ಧಾರವಾಡ

ಹೊಸ ವರ್ಷಾಚರಣೆ: ನಾಕಾಬಂದಿ

Published On :

ಹುಬ್ಬಳ್ಳಿ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಡಿ. 30, 31 ಹಾಗೂ ಜನವರಿ 1ರಂದು ಕಮೀಷ್ನರೇಟ್‌ನ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನಾಕಾಬಂದಿ ಮಾಡಲಾಗುವುದು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ರವೀಂದ್ರಪ್ರಸಾದ, ಹೊಸ ವರ್ಷಾಚರಣೆಯಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಲು ಯತ್ನಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದೆಂದೂ ಎಚ್ಚರಿಸಿದರು.
ಈ ಮೂರು ದಿನಗಳೆಂದು ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಹೊರಗಿನಿಂದ ಬರುವ ಹಾಗೂ ಅವಳಿನಗರದಿಂದ ತೆರಳುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುವುದು. ಅಲ್ಲದೇ, ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗುವುದೆಂದರು.
ಹೊಸ ವರ್ಷ ಆಚರಣೆಯಲ್ಲಿ ಅಹಿತಕರ ಘಟನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಬಾರದೆಂಬ ಉದ್ದೇಶದಿಂದ ಕಮೀಷ್ನರೇಟ್‌ದಿಂದ ಈ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುತ್ತಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದೂ ವಿವರಿಸಿದರು.
ರದ್ದತಿಗೆ ಕ್ರಮ: ಬಾರ್ ಹಾಗೂ ರೆಸ್ಟೋರೆಂಟ್, ಹೊಟೇಲ್‌ಗಳು ಹಾಗೂ ಅಂಗಡಿ ಮುಂಗಟ್ಟುಗಳ ವ್ಯವಹಾರಕ್ಕೆ ನಿಗದಿಪಡಿಸಲಾಗಿರುವ ಅವಧಿಯೇ ಹೊಸ ವರ್ಷದಿಂದು ಜಾರಿಯಲ್ಲಿರಲಿದ್ದು, ಇದನ್ನು ಮೀರಿ ವ್ಯವಹಾರ ನಡೆಸಲು ಯತ್ನಿಸುವ ವೈನ್ ಶಾಪ್‌ಗಳ ಪರವಾನಗಿ ರದ್ದತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಆಯುಕ್ತ ರವೀಂದ್ರಪ್ರಸಾದ ಎಚ್ಚರಿಸಿದರು.
ನಿಯಂತ್ರಿಸಲು ಸಾಧ್ಯ: ಇದ್ದ ಪೊಲೀಸ್ ಸಿಬ್ಬಂದಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಅವಳಿನಗರದಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು, ಈ ನಿಟ್ಟಿನಲ್ಲಿ ಮಹಾನಗರ ಪೊಲೀಸ್ ಇಲಾಖೆಗೆ 3 ತಿಂಗಳ ಅವಧಿಯಲ್ಲಿ ಚುರುಕು ಮುಟ್ಟಿಸಲಾಗುವುದೆಂದರು.
ರಾತ್ರಿ ಹಾಗೂ ಹಗಲು ಹೊತ್ತಿನಲ್ಲಿ ನಡೆಯುತ್ತಿರುವ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣ ಭೇದಿಸಲು ಹೊಸ್ ಬೀಟ್ ಪದ್ಧತಿ ಈಗಾಗಲೇ ಜಾರಿಗೆ ತರಲಾಗಿದ್ದು ಇದನ್ನು ಮತ್ತಷ್ಟು ಶಸಕ್ತಗೊಳಿಸಲಾಗುವುದು. ಸಂಚಾರ ವ್ಯವಸ್ಥೆಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ಬಿಡಾಡಿ ದನಗಳ ವಿರುದ್ಧ ಇಲಾಖೆ ಕಾರ್ಯಾಚರಣೆ ನಡೆಸಿದ್ದು ಆಯಾ ಜಾನುವಾರಗಳ ಮಾಲೀಕರು ಪ್ರಾಣಿಗಳನ್ನು ರಸ್ತೆ ಮಧ್ಯೆದಲ್ಲಿ ಬಿಡದೆ ಇಲಾಖೆ ಕಾರ್ಯಕ್ಕೆ ಸಹಕರಿಸಬೇಕೆಂದು ವಿನಂತಿಸಿಕೊಂಡರು. ಇಲಾಖೆ ಗೂಂಡಾ ಪಟ್ಟಿಯಲ್ಲಿ ಗುರುತಿಸಿದ್ದ ವ್ಯಕ್ತಿಗಳಲ್ಲಿ ದೈಹಿಕವಾಗಿ ದುರ್ಬಲರಾದವರು ಹಾಗೂ 70 ವರ್ಷಕ್ಕೂ ಮೇಲ್ಪಟ್ಟವರನ್ನು ಈ ಪಟ್ಟಿಯಿಂದ ತೆಗೆದು ಹಾಕಲು ಇಲಾಖೆ ಕ್ರಮಕೈಗೊಂಡಿದೆ ಎಂದೂ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಡಿಸಿಪಿಗಳಾದ ಸುಭಾಸ ಗುಡಿಮನಿ ಹಾಗೂ ಶ್ರೀನಾಥ ಜೋಶಿ ಪತ್ರಿಕಾಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.