮಾರು 1,500ರಿಂದ 2 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ. 5 ಸಾವಿರಕ್ಕೂ ಹೆಚ್ಚು ಮತಗಳು ನನಗೆ ಬಂದಿರುವ ಸಾಧ್ಯತೆ ಇದೆ. ಹಾವೇರಿಯಲ್ಲಿ ಬಿಜೆಪಿ, ಕೆಜೆಪಿ ಮುಖಂಡರು ಪ್ರಚಾರ ನಡೆಸಿದರೆ, ಗದಗನಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನವರೂ ಕೈಜೋಡಿಸಿದರು. ಧಾರವಾಡದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾವೇರಿಯಲ್ಲಿ ಹೆಚ್ಚಿನ ಮತಗಳು ನನಗೇ ಲಭಿಸಿರುವ ವಿಶ್ವಾಸ ಇದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನನ್ನ ಗೆಲುವಿಗಾಗಿ ಹಗಲಿರುಳು ದುಡಿದಿದ್ದಾರೆ.
-ಪ್ರದೀಪ ಶೆಟ್ಟರ್,ಬಿಜೆಪಿ ಅಭ್ಯರ್ಥಿ, ಅವಿಭಜಿತ ಧಾರವಾಡ ಜಿಲ್ಲೆಯ ವಿಪ ಕ್ಷೇತ್ರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.