ಧಾರವಾಡ

ಮನೆ ಬಾಗಿಲಿಗೆ ಸಾವಯವ ತರಕಾರಿ!

Published On :

ಧಾರವಾಡ: ಸಾವಯವ ಕೃಷಿ ಪದ್ಧತಿ ಮೂಲಕ ಬೆಳೆದ ತರಕಾರಿ ದೊರೆಯುವುದೇ ಭಾಗ್ಯ ಎನ್ನುವ ಪ್ರಸ್ತುತ ಸಂದರ್ಭ ಮಹಿಳೆಯೋರ್ವಳು ತಾನು ಬೆಳೆದ ಸಾವಯವ ತರಕಾರಿಯನ್ನು ಮನೆ ಬಾಗಿಲಿಗೆ ಹೋಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿತರಿಸುತ್ತಿದ್ದಾರೆ.
ಇದೇನು ವಿಶೇಷ? ಅಂತೀರಾ ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದವರಾದ ಕೃಷಿ ಪಂಡಿತ ಪ್ರಶಸ್ತಿ ವಿಜೇತೆ ಲಕ್ಷ್ಮೀ ಲೋಕೂರು ಅವರು ಬೈಲಹೊಂಗಲ ಹಾಗೂ ಧಾರವಾಡದ ಹಲವು ಬಡಾವಣೆಗಳ ಸಾವಯವ ತರಕಾರಿ ಬಳಸುವ ಗ್ರಾಹಕರಿಗೆ ನಿತ್ಯ ಸಾವಯವ ತರಕಾರಿ ಉಣಬಡಿಸುತ್ತಿದ್ದಾರೆ. ಪ್ರತಿ ಮಂಗಳವಾರ ಕೃಷಿ ವಿವಿ ಆವರಣ, ನಾರಾಯಣಪುರ ಕೆನರಾ ಬ್ಯಾಂಕ್, ಶುಕ್ರವಾರ ಆಕಾಶವಾಣಿ ಎದುರು ಹಾಗೂ ಭಾನುವಾರ ನಾರಾಯಣಪೂರದ ಶಾಖಾಂಪರಿ ಅಪಾರ್ಟ್‌ಮೆಂಟ್ ಹಾಗೂ ಸಂತೋಷ ನಗರದ ಹನುಮಂತ ದೇವಸ್ಥಾನದ ಬಳಿ ಸಾವಯವ ತರಕಾರಿಯನ್ನು ಲಕ್ಷ್ಮೀ ಲೋಕುರ ಅವರು ಸ್ವತಃ ತಮ್ಮ ವಾಹನದಲ್ಲಿ ತಂದು ಸಾಮಾನ್ಯ ದರದಲ್ಲಿ ವಿತರಿಸುತ್ತಿದ್ದಾರೆ. ಬೈಲಹೊಂಗಲದಲ್ಲೂ ನಿರ್ದಿಷ್ಟಪಡಿಸಿದ ದಿನ ಮಾರಾಟ ಮಾಡುತ್ತಾರೆ.
ಲಕ್ಷ್ಮೀ ಅವರು ತರಕಾರಿ ವಿತರಣೆಯನ್ನು ವಿಶೇಷ ವ್ಯವಸ್ಥೆ ಅಳವಡಿಸಿದ್ದಾರೆ. ಪ್ರತಿ ತಿಂಗಳಿಗೆ ಒಂದು ಸಾವಿರ ರುಪಾಯಿ ನೀಡಿ ಸದಸ್ಯರಾದರೆ ಈ ಪೈಕಿ 500 ಠೇವಣಿ ಇರುತ್ತದೆ. ಉಳಿದ 500ರಲ್ಲಿ ಪ್ರತಿ ವಾರ ದೂರವಾಣಿ ಮೂಲಕ ತಮಗೆ ಬೇಕಾದ ತರಕಾರಿಯ ಆರ್ಡ್‌ರ್ ಪಡೆದುಕೊಂಡು ನಿಗದಿತ ಸಮಯಕ್ಕೆ ನಿಗದಿತ ದಿನ ತಂದು ತರಕಾರಿಯನ್ನು ವಿತರಿಸುತ್ತಿದ್ದಾರೆ. ತಿಂಗಳ ಕೊನೆಯಲ್ಲಿ 500ರಲ್ಲಿ ಗ್ರಾಹಕರು ತರಕಾರಿಗೆ ಕೊಟ್ಟ ಹಣ ಉಳಿದಿದ್ದರೆ ಮರಳಿ ಕೊಡುತ್ತಾರೆ. ಹೆಚ್ಚಾಗಿದ್ದರೆ ತರಕಾರಿ ನೀಡುತ್ತಾರೆ. ತಿಂಗಳಿಗೆ ಮತ್ತೇ ನೂತನ ಸದಸ್ಯತ್ವ ಪಡೆದುಕೊಳ್ಳಬೇಕು. ಇದರಿಂದ ಪಾಳಿ ಹಚ್ಚುವ ಗೊಂದಲ ತಪ್ಪುತ್ತದೆ. ಹೊಲದಿಂದ ನೇರವಾಗಿ ಪ್ಯಾಕೆಟ್ ಮೂಲಕ ಆರ್ಡ್‌ರ್ ನೀಡಿದ ತರಕಾರಿಯನ್ನು ತಂದು ಕೊಡುತ್ತಾರೆ. ಇನ್ನು, ಸ್ಥಳದಲ್ಲಿಯೇ ಸಾಕಷ್ಟು ಗ್ರಾಹಕರು ಇವರಿಂದ ತರಕಾರಿ ಪಡೆದುಕೊಳ್ಳುವುದು ಸಾಮಾನ್ಯ.
ಬೈಲಹೊಂಗಲ ಹಾಗೂ ಧಾರವಾಡದ ವಿವಿಧ ಬಡಾವಣೆಗಳ 250ಕ್ಕೂ ಹೆಚ್ಚು ಕುಟುಂಬಗಳು ಸಾವಯವ ತರಕಾರಿ ಪ್ರತಿ ವಾರ ಪಡೆಯಲು ಸದಸ್ಯರಾಗಿದ್ದಾರೆ. ಒಟ್ಟು 700 ಜನರ ಆರ್ಡ್‌ರ್ ಗುರಿ ಹೊಂದಿದ್ದೇನೆ. ಮಾರುಕಟ್ಟೆ ದರ ಏನೇ ಇರಲಿ ಒಂದು ಕಿಲೋ ತರಕಾರಿಗೆ 40 ನಿಗದಿ ಮಾಡಿದ್ದೇನೆ. ಒಂದು ವರ್ಷದ ವರೆಗೂ ಈ ದರ ಏರಿಳಿತವಾಗುವುದಿಲ್ಲ. ಹಿರಿಯರು ಕೃಷಿಕರಾಗಿದ್ದು ಅವರ ಪ್ರೇರಣೆಯಿಂದ 24 ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿ ಮಾಡುತ್ತಿದ್ದೇನೆ. ವಿವಿಧ ಬೆಳೆಗಳಿಗಿಂತ ತರಕಾರಿಯನ್ನೇ ಜಾಸ್ತಿ ಬೆಳೆಯುತ್ತಿದ್ದು, ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ತರಕಾರಿ ಒದಗಿಸುವುದೇ ನನ್ನ ಗುರಿ ಎನ್ನುತ್ತಾರೆ ಲಕ್ಷ್ಮೀ ಲೋಕುರ.
ಹೇಗೆ ಆರಂಭವಾಯ್ತು: ಗ್ರೀನ್ ಆರ್ಮಿ ಸಂಸ್ಥೆ ವತಿಯಿಂದ ಒಂದು ಸಾವಿರ ರೈತರನ್ನು ನೈಸರ್ಗಿಕ ಕೃಷಿಗೆ ಅಳವಡಿಸಬೇಕೆಂಬ ಆಶಯದಿಂದ ಕೃಷಿ ವಿವಿ ಸಾವಯವ ಕೃಷಿ ವಿಭಾಗದ ಡಾ. ಬಬಲಾದ ಅವರನ್ನು ಭೇಟಿ ಮಾಡಲು ಹೋದಾಗ ಡಾ. ಬಬಲಾದ ಅವರಿಗೆ ಲಕ್ಷ್ಮೀ ಅವರು ತರಕಾರಿ ಕೊಡಲು ಬಂದಿದ್ದರು. ಅದನ್ನು ಗಮನಿಸಿ ನಮ್ಮಲ್ಲಿಯೂ ಏಕೆ ಆರಂಭಿಸಬಾರದೆಂದು ನಾಲ್ಕೈದು ತಿಂಗಳಿಂದ ಧಾರವಾಡದ ವಿವಿಧ ಬಡಾವಣೆಗಳಲ್ಲಿ ಆರಂಭಿಸಿದ್ದೇವೆ. ಅಲ್ಲದೇ, ಈ ವ್ಯವಸ್ಥೆಗೆ ಮನೆ ಮನೆಗೆ ಸಾವಯವ ತರಕಾರಿ ಎಂಬ ಹೆಸರು ಇಟ್ಟಿದ್ದೇವೆ. ಜನರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ತಮ್ಮ ಬಡಾವಣೆಯಲ್ಲೂ ಆರಂಭಿಸಿ ಎಂದು ಮನವಿ ಮಾಡುತ್ತಿದ್ದಾರೆ ಎಂದು ಗ್ರೀನ್ ಆರ್ಮಿ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಗೌಡರ ಕನ್ನಡಪ್ರಭಕ್ಕೆ ತಿಳಿಸಿದರು.
ಒಟ್ಟಿನಲ್ಲಿ ಸಾವಯವ ಕೃಷಿ ಮೂಲಕ ಬೆಳೆದ ತರಕಾರಿಯನ್ನು ದೂರದ ಬೈಲಹೊಂಗಲದಿಂದ ತಂದು ಮನೆ ಮನೆಗೆ ತಲುಪಿಸುತ್ತಿರುವ ಲಕ್ಷ್ಮೀ ಅವರ ಸಾಹಸ ಮೆಚ್ಚಲೇಬೇಕಲ್ಲವೇ..?


ಔಷಧಿ ಸಿಂಪಡಿಸಿ ಬೆಳೆದ ತರಕಾರಿ ರುಚಿಗಿಂತ ಸಾವಯವ ತರಕಾರಿಯಿಂದ ಮಾಡಿದ ಆಹಾರ ರುಚಿ ಉತ್ತಮ. ಇದಕ್ಕಿಂತ ಹೆಚ್ಚಾಗಿ ತರಕಾರಿ ತರಲು ಮಾರುಕಟ್ಟೆಗೆ ಹೋಗಿ ದುಬಾರಿ ಹಣ ಕೊಟ್ಟು ತರುವುದಕ್ಕಿಂತ ಮನೆ ಬಾಗಿಲಿಗೆ ಸಾವಯವ ತರಕಾರಿ ಬರುತ್ತಿದ್ದು, ಯಾರು ಬೇಡ ಅಂತಾರೆ. ಕಳೆದ ತಿಂಗಳಿಂದ ಸದಸ್ಯರಾಗುವ ಮೂಲಕ ತರಕಾರಿ ಪಡೆದುಕೊಳ್ಳುತ್ತಿದ್ದೇನೆ.
- ಆರೋಹಿ ಪರಾಂಜಪೆ
ಪ್ರಶಾಂತನಗರ ನಿವಾಸಿ

- ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.