ತಡೆರಹಿತ ಬಸ್ನಿಂದ ಕಿರಿಕಿರಿ
ಹುಬ್ಬಳ್ಳಿ: ಪ್ರಯಾಣಿಕರ ಪಾಲಿಗೆ ಅನುಕೂಲ ಸಿಂಧುವಾಗಿದ್ದ ಹುಬ್ಬಳ್ಳಿಯಿಂದ ಬೆಳಗಾವಿ ಹಾಗೂ ಗದಗಕ್ಕೆ ಸಂಚರಿಸುತ್ತಿರುವ ತಡೆ ರಹಿತ ಬಸ್ಗಳು ಇದೀಗ ಪ್ರಯಾಣಿಕರ ಪ್ರಾಣ ಹಿಂಡುತ್ತಿವೆ. ಇದಕ್ಕೆ ಕಾರಣ ವಾಯವ್ಯ ಸಾರಿಗೆ ಸಂಸ್ಥೆಯ ವಿವೇಚನಾ ರಹಿತ ನಿರ್ಧಾರ.
ನಿಜ, ಕರ್ನಾಟಕ ರಾಜ್ಯ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಅನುಕೂಲವಾಗಲಿ ಹಾಗೂ ತುರ್ತಾಗಿ ನಿಗದಿತ ಸ್ಥಳಕ್ಕೆ ತಲುಪಲಿ ಎನ್ನುವ ದೃಷ್ಟಿಯಿಂದ ಕೆಲ ಮಾರ್ಗಗಳಿಗೆ ತಡೆ ರಹಿತ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿತು. ಪ್ರಮುಖವಾಗಿ ಹುಬ್ಬಳ್ಳಿಯಿಂದ ಬೆಳಗಾವಿಗೆ ಹಾಗೂ ಹುಬ್ಬಳ್ಳಿಯಿಂದ ಗದಗಕ್ಕೆ ತಡೆ ರಹಿತ ಬಸ್ ವ್ಯವಸ್ಥೆ ಕಲ್ಪಿಸಿತು. ಇಂಥ ಬಸ್ಗಳ ವ್ಯವಸ್ಥೆ ಕಲ್ಪಿಸಿದ್ದು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿತ್ತು.
ಜನಸ್ಪಂದನೆ, ಆದಾಯ: ತಡೆಯುಳ್ಳ ಬಸ್ನಿಂದಾಗಿ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಇಂಥ ಬಸ್ ಬಂದ ಬಳಿಕ ಸಮಯ ಉಳಿತಾಯವಾಗುವುದರೊಂದಿಗೆ ಹಾಯಾಗಿ ಪ್ರಯಾಣಿಕರು ಒಂದು ನಗರದಿಂದ ಮತ್ತೊಂದು ನಗರಕ್ಕೆ ನೋಡ ನೋಡುತ್ತಲೇ ಬಂದಿಳಿಯುತ್ತಿದ್ದರು. ಇಂಥ ವ್ಯವಸ್ಥೆ ಕಲ್ಪಿಸುವ ಮುನ್ನ ಪ್ರಯಾಣಿಕರಿಂದ ಸ್ಪಂದನೆ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕ ಸಾರಿಗೆ ಸಂಸ್ಥೆಗೆ ಇತ್ತಾದರೂ, ಕೆಲವೇ ದಿನಗಳಲ್ಲಿ ನಿರೀಕ್ಷೆಗೂ ಮೀರಿ ಜನ ಸ್ಪಂದನೆಯೊಂದಿಗೆ ಆದಾಯವೂ ಸಿಕ್ಕಿತು.
ಸಾಕಷ್ಟು ಬಸ್ ವ್ಯವಸ್ಥೆ: ಆರಂಭದ ಅವಧಿಯಲ್ಲಿ ಬೆರಳೆಣಿಕೆಯಷ್ಟು ಬಸ್ಗಳು ಓಡಾಡುತ್ತಿದ್ದವು. ಇದೀಗ ಹುಬ್ಬಳ್ಳಿ-ಬೆಳಗಾವಿ ಮಧ್ಯೆ 28 ತಡೆ ರಹಿತ ರಾಜಹಂಸ ಬಸ್ಗಳು ಸಂಚರಿಸುತ್ತಿವೆ. ಇದೇ ವೇಳೆ ಗದಗ ಮಾರ್ಗವಾಗಿ 34 ಸಾಮಾನ್ಯ ತಡೆ ರಹಿತ ಬಸ್ಗಳು ಓಡುತ್ತಿವೆ. ತಡೆ ರಹಿತ ಬಸ್ಗಳು ಎನ್ನುವ ಕಾರಣಕ್ಕೆ ಸಾಮಾನ್ಯ ಬಸ್ಗಳಿಗೆ ಹೋಲಿಸಿದಾಗ ಹೆಚ್ಚಿನ ಟಿಕೆಟ್ ದರ ಕೂಡ ಈ ಬಸ್ಗಳಿಗಿವೆ. ಆದರೆ ಪ್ರಯಾಣಿಕರು ಟಿಕೆಟ್ ದರದ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಮಗೆ ಯಾವುದೇ ತೊಂದರೆಯಿಲ್ಲದೆ, ಸರಿಯಾದ ಸಮಯಕ್ಕೆ ನಿಗದಿತ ಸ್ಥಳ ತಲುಪಿಸುತ್ತಿದ್ದ ಈ ಬಸ್ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು.
ಪ್ರಯಾಣಿಕರಿಗೆ ಕಿರಿಕಿರಿ: ಇಷ್ಟು ಉತ್ತಮ ಸೇವೆ ಹೊಂದಿದ್ದ ತಡೆ ರಹಿತ ಬಸ್ಗಳ ಬಗ್ಗೆ ಇದೀಗ ಪ್ರಯಾಣಿಕರಿಂದ ಅಪಸ್ವರ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ತಡೆ ರಹಿತ ಬಸ್ಗಳಲ್ಲಿ ಹಿಂದೆ ಇದ್ದ ನಿರ್ವಾಹಕರನ್ನು ತೆಗೆದು ಹಾಕಿರುವುದು. ಪರಿಣಾಮ ಚಾಲಕನೇ ನಿರ್ವಾಹಕನ ಕೆಲಸವನ್ನೂ ಮಾಡಬೇಕಿದೆ.
ಈ ಹಿಂದೆ ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್ ನೀಡುವುದು, ಹಣ ಪಡೆದುಕೊಳ್ಳುವುದು, ಬಸ್ ನಿಲ್ದಾಣದ ಕಂಟ್ರೋಲರ್ ಕೌಂಟರ್ನಲ್ಲಿ ಟಿಕೆಟ್ ಖರ್ಚಾದ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತಿದ್ದರು. ಈ ಎಲ್ಲ ಕೆಲಸವೀಗ ಚಾಲಕನ ಹೆಗಲಿಗೆ ಹೊರಿಸಲಾಗಿದೆ. ಹದಗೆಟ್ಟ ರಸ್ತೆ, ಟ್ರಾಫಿಕ್ ಸಮಸ್ಯೆಯ ಮಧ್ಯೆ ಬಸ್ ಓಡಿಸುವುದೇ ಕಷ್ಟ ಕಾರ್ಯವಾಗಿರುವಾಗ ಟಿಕೆಟ್ ಕೊಡುವುದು, ಹಣ ತೆಗೆದುಕೊಳ್ಳುವುದು, ಅದರ ಲೆಕ್ಕವಿಡುವ ಕಿರಿಕಿರಿ ಚಾಲಕರಿಗೆ.
ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಬಸ್ನಲ್ಲಿ ನಿರ್ವಾಹಕರಿದ್ದರೆ ಬಸ್ ಚಲಿಸುತ್ತಿರುವಾಗ ಟಿಕೆಟ್ ನೀಡುತ್ತಿದ್ದರು. ಆದರೆ ಇದೀಗ ಬಸ್ ಓಡಿಸುವ ಮುನ್ನವೇ ಚಾಲಕ ಟಿಕೆಟ್ ಕೊಡುವ, ಹಣ ಪಡೆದುಕೊಳ್ಳುವ ಕೆಲಸ ಮುಗಿಸಬೇಕಿದೆ. ಹೀಗಾಗಿ ಪ್ರಯಾಣಕ್ಕೆ ಸಾಕಷ್ಟು ವಿಳಂಬವಾಗುತ್ತಿದೆ. ಹುಬ್ಬಳ್ಳಿಯಿಂದ ಬೆಳಗಾವಿಗೆ ಈ ಹಿಂದೆ ತಡೆ ರಹಿತ ಬಸ್ಗಳಲ್ಲಿ 2 ತಾಸಿನೊಳಗೆ ತಲುಪಬಹುದಿತ್ತು. ಆದರೀಗ ನಿರ್ವಾಹಕರಿಲ್ಲದಿರುವ ಪರಿಣಾಮ 45 ನಿಮಿಷದಿಂದ 1 ಗಂಟೆ ತಡವಾಗಿ ತಲುಪುವಂತಾಗಿದೆ. ತಡೆಯುಳ್ಳ ಬಸ್ಗಳಲ್ಲಿ ಪ್ರಯಾಣಿಸಿದರೆ ಇದಕ್ಕಿಂತ ಮುಂಚೆ ತಲುಪಬಹುದಾಗಿದೆ. ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಈ ಹೊಸ ನಿಯಮ ಜಾರಿಗೆ ತಂದಿರುವ ಪರಿಣಾಮ ಪ್ರಯಾಣಿಕರು ಹಾಗೂ ಚಾಲಕರ ನಡುವಿನ ಕಾದಾಟಕ್ಕೆ ಕಾರಣವಾಗುತ್ತಿದೆ.
ಹಣ ಉಳಿಸಲು ಹೋಗಿ: ಅಂದ ಹಾಗೆ, ಇಷ್ಟಕ್ಕೂ ತಡೆರಹಿತ ಬಸ್ಗಳಲ್ಲಿ ಇದ್ದ ನಿರ್ವಾಹಕರನ್ನು ಬದಲು ಮಾಡಲು ಕಾರಣ ಹಣ ಉಳಿತಾಯವಂತೆ. ಚಾಲಕನೇ ನಿರ್ವಾಹಕನ ಕೆಲಸ ಮಾಡುವುದರಿಂದ ಒಬ್ಬರ ವೇತನ ಉಳಿತಾಯವಾಗುತ್ತದೆ ಎನ್ನುವ ಲೆಕ್ಕಾಚಾರ ಹಿರಿಯ ಅಧಿಕಾರಿಗಳದ್ದು. ಹಣ ಉಳಿತಾಯ ಮಾಡುವ ಭರದಲ್ಲಿ ಸಾರಿಗೆ ಸಂಸ್ಥೆ ತನ್ನ ಪ್ರಯಾಣಿಕರನ್ನು ಕಳೆದುಕೊಳ್ಳುತ್ತಿದೆ ಎನ್ನುವುದನ್ನು ಮರೆತು ಬಿಟ್ಟಿದೆ. ಹೆಚ್ಚಿನ ಸಮಯ, ಕಿರಿಕಿರಿಯಿಂದಾಗಿ ಪ್ರಯಾಣಿಕರು ತಡೆ ರಹಿತ ಬಸ್ಗಳಲ್ಲಿ ಓಡಾಡುವುದನ್ನು ಕಡಿಮೆ ಮಾಡಿದರೆ ಆದಾಯಕ್ಕೂ ಕತ್ತರಿ ಬೀಳಲಿದೆ ಎಂಬ ಸಾಮಾನ್ಯ ಜ್ಞಾನ ಅಧಿಕಾರಿಗಳಿಗಿಲ್ಲದಿರುವುದು ವಿಪರ್ಯಾಸ. ಇನ್ನೂ ಕಾಲ ಮಿಂಚಿಲ್ಲವಾಗಿದ್ದು ಆಗಿರುವ ಪ್ರಮಾದವನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ಸರಿ ಪಡಿಸಬೇಕಿದೆ. ಮೆಚ್ಚುಗೆಗೆ ಪಾತ್ರವಾಗಿರುವ ತಡೆ ರಹಿತ ಬಸ್ಗಳಲ್ಲಿ ನಿರ್ವಾಹಕರನ್ನು ನೇಮಿಸಬೇಕಿದೆ.
ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

