ಧಾರವಾಡ

ಉತ್ಸವದ ಅಂದ ಮಕ್ಕಳಾಟವೂ ಚಂದ

Published On :

ಧಾರವಾಡ: ಗಾಯನ, ನೃತ್ಯ, ಸಂಗೀತ, ನಾಟಕ, ಕವಿಗೋಷ್ಠಿ ಹೀಗೆ ಮತ್ತಿತರೆ ಸಾಂಸ್ಕೃತಿಕ ಕಲಾ ಪ್ರಕಾರಗಳಿಗೆ ಮಾತ್ರ ಸೀಮಿತ ಎನಿಸಿದ್ದ ಧಾರವಾಡ ಉತ್ಸವ ಇದೀಗ ಮಕ್ಕಳ ಮನಸ್ಸಿಗೂ ಹತ್ತಿರವಾಗುತ್ತಿದೆ.
ಪ್ರಪ್ರಥಮ ಬಾರಿಗೆ ಮಕ್ಕಳಿಗಾಗಿಯೇ ಕರ್ನಾಟಕ ವಿಜ್ಞಾನ ಕಾಲೇಜಿನ ಆವರಣದಲ್ಲಿ ಮಕ್ಕಳ ವಲಯವನ್ನೇ ಸೃಷ್ಟಿಸಲಾಗಿದೆ. ಆವರಣದಲ್ಲಿ ಹತ್ತಾರು ಬಗೆಯ ಮನರಂಜನಾ ಆಟ ಸ್ಥಾಪಿಸಲಾಗಿದೆ. ಸಾಹಸ ಕ್ರೀಡೆಗಳಿಗೂ ಅವಕಾಶ ಕಲ್ಪಿಸಲಾಗಿದೆ.
ಉತ್ಸವದಲ್ಲಿ ಮಕ್ಕಳು ಹಾಗೂ ಯುವಕರ ಭಾಗವಹಿಸುವಿಕೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಮಕ್ಕಳ ಮನಸ್ಸಿಗೆ ಮುದ ನೀಡುವ ತರಹೇವಾರಿ ಆಟಗಳು ಎಲ್ಲರ ಗಮನ ಸೆಳೆಯುತ್ತಿವೆ. ಮಕ್ಕಳ ಆಟದ ಮೇಳದಲ್ಲಿ ರು.  50 ಶುಲ್ಕ ನೀಡಿ ಒಳ ಹೋದರೆ, ಏಕಕಾಲಕ್ಕೆ 25 ಆಟ ಆಡಬಹುದು. ಮಕ್ಕಳು ಒಳ ಪ್ರವೇಶಿಸುತ್ತಿದಂತೆ ಜೋಕರ್ ವೇಷಧಾರಿಗಳು ಮಕ್ಕಳನ್ನು ಬರಮಾಡಿಕೊಳ್ಳುತ್ತಾರೆ. ಅಲ್ಲದೆ, ಎತ್ತರವಾಗಿ ಕಾಣುವ ಮರಗಾಲು ಕಟ್ಟಿಕೊಂಡ ವ್ಯಕ್ತಿಗಳು ಮಕ್ಕಳನ್ನು ವಿಶಿಷ್ಟ ರೀತಿ ರಂಜಿಸುತ್ತಿದ್ದಾರೆ.
ಏನೇನಿವೆ ಆಟಗಳು?: ಮಕ್ಕಳ ಆಟದ ಮೇಳದಲ್ಲಿ ಬುಲ್ ರೇಡ್, ಬಂಜಿಗ್ ಟ್ರ್ಯಾಂಪ್‌ಲೇನ್, ಬರಮಾ ರೋಪ್, ಟಾಟೂ, ಸೂಟಿಂಗ್, ತೊಗಲು ಗೊಂಬೆಯಾಟ, ಅಂಕಲ್ ಸಾಮ್, ಕವರ್ ಸ್ಟಾಪ್, ಗಾಲ್ಪ್ ಗೇಮ್, ಬರಮಾ ಬ್ರಿಡ್ಜ್ ಸೇರಿದಂತೆ ಇನ್ನೂ ಅನೇಕ ಆಟಗಳು ಮೇಳದಲ್ಲಿವೆ. ಅಲ್ಲದೆ, ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಮಕ್ಕಳು ಈ ಕ್ರೀಡೆಗಳಲ್ಲೂ ಭಾಗವಹಿಸಬಹುದಾಗಿದೆ.
ಪತಂಗ ಉತ್ಸವ: ಕಾಲೇಜಿನ ಅದೇ ಆವರಣದಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಗುಜರಾತ, ವಿವಿಧ ರಾಜ್ಯಗಳ ಪತಂಗ ತಯಾರಕರು ಆಗಮಿಸಿದ್ದಾರೆ. ಇವರು ತಯಾರಿಸಿ ಹಾರಿ ಬಿಟ್ಟಿರುವ ಪತಂಗಗಳು ಮಕ್ಕಳನ್ನು ಮತ್ತಷ್ಟು ಆಕರ್ಷಿಸುತ್ತಿವೆ. ಆಕಾಶದೆತ್ತರಕ್ಕೆ ಹಾರುವ ಭಗತ್ ಸಿಂಗ್, ವಿವೇಕಾನಂದ ಮುಂತಾದ ಮಹನೀಯರ ಭಾವಚಿತ್ರಗಳನ್ನೊಳಗೊಂಡ ಗಾಳಿಪಟಗಳು ವೈಶಿಷ್ಟ್ಯಪೂರ್ಣವಾಗಿವೆ.
ನೀರಿನಲ್ಲಿ ತೇಲಬೇಕಿದ್ದ ಹಡಗು, ಪಂಜರದಲ್ಲಿರಬೇಕಾದ ಹುಲಿ ಸಹ ಪತಂಗ ರೂಪವಾಗಿ ಆಗಸದಲ್ಲಿ ತೇಲುತ್ತಿರುವ ದೃಶ್ಯಾವಳಿಗಳು ಮಕ್ಕಳನ್ನು ಆಗಸದತ್ತ ನೋಡುವಂತೆ ಮಾಡುತ್ತಿವೆ. ಅಲ್ಲದೆ, ಪತಂಗ ತಯಾರಕರು ಇನ್ನೂ ಅನೇಕ ವಿಶಿಷ್ಟ ರೀತಿಯ ಪತಂಗ ತಯಾರಿಸಿ ಹಾರಿಸುತ್ತಿದ್ದಾರೆ. ಜಿಲ್ಲಾ ಉತ್ಸವದಲ್ಲಿ ಮಕ್ಕಳ ಭಾವಹಿಸುವಿಕೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ಮಕ್ಕಳ ಹಬ್ಬವಾಗಿ ಮಾರ್ಪಡಿಸಿದ್ದು, ಈ ಬಾರಿ ವಿಶೇಷತೆ.

ಬೆಳಗಾದರೆ ಸಾಕು ಓದು, ಬರಹ, ಶಾಲೆ, ಮನೆಕೆಲಸ ಹೀಗೆ ಮಕ್ಕಳು ತೀವ್ರ ಒತ್ತಡದ ಜೀವನ ನಡೆಸುತ್ತಿದ್ದು, ವರ್ಷಕ್ಕೊಮ್ಮೆಯಾದರೂ ಮಕ್ಕಳಿಗೆ ಈ ರೀತಿಯ ಮನರಂಜನೆ ಬೇಕು. ಈ ಹಿನ್ನೆಲೆಯಲ್ಲಿ ಬೀದರನಲ್ಲಿ ನಾನು  ಜಿಲ್ಲಾಧಿಕಾರಿಯಾಗಿದ್ದಾಗ ಅಲ್ಲಿನ ಉತ್ಸವದಲ್ಲಿ ಮಕ್ಕಳಾಟಗಳನ್ನು ಹಮ್ಮಿಕೊಂಡಿದ್ದೆ. ಪ್ರಸಕ್ತ ಧಾರವಾಡ ಉತ್ಸವದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಮಕ್ಕಳನ್ನು ಆಕರ್ಷಿಸುವ ಆಟಗಳನ್ನು ಏರ್ಪಡಿಸಿದ್ದೇವೆ. ಇನ್ನೂ 2 ದಿನ ಮಕ್ಕಳನ್ನು ಈ ಆಟಗಳು ರಂಜಿಸಲಿವೆ.
- ಸಮೀರ ಶುಕ್ಲ, ಧಾರವಾಡ ಜಿಲ್ಲಾಧಿಕಾರಿ


 ಕಲ್ಮೇಶ ಪಟ್ಟಣದವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.