ಹುಬ್ಬಳ್ಳಿಯಲ್ಲಿ ನಾಳೆಯಿಂದ ರಣಜಿ
ಹುಬ್ಬಳ್ಳಿ: ಕರ್ನಾಟಕ ಹಾಗೂ ಪಂಜಾಬ್ ತಂಡಗಳೆರಡಕ್ಕೂ ಪ್ರಸಕ್ತ ರಣಜಿಯ ಸೆಮಿಫೈನಲ್ ಮಾರ್ಗ ಸುಗಮವಾಗಿಸಿಕೊಳ್ಳಲು ಹುಬ್ಬಳ್ಳಿ ಕೆಎಸ್ಸಿಎ ಮೈದಾನದಲ್ಲಿ ನಡೆಯಲಿರುವ ಪಂದ್ಯ ಮಹತ್ವದ್ದಾಗಿದೆ.
ಬುಧವಾರ ರಾತ್ರಿ ಹುಬ್ಬಳ್ಳಿಗೆ ಬಂದಿಳಿದ ಪಂಜಾಬ್ ತಂಡ ಗುರುವಾರ ಬೆಳಗ್ಗೆ ಮೈದಾನದ ಬಳಿಯ ನೆಟ್ಸ್ನಲ್ಲಿ ಅಭ್ಯಾಸ ನಡೆಸಿದೆ. ಕರ್ನಾಟಕ ತಂಡ ಗುರುವಾರ ರಾತ್ರಿ ಬಂದಿಳಿದಿದ್ದು, ಶುಕ್ರವಾರ ಬೆಳಗ್ಗೆ ಅಭ್ಯಾಸ ನಡೆಸಲಿದೆ ಎಂದು ಕೆಎಸ್ಸಿಎ ಧಾರವಾಡ ವಲಯದ ಸಂಯೋಜಕ ಬಾಬಾ ಭೂಸದ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
15 ಆಟಗಾರರು, ತರಬೇತುದಾರ ಹಾಗೂ ಕೋಚ್ ಸೇರಿದಂತೆ ಒಟ್ಟು 22 ಜನರಿರುವ ಕರ್ನಾಟಕ ತಂಡ ಶುಕ್ರವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿದೆ. ಡಿ. 14ರಿಂದ ನಾಲ್ಕು ದಿನಗಳವರೆಗೆ ನಡೆಯಲಿರುವ ರಣಜಿ ಪಂದ್ಯಕ್ಕೆ ಮೈದಾನ ಸಂಪೂರ್ಣ ಸಿದ್ಧಗೊಂಡಿದೆ. ಸುಮಾರು 8 ಸಾವಿರ ಪ್ರೇಕ್ಷಕರಿಗಾಗಿ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಳೆದ ಡಿಸೆಂಬರ್ನಲ್ಲಿ ನಡೆದ ರಣಜಿ ಹಾಗೂ ಅಕ್ಟೋಬರ್ನಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ಎ ತಂಡಗಳ ಮಧ್ಯದ ಅನಧಿಕೃತ ಟೆಸ್ಟ್ನಿಂದ ಸಾಕಷ್ಟು ಅನುಭವ ಪಡೆದಿದ್ದು, ಈ ಅನುಭವದ ಆಧಾರದ ಮೇಲೆ ಸದ್ಯ ನಡೆಯಲಿರುವ ರಣಜಿ ಪಂದ್ಯಕ್ಕೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ವಲಯದ ಚೇರ್ಮನ್ ವೀರಣ್ಣ ಸವಡಿ ಮಾತನಾಡಿ, ಭಾರತ-ವೆಸ್ಟ್ ಇಂಡೀಸ್ ಎ ತಂಡಗಳ ಅನಧಿಕೃತ ಟೆಸ್ಟ್ ಪಂದ್ಯದ ಸಂದರ್ಭದಲ್ಲಾದ ಭದ್ರತಾ ಅವ್ಯವಸ್ಥೆ ಹಿನ್ನೆಲೆಯಲ್ಲಿ ಈ ಬಾರಿ ಕ್ರೀಡಾಂಗಣಕ್ಕೆ ಹೆಚ್ಚಿನ ಭದ್ರತೆ ವ್ಯವಸ್ಥೆ ಒದಗಿಸಲಾಗಿದೆ. 200 ಪೊಲೀಸರು, ಮೀಸಲು ತುಕಡಿ 50 ಪೊಲೀಸರು ಹಾಗೂ ಕೆಎಸ್ಸಿಎ 10 ಭದ್ರತಾ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಇದರೊಂದಿಗೆ 60 ಜನ ಸ್ವಯಂಸೇವಕರೂ ಭದ್ರತಾ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕರ್ನಾಟಕ ಹಾಗೂ ಪಂಜಾಬ್ ತಂಡಗಳೆರಡರಲ್ಲೂ ಐಪಿಎಲ್ ಆಡಿರುವ ಅನುಭವಿ ಆಟಗಾರರಿದ್ದಾರೆ. ಕೆಎಸ್ಸಿಎ ಅಧ್ಯಕ್ಷ ಶ್ರೀಕಂಠದತ್ತ ಒಡೆಯರ ನಿಧನದ ಹಿನ್ನೆಲೆಯಲ್ಲಿ ಪಂದ್ಯದ ಮೊದಲ ದಿನ ಕರ್ನಾಟಕ ತಂಡದ ಆಟಗಾರರು ಕೈಗೆ ಕಪ್ಪು ಬಟ್ಟೆ ಧರಿಸಿಕೊಂಡು ಮೈದಾನಕ್ಕಿಳಿಯಲಿದ್ದಾರೆ.
ಡಿ. 14ರಂದು ಬೆಳಗ್ಗೆ 9.30ಕ್ಕೆ ಪಂದ್ಯ ಪ್ರಾರಂಭಗೊಳ್ಳಲಿದ್ದು, ಅದಕ್ಕೂ ಮೊದಲು ಒಡೆಯರ್ ನಿಧನಕ್ಕೆ ಸಂತಾಪ ಕೋರಿ ಒಂದು ನಿಮಿಷ ಮೌನ ಆಚರಿಸಲಾಗುವುದು. ಪಂದ್ಯ ವೀಕ್ಷಣೆಗಾಗಿ ಜಿಲ್ಲೆ ಹಾಗೂ ಸುತ್ತಲಿನ ಎಲ್ಲ ಗಣ್ಯರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ.
ಮೈದಾನದ ಮೊದಲ ದ್ವಾರದಲ್ಲಿ ಅತಿ ಮುಖ್ಯ ಗಣ್ಯರು, ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ, ಎರಡು, ಮೂರು ಮತ್ತು ನಾಲ್ಕನೇ ದ್ವಾರದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

