ಧಾರವಾಡ

ಬಿಸಿಯೂಟ ಬಗ್ಗೆ ಕಾಳಜಿ ಇರಲಿ

Published On :

ಧಾರವಾಡ: ಇತ್ತೀಚೆಗೆ ಬಿಹಾರದ ಶಾಲೆಯೊಂದರಲ್ಲಿ ಬಿಸಿಯೂಟದ ತೊಂದರೆಯಿಂದಾಗಿ 22 ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮುನ್ನೆಚ್ಚರಿಕೆಯಾಗಿ ಬಿಸಿಯೂಟ ನೀಡುವ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಮೇಲ್ವಿಚಾರಕರು ವಿಶೇಷ ಕಾಳಜಿ ವಹಿಸಬೇಕೆಂದು ತಾಲೂಕು ಪಂಚಾಯ್ತಿ ಸದಸ್ಯರು ಅಧಿಕಾರಿಗಳಿಗೆ ಎಚ್ಚರಿಸಿದರು.
ಗುರುವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಈ ತಾಕೀತು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಬಿಸಿಯೂಟಗೈದ ವಿದ್ಯಾರ್ಥಿಗಳು ಯಾವುದೇ ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ ವಿಟಾಮಿನ್ ಮಾತ್ರೆಗಳನ್ನು ನೀಡಲಾಗುತ್ತಿದೆ. ಈ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಲು ಆಗಸ್ಟ್ 1 ಮತ್ತು 2ರಂದು ಸಭೆ ಕರೆಯಲಾಗಿದೆ ಎಂದರು.
ಈಗಾಗಲೇ ಸುವರ್ಣ ಆರೋಗ್ಯ ಯೋಜನೆಯಡಿ ಮಕ್ಕಳ ಆರೋಗ್ಯ ತಪಾಸಣೆ ಆಗಸ್ಟ್ 17ರಿಂದ ಮಾರ್ಚ್ 30ರ ವರೆಗೆ ನಡೆಸಲಾಗುತ್ತಿದೆ. ತಪಾಸಣೆ ನಡೆಸಲು ಇಬ್ಬರು ಕಾಯಂ ವೈದ್ಯರನ್ನು ಹಾಗೂ ನುರಿತ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ವೈದ್ಯರಿಗಾಗಿ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿದ್ದು, ನಿರಂತರವಾಗಿ ಎಲ್ಲ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ತಾಲೂಕಿನ ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರಗಳನ್ನು ಸಮರ್ಪಕವಾಗಿ ಪೂರೈಸಲಾಗಿದೆ ಎಂದು ಪದಕಿ ಸ್ಪಷ್ಟಪಡಿಸಿದರು.
ತನಿಖೆಗೆ ಆಗ್ರಹ: ತಾಲೂಕಿನ ಕನಕೂರ ಗ್ರಾಪಂ ವ್ಯಾಪ್ತಿಯ ಕವಲಗೇರಿಯಲ್ಲಿ ಕೈಗೊಂಡ ಕಿರುನೀರು ಸರಬರಾಜು ಯೋಜನೆಯಲ್ಲಿ ಅಧಿಕಾರಿಗಳು ಬಿಡುಗಡೆಯಾದ ರು. 5 ಲಕ್ಷದಲ್ಲಿ ಈಗಾಗಲೇ ರು. 2.90 ಲಕ್ಷ ಖರ್ಚು ತೋರಿಸುತ್ತಿದ್ದಾರೆ. ನೂತನ ಬೋರ್‌ವೆಲ್‌ಗೆ ಹಳೆ ತಂತ್ರಜ್ಞಾನ ಸಾಮಗ್ರಿಗಳನ್ನು ಅಳವಡಿಸಲಾಗಿದ್ದು, ರು. 5 ಲಕ್ಷದಲ್ಲಿ ಅವ್ಯವಹಾರ ನಡೆದಿದೆ ಎಂದು ತಾಪಂ ಸದಸ್ಯ ಯೋಗೀಶಗೌಡ ಗೌಡರ ತನಿಖೆಗೆ ಆಗ್ರಹಿಸಿದರು.
ಈ ಮಧ್ಯೆ ತಾಪಂ ಸದಸ್ಯ ಮಂಜುಳಾ ಕೇಶಗೊಂಡ ಮಾತನಾಡಿ, ಯಾದವಾಡ ಗ್ರಾಮದಲ್ಲಿ ಕಿರುನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲು ಅಧಿಕಾರಿಗಳ ನೇತೃತ್ವದಲ್ಲಿ ಟಾರ್ ರಸ್ತೆಯನ್ನು ಬೇಕಾಬಿಟ್ಟಿ ಅಗೆಯಲಾಗಿದೆ. ಅಧಿಕಾರಿಗಳು ಮಾಡಿದ ರಸ್ತೆ ಅವಾಂತರದಿಂದ ಗ್ರಾಮಸ್ಥರು ಜನಪ್ರತಿನಿಧಿಗಳನ್ನು ದೂರುತ್ತಿದ್ದಾರೆ. ವಾಹನ ಸಂಚಾರ ಹಾಗೂ ಹೊಲಕ್ಕೆ ಹೋಗುವ ರೈತರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದ್ದರಿಂದ ಯೋಜನೆಯ ರು. 5 ಲಕ್ಷದಲ್ಲಿ ಕೇವಲ ರು. 3.80 ಲಕ್ಷ ಖರ್ಚಾಗಿದೆ. ಉಳಿದ ಹಣದಲ್ಲಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.
ಗೌರವ: ಇದೇ ಸಭೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮಾರಡಗಿ ಪ್ರೌಢಶಾಲೆಯ ತನುಜಾ ಜುಟ್ಟಣ್ಣವರ, ದ್ವಿತೀಯ ಸ್ಥಾನ ಪಡೆದ ಗರಗ ಜಯಕಿರ್ತಿ ಪ್ರೌಢಶಾಲೆಯ ಕಾರ್ತಿಕ ನಿಡಗುಂದಿ ಹಾಗೂ ತೃತೀಯ ಸ್ಥಾನ ಪಡೆದ ಉಪ್ಪಿನಬೆಟಗೇರಿಯ ಸಂಗೀತಾ ದೊಡವಾಡ ಅವರಿಗೆ ಪೋತ್ಸಾಹ ಧನ ನೀಡಿ ಗೌರವಿಸಿತು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಸುಮಂಗಲಾ ಕೌದೆಣ್ಣವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಬಂಡಿ, ತಾಪಂ ಸದಸ್ಯ ಕೃಷ್ಣಾ ಕೊಳ್ಳಾನಂಟಿ, ಮೋಹಿದ್ದೀನ್ ಚೌದರಿ ಇದ್ದರು.

ಜನರ ಆರೋಗ್ಯ ಕೆಟ್ಟರೆ ಯಾರು ಹೊಣೆ?
ಈಗ ಮಳೆಗಾಲವಾಗಿದ್ದರಿಂದ ಹೆಚ್ಚು ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ತಾಲೂಕು ಘಟಕದ ವೈದ್ಯರು ಏನು ಮಾಡುತ್ತಿದ್ದೀರಾ? ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮನುಷ್ಯರು ಮಲಗುವ ಸ್ಥಳದಲ್ಲಿ ನಾಯಿಗಳು ಮಲುಗುತ್ತಿವೆ. ತಾಲೂಕಿನ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ಮೊನ್ನೆಯಷ್ಟೆ ಆರೋಗ್ಯ ಸಚಿವರು, ಮೂಲಭೂತ ಸೌಕರ್ಯ ಸಚಿವರು ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರೂ ತಾವು ನಿರ್ಲಕ್ಷ್ಯ ವಹಿಸುತ್ತಿದ್ದೀರಿ. ಜನರಿಗೆ ಆರೋಗ್ಯ ಕುರಿತಂತೆ ಏನಾದರೂ ಸಮಸ್ಯೆಯಾದರೆ ಯಾರು ಹೊಣೆ ಎಂದು ಸದಸ್ಯರು ವೈದ್ಯರಿಗೆ ಪ್ರಶ್ನಿಸಿದರು. ಆದರೆ ತಾಲೂಕು ವೈದ್ಯಾಧಿಕಾರಿಗಳು ಹಾರಿಕೆ, ಸಂಬಂಧ ಇಲ್ಲ ಎನ್ನುವಂತೆ ವರ್ತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.