ಧಾರವಾಡ

ಮಕ್ಕಳನ್ನು ನೋಡಿ ಕಲೀರಿ...

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 30
ದೊಡ್ಡವರೆನಿಸಿಕೊಂಡವರು ಮಕ್ಕಳಿಗೆ ಮಾದರಿಯಾಗಬೇಕು. ಆದರೆ, ಮಕ್ಕಳೇ ದೊಡ್ಡವರಿಗೆ ಮಾದರಿಯಾಗುವಂತಹ ಕೆಲಸ ಮಾಡಿದರೆ..! ಇಂತಹ ಸಂದರ್ಭದಲ್ಲಿ ಮಕ್ಕಳನ್ನ ನೋಡಿ ಕಲೀರಿ ಎಂದು ಹೇಳಬಹುದಲ್ಲವೇ?
ಹೌದು.., ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದ ಕಸ ವಿಲೇವಾರಿ ಹೇಗೆ ಆಗಬೇಕು ಎನ್ನುವುದನ್ನು ತಮ್ಮ ವಿನೂತನ ಚಿಂತನಾ ಶೈಲಿಯಿಂದ ಜನರಿಗೆ ತೋರಿಸಿಕೊಟ್ಟಿದ್ದಾರೆ.
ವಿಶ್ವೇಶ್ವರಯ್ಯ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಸುತ್ತಲೂ ಬೀಳುತ್ತಿದ್ದ ಕಸದಿಂದಾಗಿ ಆ ಶಾಲೆಯ ವಿದ್ಯಾರ್ಥಿಗಳಿಗೆ ಊಟ ಮಾಡಲಿಕ್ಕೂ ಸ್ವಚ್ಛ ವಾತಾವರಣ ಇರಲಿಲ್ಲ. ಶಾಲೆ ಹತ್ತಿರ ಇರಿಸಲಾಗಿದ್ದ ಕಂಟೇನರ್ ಪ್ರತಿದಿನ ತುಂಬಿ ತುಳುಕಿ ಅದರಿಂದ ದುರ್ವಾಸನೆ ಸಹಿಸಲಾರದೆ ಆಟ ಊಟ ಮತ್ತು ಪಾಠ ಈ ಮೂರು ಸಂಗತಿಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿತ್ತು. ಪ್ರತಿದಿನ ಕಂಟೇನರ್ ಸ್ವಚ್ಛ ಮಾಡಬೇಕಿದ್ದ ಪೌರಕಾರ್ಮಿಕರು ಸ್ವಚ್ಛ ಮಾಡುತ್ತಿರಲಿಲ್ಲ. ಹೀಗಾಗಿ ಕಂಟೇನರ್ ಕಸ ಬೀದಿಗೆ ಬಂದು ಬೀಳುತ್ತಿತ್ತು. ಬೀದಿಗೆ ಬಿದ್ದ ಕಸ ಹಂದಿ ನಾಯಿಗಳಿಂದಾಗಿ ಇಡೀ ರಸ್ತೆ ತುಂಬ ವ್ಯಾಪಿಸುತ್ತಿತ್ತು. ಇದರ ಜೊತೆಗೆ ದುರ್ವಾಸನೆ ಸೇರಿ ಮಧ್ಯಾಹ್ನದ ಬಿಸಿಯೂಟ ಮಾಡಲು ಕೂಡ ಮಕ್ಕಳು ಪರದಾಡುತ್ತಿದ್ದರು.
ಕಾಲ್ ಟು ಕ್ಲೀನ್: ತಮ್ಮ ಸುತ್ತಲಿನ ಪರಿಸರದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಕ್ಕಳನ್ನು ತಯಾರು ಮಾಡುತ್ತಿರುವ ಅಗಸ್ತ್ಯ ಫೌಂಡೇಷನ್‌ನಿಂದ ಈ ಶಾಲೆಯ ವಿದ್ಯಾರ್ಥಿಗಳಿಗೆ ಸಮಸ್ಯೆ ಅದರ ಸ್ವರೂಪ, ಪರಿಣಾಮದ ಕುರಿತು ಮಾಹಿತಿ ನೀಡುವ ಜೊತೆಗೆ ಲಭ್ಯ ಪರಿಹಾರೋಪಾಯ ಕೂಡ ತಿಳಿಸಿಕೊಡಲಾಯಿತು.
ಸಮಸ್ಯೆಯ ಕುರಿತು ಸ್ಪಷ್ಟ ಮಾಹಿತಿ ಪಡೆದ ಸರ್ಕಾರಿ ಶಾಲೆ ಮಕ್ಕಳು ಮಹಾನಗರ ಪಾಲಿಕೆಯ ಶುಲ್ಕ ರಹಿತ ದೂರವಾಣಿ ಸಂಖ್ಯೆಯನ್ನು ಕಸದ ತೊಟ್ಟಿಗಳ ಮೇಲೆ 'ಕಸವನ್ನು ಕಸದ ಬುಟ್ಟಿಗೆ ಹಾಕಿ, ತುಂಬಿದರೆ ಮಹಾನಗರ ಪಾಲಿಕೆಯ ಶುಲ್ಕರಹಿತ ದೂರವಾಣಿ: 08362213888ಗೆ' ಎಂಬ ವಿನಂತಿಯೊಂದಿಗೆ ಮಾಹಿತಿ ಫಲಕ ಅಂಟಿಸಿದರು. ಇದರ ಜೊತೆಗೆ ತಾವೇ ಸ್ವತಃ ಹಲವು ಬಾರಿ ಮಹಾನಗರ ಪಾಲಿಕೆಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಕಸ ಎತ್ತಿಕೊಂಡು ಹೋಗುವಂತೆ ಸೂಚಿಸಿದ್ದಾರೆ. ಮಕ್ಕಳ ಈ ಕೆಲಸ ನೋಡಿದ ನಿವಾಸಿಗಳೂ ಕೂಡ ಆಗಾಗ ಮಹಾನಗರ ಪಾಲಿಕೆಗೆ ಕರೆ ಮಾಡಿ ನಿಯಮಿತವಾಗಿ ಕಸದ ತೊಟ್ಟಿ ಸ್ವಚ್ಛವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇದೀಗ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಸುತ್ತಲೂ ಕಸ ಇಲ್ಲ ಇದರ ಜೊತೆಗೆ ಹಂದಿ, ನಾಯಿಗಳ ಕಾಟ ಕೂಡ ಕಡಿಮೆಯಾಗಿದೆ.
ಏನಿದು ಡಿಸೈನ್ ಫಾರ್ ಚೇಂಜ್
ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ತಮ್ಮ ಸುತ್ತ ಮತ್ತು ತಾವು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ನೆರವು ನೀಡಿದ್ದು, ಅಗಸ್ತ್ಯ ಇಂಟರ್‌ನ್ಯಾಷನಲ್ ಎಂಬ ಸರ್ಕಾರೇತರ ಸಂಸ್ಥೆ. 2011ರಿಂದ ಅಗಸ್ತ್ಯ ಇಂಟರ್‌ನ್ಯಾಷನಲ್‌ನ 'ಡಿಸೈನ್ ಫಾರ್ ಚೇಂಜ್‌' ಎಂಬ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆಯಲ್ಲಿ ಸರ್ಕಾರಿ ಶಾಲೆ ಮಕ್ಕಳನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತದೆ. ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆಯನ್ನು ಕಳೆದ ವರ್ಷದ ಡಿಸೈನ್ ಫಾರ್ ಚೇಂಜ್‌ನಲ್ಲಿ ಸೇರ್ಪಡೆ ಮಾಡಿಕೊಂಡು ಅಲ್ಲಿನ ಮಕ್ಕಳಿಗೆ ಸುತ್ತಲಿನ ಪರಿಸರದಲ್ಲಿ ಇರುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿ ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಳ್ಳುವಂತೆ ತಿಳಿಸಲಾಯಿತು. ಸಮಸ್ಯೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡ ಶಾಲೆಯ ಕೆಲವು ವಿದ್ಯಾರ್ಥಿಗಳು ಮಹಾನಗರ ಪಾಲಿಕೆ ಟೋಲ್ ಫ್ರೀ ಸಂಖ್ಯೆಯನ್ನು ಕಸದ ತೊಟ್ಟಿ ಮೇಲೆ ಬರೆಯುವ, ಪಾಲಿಕೆಗೆ ನಿಯಮಿತವಾಗಿ ಕರೆ ಮಾಡುವ ಪರಿಹಾರೋಪಾಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶುಭಾಷಿಣಿ ಮಾಡಿದ್ದೇನು ಗೊತ್ತಾ?
ವಿಶ್ವೇಶ್ವರಯ್ಯ ನಗರದ ನಿವಾಸಿ ಮತ್ತು ವಿಶ್ವೇಶ್ವರಯ್ಯ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಶುಭಾಷಿಣಿ ಕಡಮೂರ ಶಾಲೆಗೆ ಬರಬೇಕಾದರೆ ನಿತ್ಯ ಕನಿಷ್ಠ ಮಹಾನಗರ ಪಾಲಿಕೆಯ 5-6 ಕಸದ ತೊಟ್ಟಿ ದಾಟಿಕೊಂಡು ಬರಬೇಕಿತ್ತು. ಹೀಗೆ ಬರುವ ಸಂದರ್ಭ ಅನೇಕ ನಿವಾಸಿಗಳು ಕಸವನ್ನು ತೊಟ್ಟಿಗೆ ಹಾಕುತ್ತಿರಲಿಲ್ಲ. ಅಲ್ಲದೆ, ಶಾಲೆ ಬಳಿ ಇದ್ದ ಕಸದ ತೊಟ್ಟಿಯಿಂದ ಬರುತ್ತಿದ್ದ ದುರ್ವಾಸನೆಗೆ ಊಟ ಕೂಡ ಸೇರುತ್ತಿರಲಿಲ್ಲ. ಅಗಸ್ತ್ಯ ಫೌಂಡೇಷನ್ ಈ ಶಾಲೆಯನ್ನು ಡಿಸೈನ್ ಫಾರ್ ಚೆಂಜ್‌ಗೆ ಆಯ್ಕೆ ಮಾಡಿಕೊಂಡ ನಂತರ ಶುಭಾಷಿಣಿ ಸೇರಿದಂತೆ ಇನ್ನೂ ನಾಲ್ವರು ವಿದ್ಯಾರ್ಥಿಗಳಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಚಿಂತನೆ ಆರಂಭವಾಯಿತು. ನಂತರ ಶಾಲೆಯ ಇತರ ವಿದ್ಯಾರ್ಥಿಗಳನ್ನು ತಮ್ಮೊಂದಿಗೆ ತೆಗೆದುಕೊಂಡು 'ಕಸವನ್ನು ಕಸದ ಬುಟ್ಟಿಗೆ ಹಾಕಿ, ತುಂಬಿದರೆ ಮಹಾನಗರ ಪಾಲಿಕೆಯ ಶುಲ್ಕರಹಿತ ದೂ: 08362213888ಗೆ ಕರೆ ಮಾಡಿ' ಎಂದು ಬರೆದು ವಿಶ್ವೇಶ್ವರಯ್ಯ ನಗರದಲ್ಲಿರುವ ಎಲ್ಲ ಕಸದ ತೊಟ್ಟಿಗಳಿಗೆ ಅಂಟಿಸಿದರು.
ಇಲ್ಲಿಗೆ ವಿದ್ಯಾರ್ಥಿಗಳ ಕೆಲಸ ಮುಗಿಯಲಿಲ್ಲ. ನಿರಂತರವಾಗಿ ಹದಿನೈದು ದಿನಗಳವರೆಗೆ ವಿಶ್ವೇಶ್ವರಯ್ಯ ನಗರದ ವ್ಯಾಪ್ತಿಯಲ್ಲಿ ತುಂಬಿರುವ ಕಸದ ತೊಟ್ಟಿ ಗುರುತಿಸಿ 'ಇಲ್ಲಿರುವ ಕಸದ ತೊಟ್ಟಿ ತುಂಬಿದೆ ತೆಗೆದುಕೊಂಡು ಹೋಗಿ' ಎಂದು ಮಹಾನಗರ ಪಾಲಿಕೆಗೆ ಕರೆ ಮಾಡಿದ್ದಾರೆ. ನಿಯಮಿತವಾಗಿ ಕಸದ ತೊಟ್ಟಿ ಖಾಲಿಯಾಗುತ್ತಿರುವುದನ್ನು ಗಮನಿಸಿದ ನಾಗರಿಕರು ತಾವೇ ಮುಂದಾಗಿ ಮಹಾನಗರ ಪಾಲಿಕೆಗೆ ಕರೆ ಮಾಡಲು ಆರಂಭಿಸುವ ಮೂಲಕ ಪುಟ್ಟ ಮಕ್ಕಳ ಕೆಲಸಕ್ಕೆ ಕೈ ಜೋಡಿಸಿದರು.

 ಸತೀಶ ಪಾಗಾದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.