ಧಾರವಾಡ

ಯುವಕರಿಂದ ದೇಶದ ಅಭಿವೃದ್ಧಿ

Published On :

ರೋಣ: ಯುವಶಕ್ತಿ ದೇಶದ ಶಕ್ತಿಯಾಗಿದ್ದು, ದೇಶದ ಅಭಿವೃದ್ಧಿ, ಸುಭದ್ರ ರಾಷ್ಟ್ರ ಹಾಗೂ ಜಾತ್ಯಾತೀತ ಸಮಾಜ ನಿರ್ಮಾಣವಾಗಲು ಯುವಕರಿಂದ ಮಾತ್ರ ಸಾಧ್ಯ ಎಂದು ನೆಹರು ಯುವ ಕೇಂದ್ರ ಸಂಘಟನೆಯ ಮಹಾ ನಿರ್ದೇಶಕ ಸಲೀಂ ಅಹ್ಮದ ಹೇಳಿದರು.
ಅವರು ಶನಿವಾರ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಮಧುರಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ನೆಹರು ಯುವ ಕೇಂದ್ರ ಸಂಘಟನೆ ಗದಗ ಇವುಗಳ ಆಶ್ರಯದಲ್ಲಿ ಆಯೋಜಿಸಿದ್ದ ಯುವ ಸಂಘಟನೆ ಹಾಗೂ ಯುವ ಬಲವರ್ಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶದ ಯುವ ಜನತೆಗೆ ನಾಯಕತ್ವ ಕಲ್ಪಿಸುವ ಉದ್ದೇಶ ಹಾಗೂ ಅನೇಕ ಮಹತ್ವಪೂರ್ಣ ಚಿಂತನೆಗಳನ್ನೊಳಗೊಂಡು ಸ್ಥಾಪನೆಗೊಂಡ ನೆಹರು ಯುವ ಕೇಂದ್ರ ಸಂಘಟನೆಯು ಇಂದು ಮಹತ್ತರವಾದ ಮೈಲುಗಲ್ಲನ್ನು ನಿರ್ಮಿಸಿದೆ. ಯುವ ಜನತೆಗೆ ಪೂರಕವಾದ ವ್ಯಕ್ತಿತ್ವ ವಿಕಾಸ, ಮುಂದಾಳತ್ವ, ಭಾಷಣ ಕಲೆ, ಸಮುದಾಯ ಸಂಘಟನೆ, ಕಲೆ-ಸಂಸ್ಕೃತಿಯ ವಿಕಾಸ, ಪರಿಸರ ಸಂರಕ್ಷಣೆ, ಆರೋಗ್ಯ, ಅಂತರ್ಜಲ ಸಂರಕ್ಷಣೆ, ಶಿಕ್ಷಣ, ಗ್ರಾಮೀಣ ಕ್ರೀಡೆಗಳು ಹಾಗೂ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಉದ್ದೇಶದಿಂದ ನೆಹರು ಯುವ ಕೇಂದ್ರವನ್ನು ಕಾರ್ಯರೂಪಕ್ಕೆ ತರಲಾಗಿದೆ. ದೇಶದ ಪ್ರಗತಿ ಮತ್ತು ಸುಭದ್ರತೆಗೆ ಯುವ ಜನತೆ ಶ್ರಮಿಸಬೇಕು ಎಂದರು.  
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರಾರಂಭದಲ್ಲಿ ಉತ್ತಮ ಉದ್ದೇಶದೊಂದಿಗೆ ಸ್ಥಾಪನೆಯಾಗುತ್ತಿರುವ ಅನೇಕ ಸಂಘ, ಸಂಸ್ಥೆಗಳು ಸರಿಯಾದ ಪಾಲನೆ, ಪೋಷಣೆ ಇಲ್ಲದೇ ಇರುವುದರಿಂದ ಕ್ರಮೇಣ ಮರೆಯಾಗುತ್ತಿರುವುದು ವಿಷಾದನೀಯ. ಆದರೆ, ನೆಹರು ಯುವ ಕೇಂದ್ರವು ಅನೇಕ ಮಹತ್ತರ ಯೋಜನೆಗಳೊಂದಿಗೆ ಸ್ಥಾಪನೆಯಾದ ಸಂಘಟನೆಯಾಗಿದ್ದು, ಇದೊಂದು ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಯುವ ಜನತೆ ಇದರ ಲಾಭ ಪಡೆಯಬೇಕು ಎಂದರು. ನೆಹರು ಯುವ ಕೇಂದ್ರ ಸಂಘಟನೆಯ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಪಟ್ಟಣದ ಯುವಸೇನಾ ಯುವಕ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಂಘಟನೆಯ ಜಿಲ್ಲಾ ಸಮನ್ವಯ ಅಧಿಕಾರಿ ಗೋವಿಂದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನೆಹರು ಯುವಕೇಂದ್ರ ವಲಯ ನಿರ್ದೇಶಕ ಆರ್. ನಟರಾಜನ್, ಹಾವೇರಿ ಲೋಕಸಭೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ, ಪ್ರಭು ಮೇಟಿ, ಸಂಗು ನವಲಗುಂದ, ಅಂದಾನಯ್ಯ ಹಿರೇಮಠ, ವಿಶ್ವನಾಥ ಜಿಡ್ಡಿಬಾಗೀಲ, ಬಸವರಾಜ ನವಲಗುಂದ, ನಿಂಗಪ್ಪ ಬೇವಿನಮರದ, ವೀರಣ್ಣ ಶೆಟ್ಟರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಾಂಬಳೇಶ ಗಾಣಿಗೇರ ಸ್ವಾಗತಿಸಿದರು. ಎಸ್.ಎಸ್. ಶಿರೋಳ ನಿರೂಪಿಸಿದರು. ಶಫೀಕ ಮೂಗನೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.