ಧಾರವಾಡ

ಕನ್ನಡ ಭವನಕ್ಕೆ ಬಾಲಗ್ರಹ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 18
ನಿಗದಿತ ಸಮಯಕ್ಕೆ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಿದ್ದಕ್ಕಾಗಿ ಐಎಸ್ಓ 9001:2000 ಪ್ರಮಾಣ ಪತ್ರ ಪಡೆದಿದ್ದ ರಾಜ್ಯದ ಮೊಟ್ಟಮೊದಲ ಮಹಾನಗರ ಪಾಲಿಕೆ ಹುಬ್ಬಳ್ಳಿ-ಧಾರವಾಡ. ಆದರೆ ಕನ್ನಡ ಭವನ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬತನ ಪ್ರಮಾಣಪತ್ರ ಕೊಟ್ಟಿದ್ದಕ್ಕೆ ಅಣಕ ಮಾಡಿದಂತಿದೆ. ಹುಬ್ಬಳ್ಳಿಯ ಆದರ್ಶನಗರದಲ್ಲಿ 2009ರ ಆಗಸ್ಟ್ನಲ್ಲಿ ಪ್ರಾರಂಭಗೊಂಡ ಕನ್ನಡ ಭವನ ನಿರ್ಮಾಣದ ಕಾಮಗಾರಿ, 2010ರ ಸೆಪ್ಟಂಬರ್ನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ 2013ರ ಆಗಷ್ಟ್ಗೆ ಇನ್ನೂ ಒಂದೂವರೆ ತಿಂಗಳು ಬಾಕಿ ಉಳಿದಿದ್ದರೂ, ಕನ್ನಡ ಭವನ ನಿರ್ಮಾಣದ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.ಕನ್ನಡ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ಇನ್ನೂ ಒಂದೂವರೆ ತಿಂಗಳಿಗೆ ನಾಲ್ಕು ವರ್ಷಗಳು ಗತಿಸಲಿವೆ. ನಿಗದಿತ ಸಮಯಕ್ಕೆ ಗುಣಮಟ್ಟದ ಸೇವೆ ಒದಗಿಸುವ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಯಿಂದ ಸಂದಿದ್ದ ಐಎಸ್ಓ 9001:2000 ಪ್ರಮಾಣ ಪತ್ರದ ನೈಜ ಉದ್ದೇಶ ಕಾಪಾಡಿಕೊಳ್ಳುವಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಡವಿದೆ. ಕನ್ನಡ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ನಾಲ್ಕು ವರ್ಷಗಳು ಗತಿಸುತ್ತ ಬಂದಿದ್ದರೂ, ಪಾಲಿಕೆ ಆಡಳಿತ ಮಾತ್ರ ಈ ಭವನ ನಿರ್ಮಾಣಕ್ಕೆ ಚುರುಕು ನೀಡುವಲ್ಲಿ ವೈಫಲ್ಯ ಕಂಡಿದೆ.
ಚುರುಕು ಮುಟ್ಟಿಸಿಲ್ಲ: ಕನ್ನಡ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡ ಈ ನಾಲ್ಕು ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬರೋಬ್ಬರಿ ಆರು ಜನ ಆಯುಕ್ತರು ಹಾಗೂ ನಾಲ್ವರು ಮೇಯರ್ಗಳನ್ನು ಕಂಡಿದೆ. ಈ ಆರೂ ಜನ ಆಯುಕ್ತರು ಹಾಗೂ ಮೇಯರ್ಗಳಲ್ಲಿ ಯಾರೊಬ್ಬರೂ ಕನ್ನಡ ಭವನ ನಿರ್ಮಾಣ ಕಾಮಗಾರಿಗೆ ಚುರುಕು ಮುಟ್ಟಿಸದೇ ಇರುವುದು ಐಎಸ್ಓ 9001:2000 ಪ್ರಮಾಣ ಪತ್ರ ಪಡೆದ ಪಾಲಿಕೆ ಆಡಳಿತಕ್ಕೆ ಹಿಡಿದ ಕೈಗನ್ನಡಿ.
2009ರ ಆಗಷ್ಟ್ನಲ್ಲಿ ಪಿ.ಬಿ. ರಸ್ತೆಯ ತಾಡಪತ್ರಿ ಗಲ್ಲಿಯಲ್ಲಿರುವ ಬಾಸೆಲ್ ಮಿಷನ್ ಹೈಸ್ಕೂಲ್ ಬಳಿ ಕನ್ನಡ ಭವನ ನಿರ್ಮಾಣದ ಕಾಮಗಾರಿಗೆ ಉದ್ಘಾಟನೆ ಜರುಗಿದ ಸಂದರ್ಭದಲ್ಲಿ ಅಂದಿನ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಶಾನಭಾಗ ಅವರು ಪಾಲಿಕೆಯ ಪ್ರಭಾರ (ಇನ್ಚಾರ್ಜ್) ಆಯುಕ್ತರ ಜವಾಬ್ದಾರಿ ವಹಿಸಿಕೊಂಡಿದ್ದರು. ನಂತರ ಪಾಲಿಕೆ ಆಯುಕ್ತರಾಗಿ ಡಾ. ಅಜಯ ನಾಗಭೂಷಣ, ರಾಮಕೃಷ್ಣ, ಪಿ.ಎಸ್. ವಸ್ತ್ರದ ಹಾಗೂ ಡಾ. ಕೆ.ವಿ. ತ್ರಿಲೋಕಚಂದ್ರ ಕಾರ್ಯನಿರ್ವಹಿಸಿದರು. ಇದೀಗ ವೈ.ಎಸ್. ಪಾಟೀಲ ಅವರು ಪಾಲಿಕೆ ಆಯುಕ್ತರಾಗಿದ್ದು, ಇವರ ಆಡಳಿತಾವಧಿಯಲ್ಲಿಯೂ ಕನ್ನಡ ಭವನ ಉದ್ಘಾಟನೆಗೊಂಡಿತೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.
ವೀರಣ್ಣ ಸವಡಿ ಮೇಯರ್ ಆಗಿದ್ದ ಸಮಯದಲ್ಲಿ ಕಾಮಗಾರಿಗೆ ಚಾಲನೆ ದೊರೆತಿತ್ತು. ನಂತರ ವೆಂಕಟೇಶ ಮೇಸ್ತ್ರಿ, ಪೂರ್ಣಾ ಪಾಟೀಲ ಹಾಗೂ ಡಾ. ಪಾಂಡುರಂಗ ಪಾಟೀಲ ಮೇಯರ್ ಗೌನ್ ಧರಿಸಿದ್ದರು. ಈ ಅವಧಿಯಲ್ಲಿ ಕನ್ನಡ ಭವನದ ನಿರ್ಮಾಣ ಕಾಮಗಾರಿ ಕುಂಟುತ್ತ ಸಾಗಿತ್ತಲ್ಲದೇ, ಪಾಲಿಕೆಯಿಂದ ಸರಿಯಾದ ಸಮಯಕ್ಕೆ ಹಣ ಪಾವತಿಯಾಗಲಿಲ್ಲವೆಂಬ ಕಾರಣಕ್ಕೆ ಗುತ್ತಿಗೆದಾರರು ಕಾಮಗಾರಿಯನ್ನೇ ಮೊಟಕುಗೊಳಿಸಿದ್ದರು. ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಕಟ್ಟಡ ಭವನದ ಪೂರ್ಣ ನಕಾಶೆ ಕೊಟ್ಟಿಲ್ಲವೆಂಬ ತಗಾದೆಯನ್ನೂ ಗುತ್ತಿಗೆದಾರರು ತೆಗೆದಿದ್ದರು. ಗುತ್ತಿಗೆದಾರರು ಹಾಗೂ ಪಾಲಿಕೆ ಅಧಿಕಾರಿಗಳ ಮಧ್ಯದ ಮುಸುಕಿನ ಜಗಳ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಯಿತು.
ಡಿಸಿ ಮಧ್ಯಸ್ಥಿಕೆ: ನಂತರ ಅಂದಿನ ಜಿಲ್ಲಾಧಿಕಾರಿಯಾಗಿದ್ದ ದರ್ಪಣ ಜೈನ್ ಅವರ ಮಧ್ಯಸ್ಥಿಕೆಯಿಂದ ಕಾಮಗಾರಿ ಮತ್ತೆ ಪ್ರಾರಂಭಗೊಂಡಿತಲ್ಲದೇ, ಚುರುಕು ಮಾತ್ರ ಪಡೆಯಲೇ ಇಲ್ಲ.
   ಕನ್ನಡ ಭಾಷೆ ಮತ್ತು ಸಾಹಿತ್ಯ ಚಟುವಟಿಕೆ ನಿರಂತರ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬೆಂಗಳೂರಿನಲ್ಲಿ ನಿರ್ಮಿಸಿರವ ಕನ್ನಡ ಭವನದ ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿಯೂ ಕನ್ನಡ ಭವನ ನಿರ್ಮಾಣಕ್ಕೆ ನಿರ್ಧರಿಸಲಾಯಿತು.
   2009ರ ಆಗಷ್ಟ್ನಲ್ಲಿ ತಾಡಪತ್ರಿ ಗಲ್ಲಿಯ ಬಾಸೆಲ್ ಮಿಷನ್ ಹೈಸ್ಕೂಲ್ ಬಳಿ ಕನ್ನಡ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಆದರೆ ಈ ಪ್ರದೇಶದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಭವನದ ನಿರ್ಮಾಣವನ್ನು ಆದರ್ಶನಗರದಲ್ಲಿ ಪ್ರಾರಂಭಿಸಲು ತೀರ್ಮಾನಿಸಲಾಯಿತು. ರಾಜ್ಯ ಬಿಜೆಪಿ ಸರ್ಕಾರ ಮಹಾನಗರ ಪಾಲಿಕೆಗೆ ನೀಡಿದ್ದ ಮೊದಲ ರು. 100 ಕೋಟಿ ವಿಶೇಷ ಅನುದಾನದಲ್ಲಿನ ಒಟ್ಟು ರು. 1.66 ಕೋಟಿ ವೆಚ್ಚದಲ್ಲಿ ಆದರ್ಶ ನಗರದ 5 ಸಾವಿರ ಚದುರ ಅಡಿ ವಿಸ್ತೀರ್ಣದಲ್ಲಿ ಕಾಮಗಾರಿ ಪ್ರಾರಂಭಗೊಂಡಿತು.
500 ಆಸನ ವ್ಯವಸ್ಥೆಯುಳ್ಳ ಎರಡು ಮಹಡಿಯ ಈ ಭವನದಲ್ಲಿ ಬೃಹತ್ ಗ್ರಂಥಾಲಯ, ಉಪಹಾರ ಗೃಹ, ಶೌಚಾಲಯ ಸೇರಿದಂತೆ ಇನ್ನಿತರ ಸೌಲಭ್ಯಗಳ ಕಾಮಗಾರಿಯೂ ನಡೆದಿದೆ. ಸದ್ಯ ಕನ್ನಡ ಭವನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆಯಾದರೂ ಇನ್ನೂ ಸಾಕಷ್ಟು ಕಾಮಗಾರಿ ಬಾಕಿ ಉಳಿದಿದೆ. ಭವನದಲ್ಲಿ ಇದುವರೆಗೂ ಆಸನದ ವ್ಯವಸ್ಥೆ ಮಾಡಲಾಗಿಲ್ಲ. ಭವನದ ಕಟ್ಟಡದ ಸೂತ್ತಲೂ ನಿರ್ಮಿಸಿದ್ದ ಗೋಡೆ ಹದಗೆಟ್ಟಿದ್ದು, ದುರಸ್ತಿಗೊಳಿಸಬೇಕಿದೆ. ದ್ವಾರ ಬಾಗಿಲು ನಿರ್ಮಿಸುವ ಕೆಲಸ ಇನ್ನೂ ನಡೆಯಬೇಕಿದೆ. ಕನ್ನಡ ಭವನದ ನಿರೀಕ್ಷೆಯಲ್ಲಿ ಈಗಾಗಲೇ ಮೂರು ರಾಜ್ಯೋತ್ಸವಗಳು ಕಾಲದ ಸನ್ನಿಧಿಗೆ ಸರೆದಿದ್ದು, ಈ ರಾಜ್ಯೋತ್ಸವದೊಳಗಾದರೂ ಕಾಮಗಾರಿ ಪೂರ್ಣಗೊಂಡಿತೇ ಕಾದು ನೋಡಬೇಕಷ್ಟೆ.

-ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.