ಮೂಲಸೌಕರ್ಯ ನೀಡಲು ಬದ್ಧ
ಧಾರವಾಡ: ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಕಡೆ ಸಮರ್ಪಕ ಮೂಲಸೌಕರ್ಯ ಒದಗಿಸಿಕೊಡಲು ಬದ್ಧ ಎಂದು ಮೂಲಸೌಕರ್ಯ ಹಾಗೂ ವಾರ್ತಾ ಇಲಾಖೆ ಸಚಿವ ಸಂತೋಷ ಲಾಡ್ ಹೇಳಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಗೂ ಮುಂಚೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಎಲ್ಲೆಡೆ ಮೂಲಸೌಕರ್ಯಗಳ ಕೊರತೆ ಇದೆ. ಈ ಕುರಿತು ಪೂರ್ತಿ ಅಧ್ಯಯನ ಮಾಡಿ ಅನೇಕ ಯೋಜನೆಗಳ ಮೂಲಕ ಕೊರತೆಗಳನ್ನು ನೀಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲೂಕುಗಳನ್ನು ಕಾಂಗ್ರೆಸ್ ಸರ್ಕಾರ ಹಂತಹಂತವಾಗಿ ಅಭಿವೃದ್ಧಿಗೊಳಿಸಲು ಸಹ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾತನಾಡಿದ ಅವರು, ಕುಡಿಯುವ ನೀರು ಕೊಡಲು ಹಣಕಾಸಿನ ಸಮಸ್ಯೆ ಇಲ್ಲ. ಕುಡಿಯುವ ನೀರಿನ ಕೊರತೆ ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಅಗತ್ಯ ಬಿದ್ದಲ್ಲಿ ಕೊಳವೆ ಬಾವಿಗಳನ್ನು ಸಹ ಕೊರೆಸಲಾಗುತ್ತಿದೆ. ಈ ಸಮಸ್ಯೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಾವು ಬದ್ಧ ಎಂದ ಅವರು, ಒಟ್ಟು ರಾಜ್ಯದ ನೀರಾವರಿಗಾಗಿ ರಾಜ್ಯ ಸರ್ಕಾರ 10 ಸಾವಿರ ಕೋಟಿ ಹಣ ತೆಗೆದಿರಿಸಲಿದ್ದು, ಈ ಪೈಕಿ ಜಿಲ್ಲೆಯ ಬೆಣ್ಣಿ ಹಳ್ಳ ಹಾಗೂ ತುಪರಿ ಹಳ್ಳದ ಸಮಸ್ಯೆ ಸಹ ಬಗೆಹರಿಸಲಾಗುವುದು. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯಕ್ಕೆ ಬರುತ್ತೇವೆಂದು ಹೇಳಿದರು.
ಸುಸ್ತಾದ ಅಧಿಕಾರಿಗಳು: ಸಚಿವರಾದ ಮೇಲೆ ಮೊದಲ ಬಾರಿಗೆ ಶನಿವಾರ ಧಾರವಾಡಕ್ಕೆ ಆಗಮಿಸಿದ ಸಚಿವ ಸಂತೋಷ ಲಾಡ್, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಗೆ ಬರೋಬ್ಬರಿ ಎರಡು ಗಂಟೆ ತಡವಾಗಿ ಬಂದಿದ್ದರಿಂದ ಸಚಿವರ ಹಾದಿ ಕಾದು ಅಧಿಕಾರಿಗಳು ಸುಸ್ತಾಗಿ ಹೋದರು. ಸಂಜೆ 4ಕ್ಕೆ ನಿಗದಿಯಾಗಿದ್ದ ಸಭೆ 6.30ಕ್ಕೆ ಆರಂಭವಾಯಿತು. ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಕಾರಣ ಎಲ್ಲೆಡೆ ಪಕ್ಷದ ಕಾರ್ಯಕರ್ತರಿಂದ ಅಭಿನಂದನೆ ದೊರೆತಿದ್ದರಿಂದ ಇಷ್ಟೊತ್ತಾಯಿತು ದಯವಿಟ್ಟು ಕ್ಷಮಿಸಿ ಎಂದು ಸಚಿವರೇ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡರು. ಅಧಿಕಾರಿಗಳ ಸಭೆ ನಂತರ ಹಿರಿಯ ಸಾಹಿತಿ ಚನ್ನವೀರ ಕಣವಿ ಅವರನ್ನು ಭೇಟಿಯಾಗಿ ಅಲ್ಲಿಂದ ಮುರುಘಾಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದು ಅಲ್ಲಿಂದ ರಾತ್ರಿ 9ರ ಸುಮಾರಿಗೆ ಅಳ್ನಾವರಕ್ಕೆ ಸಚಿವರು ಪ್ರಯಾಣ ಬೆಳೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

