ಇನ್ನೇನಿದ್ರೂ ಪ್ರಚಾರದ ಗದ್ದಲ...
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 23
ದಿಢೀರನೆ ಘೋಷಣೆಯಾದ ಸ್ಥಳೀಯ ಚುನಾವಣೆಯ ನಾಮಪತ್ರ ಸಲ್ಲಿಕೆಯ ಗದ್ದಲ ಶನಿವಾರ ಮುಗಿದಿದ್ದು, ಇನ್ನೇನಿದ್ರೂ ನಾಮಪತ್ರ ಪರಿಶೀಲನೆ, ಮರಳಿ ಪಡೆಯುವುದು ಹಾಗೂ ಮಾ. 7ರಂದು ನಡೆಯುವ ಚುನಾವಣೆಗೆ ಪ್ರಚಾರ ನಡೆಸಬೇಕಷ್ಟೇ.
ಚುನಾವಣಾ ಆಯೋಗ ಫೆ. 14ರಂದು ಆದೇಶ ಹೊರಡಿಸಿ ಚುನಾವಣೆ ಘೋಷಿಸಿತ್ತು. ಅಂತೆಯೇ ಫೆ. 23 ನಾಮಪತ್ರ ಸಲ್ಲಿಕೆಗೆ ಕೊನೆ ದಿನ ತಿಳಿಸಿತ್ತು. ಒಂಭತ್ತು ದಿನಗಳಲ್ಲಿ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ಹೊತ್ತ ರಾಜಕೀಯ ಪಕ್ಷಗಳ ಮುಖಂಡರು ಕೊನೆಗೂ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ. ಶನಿವಾರ ನಾಮಪತ್ರ ಸಲ್ಲಿಸಲು ಕೊನೆ ದಿನ ಇದ್ದ ಕಾರಣ ಆಯಾ ಪಕ್ಷಗಳಿಂದ ಬಿ ಫಾರ್ಮ್ ಪಡೆದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ, ಟಿಕೆಟ್ ವಂಚಿತ ಕೆಲ ಆಕಾಂಕ್ಷಿಗಳು ಬೇರೆ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನು ಕೆಲವರು ರಾಜಕೀಯ ಪಕ್ಷ ನಂಬದೇ ಪಕ್ಷೇತರ ಅಭ್ಯರ್ಥಿಗಳಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಸಾವಿರಾರು ಜನ ಬೆಂಬಲಿಗರು: ಶನಿವಾರ ಪಾಲಿಕೆ ಕಚೇರಿ ಎದುರು ಬಿ ಫಾರ್ಮ್ ಪಡೆದ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳ ದಂಡೇ ಸೇರಿತ್ತು. ತಮ್ಮ ಬೆಂಬಲಿಗರ ಜೊತೆಗೆ ಬಂದ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಎಲ್ಲ ಪಕ್ಷಗಳ ಮುಖಂಡರು ಶನಿವಾರವೇ ಎಲ್ಲ ವಾರ್ಡ್ಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ ಕಾರಣ ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಒಟ್ಟೊಟ್ಟಿಗೆ ಬಂದು ನಾಮಪತ್ರ ಸಲ್ಲಿಸಲು ಮುಂದಾದ ಘಟನೆಯೂ ನಡೆಯಿತು. ಉಪ ನಗರ ಠಾಣೆ ಪೊಲೀಸರು ಜನರನ್ನು ನಿಯಂತ್ರಿಸುವಲ್ಲಿ ಸಾಕು ಸಾಕಾದರು. ಆರು ಜನ ಹೊರತುಪಡಿಸಿ ಮತ್ಯಾರನ್ನೂ ನಾಮಪತ್ರ ಸಲ್ಲಿಸಲು ಪಾಲಿಕೆ ಆವರಣದಲ್ಲಿ ಬಿಡಲಿಲ್ಲ. ಪಕ್ಷಗಳ ಚಿಹ್ನೆ ಕೈಯಲ್ಲಿ ಹಿಡಿದು ಜೈಕಾರ ಹಾಕುತ್ತಾ ಪಾಲಿಕೆ ಪ್ರವೇಶಿಸಿದ ಅಭ್ಯರ್ಥಿಗಳ ಸಾವಿರಾರು ಬೆಂಬಲಿಗರು ಏರುತ್ತಿರುವ ಚುನಾವಣಾ ತೀವ್ರತೆಗೆ ಸಾಕ್ಷಿಯಾದರು.
ಫೆ. 25ರವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, 27ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಈ ಬಾರಿ ನಮ್ಮದೆ ಗೆಲವು ಎಂದು ಭಾವಿಸಿಕೊಂಡಿರುವ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾಮಪತ್ರ ಸಲ್ಲಿಸಿದ ದಿನದಿಂದಲೇ ತಮ್ಮ ವಾರ್ಡ್ಗಳ ಮತದಾರರ ಮನ ಓಲೈಕೆಗೆ ಯತ್ನ ನಡೆಸುತ್ತಿದ್ದಾರೆ.
ಎಲ್ಲೆಡೆ ಅತೃಪ್ತಿಯ ಹೊಗೆ..
ಪಾಲಿಕೆ ಚುನಾವಣೆಗೆ ಶತಾಯಗತಾಯ ಸ್ಪರ್ಧಿಸಬೇಕೆಂಬ ಆಸೆ ಹೊತ್ತಿದ್ದ ಅನೇಕ ಆಕಾಂಕ್ಷಿಗಳಿಗೆ ಈ ಬಾರಿ ತೀವ್ರ ನಿರಾಸೆ ಉಂಟಾಗಿದೆ. ಟಿಕೆಟ್ ಪಡೆಯಲು ಶನಿವಾರ ಮಧ್ಯಾಹ್ನದವರೆಗೂ ಪ್ರಯತ್ನ ಮಾಡಿ ಕೊನೆಗೆ ತಮ್ಮ ನಿಷ್ಠೆಯ ಪಕ್ಷದ ವಿರುದ್ಧ ಅನೇಕ ಆಕಾಂಕ್ಷಿಗಳು ಕೈ ಕೈ ಹಿಸುಕಿಕೊಂಡ ಸಂದರ್ಭ ನಡೆದವು. ಪ್ರಮುಖವಾಗಿ ಕಾಂಗ್ರೆಸ್ನಲ್ಲಿ ಅಸಮಾಧಾನ ತೀವ್ರಗೊಂಡಿದ್ದು, ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದ ಅಭ್ಯರ್ಥಿಗಳ ವಿರುದ್ಧವೇ ಬಂಡಾಯ ಕಾಂಗ್ರೆಸ್ಸಿಗರಾಗಿ ಕೆಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಪಕ್ಷದಲ್ಲಿ ಇಷ್ಟೊಂದು ಬೆಳವಣಿಗೆ ಕಾಣದಿದ್ದರೂ ಕೆಲ ವಾರ್ಡ್ಗಳಲ್ಲಿ ಆಕಾಂಕ್ಷಿಗಳು, ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿನ ತೀರ್ಮಾನಗಳಿಗೆ ಬರೀ ಬೇಸರ ವ್ಯಕ್ತವಾಗಿದೆ. ಇನ್ನು, ಪಾಲಿಕೆಯಲ್ಲಿ ಆಡಳಿತ ನಡೆಸಿದ ಬಿಜೆಪಿಯಲ್ಲಿ ಅತೃಪ್ತಿಯ ಹೊಗೆ ಮೇಲ್ನೋಟಕ್ಕೆ ತಣ್ಣಗಿದ್ದರೂ ಒಳಗೊಳಗೆ ಟಿಕೆಟ್ ತಪ್ಪಿಸಿಕೊಂಡ ಅಭ್ಯರ್ಥಿಗಳ ಮನಸ್ಸು ಕುದಿಯುತ್ತಿದೆ. 10ನೇ ವಾರ್ಡ್ನಲ್ಲಿ ಗಾಯತ್ರಿ ಕನವಳ್ಳಿ ಬದಲಾಗಿ ಪಾರ್ವತೆವ್ವ ಮೇಟಿ ಅವರನ್ನು ಕಣಕ್ಕಿಳಿಸಿರುವುದನ್ನು ಬಿಟ್ಟರೆ, ಇತರೆ ಹೆಚ್ಚು ವಾರ್ಡ್ಗಳಲ್ಲಿ ನಿರ್ಗಮಿತ ಬಿಜೆಪಿ ಸದಸ್ಯರೇ ಉಮೇದುವಾರಿಕೆ ಸಲ್ಲಿಸಿದ್ದಾರೆ. 12ನೇ ವಾರ್ಡ್ನಲ್ಲಿ ಮೋಹನ ರಾಮದುರ್ಗ ಅವರಿಗೆ ಟಿಕೆಟ್ ನೀಡುತ್ತೇವೆಂದು ಭರವಸೆ ನೀಡಿದ್ದ ಬಿಜೆಪಿ ಮುಖಂಡರು ಕೈ ಕೊಟ್ಟಿದ್ದರಿಂದ ರಾಮದುರ್ಗ ಬೇಸರಗೊಂಡಿದ್ದಾರೆ. ಒಟ್ಟಿನಲ್ಲಿ ಎಲ್ಲ ಪಕ್ಷಗಳಲ್ಲಿನ ನಿಷ್ಠಾವಂತ ಕಾರ್ಯಕರ್ತರು ಒಡೆದು ಹೋಗಿದ್ದು, ಅಧಿಕೃತ ಅಭ್ಯರ್ಥಿಗಳು ಯಾವ ರೀತಿ ಚುನಾವಣೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

