ಧಾರವಾಡ

ಬಟಾಣಿ ಬೆಲೆ ಕುಸಿತ: ಪ್ರತಿಭಟನೆ

Published On :

ಧಾರವಾಡ: ಬಟಾಣಿ ಬೆಲೆ ತೀರಾ ಕುಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ತಾಲೂಕಿನ ಸುಮಾರು 200 ರೈತರು ಇಲ್ಲಿನ ಹಳೇ ಎಪಿಎಂಸಿ ಆವರಣದಲ್ಲಿ ಬುಧವಾರ ರಾತ್ರಿ ಮಧ್ಯವರ್ತಿಗಳ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.
ಬಿತ್ತನೆ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಕಷ್ಟಪಟ್ಟು ಬೆಳೆ ತೆಗೆದರೆ ರೈತರಿಂದ ಅತೀ ಕಡಿಮೆ ದರದಲ್ಲಿ ಬಟಾಣಿ ಖರೀದಿಸಿ ಹೆಚ್ಚಿನ ಬೆಲೆಗೆ ಮಧ್ಯವರ್ತಿಗಳು ಮಾರಾಟ ಮಾಡುತ್ತಿದ್ದಾರೆ. ತೂಕ ಮತ್ತು ಅಳತೆಯಲ್ಲಿ ರೈತರಿಗೆ ಮೋಸವೂ ಆಗುತ್ತಿದೆ. ಇದರಿಂದ ರೈತರಿಗೆ ತುಂಬ ಹಾನಿಯಾಗುತ್ತಿದ್ದು, ಸರಿಪಡಿಸಬೇಕೆಂದು ಆಗ್ರಹಿಸಿ ರೈತರು ತಂದಿದ್ದ ಬಟಾಣಿಯನ್ನು ಮಾರಾಟ ಮಾಡದೇ ಮಧ್ಯವರ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊದಲೆ ಬರಗಾಲ: ಪ್ರತಿ ಹತ್ತು ಕೆಜಿ ಬಟಾಣಿಗೆ ಕನಿಷ್ಠ ರು. 500ರಿಂದ ರು. 600ರ ವರೆಗೆ ಮಾರಿದರೆ ಮಾತ್ರ ರೈತರಿಗೆ ಲಾಭವಾಗದಿದ್ದರೂ ನಷ್ಟವಾಗೋದಿಲ್ಲ. ಆದರೆ, ಹತ್ತು ಕೆಜಿ ಬರೀ ರು. 200ಗೆ ಮಾರಾಟವಾಗುತ್ತಿದೆ. ಮೊದಲೇ ಎರಡು ವರ್ಷಗಳಿಂದ ಬರಗಾಲದಿಂದ ನರಳಿದ್ದು, ಈ ವರ್ಷ ಮಳೆ ಬಿದ್ದು, ಬಟಾಣಿ ಉತ್ತಮವಾಗಿ ಬಂದಿದೆ. ಆದರೆ, ಬೆಲೆ ಕುಸಿತದಿಂದ ತುಂಬ ಹಾನಿಯಾಗುತ್ತಿದೆ ಎಂದು ತಾಲೂಕಿನ ರೈತರು ಬೇಸರ ವ್ಯಕ್ತಪಡಿಸಿದರು. ಕೊನೆಗೆ ಎಪಿಎಂಸಿ ಅಧ್ಯಕ್ಷ ಮಲ್ಲೇಶಪ್ಪ ಹೂಸೂರ, ಉಪಾಧ್ಯಕ್ಷ ವಿಠ್ಠಲ ಪೀರಗಾರ, ಸದಸ್ಯರಾದ ಎಸ್.ಎಫ್. ಪಾಟೀಲ, ದಾದಾಸಾಹೇಬ ದೇಸಾಯಿ ಹಾಗೂ ವ್ಯಾಪಾರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ರೈತರು ಹಾಗೂ ಮಧ್ಯವರ್ತಿಗಳ ಮಧ್ಯೆ ಮಾತುಕತೆ ನಡೆಸಿ ಪ್ರತಿ 10 ಕೆಜಿ ಬಟಾಣಿಗೆ ರು. 265 ನಿಗದಿಗೊಳಿಸಲಾಯಿತು. ತೂಕ ಮತ್ತು ಅಳತೆಯಲ್ಲಿ ನಡೆಯುವ ಮೋಸ ಕುರಿತು ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು. ಇನ್ನು ಮುಂದೆ ಬಟಾಣಿ ತೂಕ ಮಾಡುವಾಗ ಎಲೆಕ್ಟ್ರಾನಿಕ್ ಯಂತ್ರವನ್ನೇ ಬಳಸಬೇಕೆಂದು ವ್ಯಾಪಾರಸ್ಥರಿಗೆ ತಾಕೀತು ಮಾಡಲಾಯಿತು.
--
ಹುಬ್ಬಳ್ಳಿ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಪತಿ ಜತೆ ಜಗಳ ಮಾಡಿದ ನಾಗಾಲ್ಯಾಂಡ್ ಮೂಲದ ಮಹಿಳೆಯೊಬ್ಬಳು ಬುಧವಾರ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಲ್ಲಿನ ಲೋಕಪ್ಪನ ಹಕ್ಕಲದ ನಿವಾಸಿ ಡೋಲಿತಾ ರಾಜು ದೇವ (25) ಕ್ಷುಲ್ಲಕ ಕಾರಣಕ್ಕೆ ಪತಿಯೊಂದಿಗೆ ಜಗಳ ಮಾಡಿದ್ದಲ್ಲದೆ ಪತಿಯನ್ನು ಹೆದರಿಸಲು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಕಿಮ್ಸ್‌ಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.