ಪರ್ಯಾಯ ರಾಜಕೀಯ ವ್ಯವಸ್ಥೆ ಅಗತ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 19
ದೇಶದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿ, ದೇಶ ರಕ್ಷಣೆ, ಭ್ರಷ್ಟಾಚಾರ ವಿರೋಧಿ ವಿಚಾರವುಳ್ಳ ಪಕ್ಷಗಳೆಲ್ಲ ಒಟ್ಟಾಗಬೇಕಿದೆ. ಅಂದಾಗ ಮಾತ್ರ ದೇಶದ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ರಾಷ್ಟ್ರೀಯ ಚಿಂತಕ ಕೆ. ಎನ್. ಗೋವಿಂದಾಚಾರ್ಯ ಅಭಿಪ್ರಾಯ ಪಟ್ಟರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಆಧಾರಿತ ರಾಜಕೀಯ ವ್ಯವಸ್ಥೆ ದೇಶಕ್ಕೆ ಗಂಡಾಂತರ. ಇದರಿಂದಾಗಿ ರಾಜಕೀಯ ಅರಾಜಕತೆ ನಿರ್ಮಾಣವಾಗಿದೆ. ಒಂದು ಪಕ್ಷದ ಕಾರ್ಯಕರ್ತರು ಇನ್ನೊಂದು ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಾರೆ. ಇಂಥ ರಾಜಕೀಯ ವ್ಯವಸ್ಥೆ ತೊಲಗಿ ಸ್ವಸ್ಥ ರಾಜಕೀಯ ವ್ಯವಸ್ಥೆಯ ಅನಿವಾರ್ಯತೆ ದೇಶಕ್ಕಿದೆ ಎಂದರು.
ಬಹುತೇಕ ರಾಜಕೀಯ ಪಕ್ಷದಲ್ಲಿ ಕ್ರಿಮಿನಲ್, ಭ್ರಷ್ಟಾಚಾರ ಹಿನ್ನೆಲೆಯುಳ್ಳವರು ತುಂಬಿಕೊಂಡಿದ್ದಾರೆ. ಇಂಥವರನ್ನು ಪಕ್ಷದಿಂದ ಹೊರ ಹಾಕಬೇಕು. ಅಭಿವೃದ್ಧಿ ಹೆಸರಲ್ಲಿ ಜನರಿಗೆ ತೊಂದರೆ ನೀಡುವ ಪಕ್ಷಗಳ ಅಗತ್ಯತೆ ಇಲ್ಲ. ಪ್ರಚಾರ ಪಡೆಯುವ ಕಾಟಾಚಾರದ ಯೋಜನೆಗಳ ಹೊರತಾಗಿ ಜನ ಸ್ವಾಭಿಮಾನದಿಂದ ಬದುಕಲು ಉದ್ಯೋಗ ಕಲ್ಪಿಸಿಕೊಡುವಂತ ಯೋಜನೆಗಳನ್ನು ಜಾರಿಗೆ ತರುವ ರಾಜಕೀಯ ಪಕ್ಷ ಅಗತ್ಯ. ಹೈಕಮಾಂಡ್ನಂತಹ ಸಂಸ್ಕೃತಿ ಸ್ವಾತಂತ್ರ್ಯ ಭಾರತದ ರಾಜಕೀಯ ವ್ಯವಸ್ಥೆಯಲ್ಲಿರುವುದು ದುರಂತ. ಈ ವ್ಯವಸ್ಥೆಯಿಂದ ಪ್ರಜಾತಂತ್ರ ವ್ಯವಸ್ಥೆಯ ಘನತೆಗೆ ಪ್ರತಿಕೂಲ ಪರಿಣಾಮ ಬೀಳುತ್ತಿದೆ. ದೇಶದಲ್ಲಿ 39 ರಾಷ್ಟ್ರೀಯ ಹಾಗೂ 1500ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳು ನೋಂದಣಿಯಾಗಿವೆ. ಪ್ರಾದೇಶಿಕ ಪಕ್ಷಗಳ ಪೈಕಿ ಅರ್ಧಕ್ಕೂ ಹೆಚ್ಚು ಪಕ್ಷಗಳು ಸಕ್ರಿಯವಾಗಿಲ್ಲ. ಸಕ್ರಿಯವಿಲ್ಲದ ಪಕ್ಷಗಳನ್ನು ವಜಾಗೊಳಿಸುವ ಅಗತ್ಯವಿದೆ ಎಂದರು.
ಜವಾಬ್ದಾರಿ ವಿಮುಖ: ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿಯವರ ಆರ್ಥಿಕ ಸಲಹೆಗಾರ ಡಾ. ಜಗದೀಶ ಶೆಟ್ಟಿಗಾರ್, ಬಹುತೇಕ ರಾಜಕೀಯ ಪಕ್ಷಗಳು ದೇಶಕ್ಕೆ ರಕ್ಷಣೆ ನೀಡುವ ಸಾಮಾಜಿಕ ಕಳಕಳಿಯಂತಹ ಜವಾಬ್ದಾರಿಯಿಂದ ವಿಮುಖವಾಗಿವೆ. ಭ್ರಷ್ಟಾಚಾರವೇ ಪ್ರಮುಖ ಉದ್ದೇಶ ಎನ್ನುವಂತಾಗಿದೆ. ಬಹುಕೋಟಿ ಕೋಲ್ಗೆಟ್, 2ಜಿ ಸ್ಪೆಕ್ಟ್ರಂನಂತಹ ಹಗರಣಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳು ಸೇವೆಯನ್ನು ಬಿಟ್ಟು ವ್ಯಾಪಾರಕ್ಕಿಳಿದಿರುವುದು ಬೇಸರದ ಸಂಗತಿ ಎಂದರು. ಜನರಿಗೆ ರಾಜಕೀಯ ವ್ಯವಸ್ಥೆಯ ಮೇಲೆ ಭರವಸೆ ಉಳಿದಿಲ್ಲ. ಹೀಗಾಗಿ ಅಣ್ಣಾ ಹಜಾರೆ, ರಾಮದೇವ ಬಾಬಾರಂತವರು ಕೈಗೊಂಡಿರುವ ಚಳವಳಿಗೆ ವ್ಯಾಪಕ ಬೆಂಬಲ ಸೂಚಿಸುತ್ತಿದ್ದಾರೆ. ಈ ಮನೋಭಾವನೆಯುಳ್ಳ ಜನರು ಅನಿವಾರ್ಯವಾಗಿ ಯಾವುದೋ ಒಂದು ಪಕ್ಷವನ್ನು ಆಯ್ಕೆ ಮಾಡುತ್ತಾರೆ. ಇದನ್ನು ತಪ್ಪಿಸಲು ದೇಶಭಕ್ತರು, ಸದ್ವಿಚಾರವುಳ್ಳವರು ಹಾಗೂ ಭ್ರಷ್ಟಾಚಾರ ವಿರೋಧಿ ಭಾವನೆಯುಳ್ಳ ಎಲ್ಲ ರಾಜಕೀಯ ಪಕ್ಷಗಳು ಒಂದೇ ವೇದಿಕೆಯಡಿ ಬರಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಸಮಿತಿ ದೇಶವ್ಯಾಪಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕೇಂದ್ರ ಮಾಜಿ ಸಚಿವ ಆರಿಫ್ ಮೊಹ್ಮದ ಖಾನ್, ರಾಜಕಾರಣಿಗಳು ಸಂವಿಧಾನವನ್ನು ಧಿಕ್ಕರಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜಕೀಯ ಮಾಡುತ್ತಿರುವುದು ತರವಲ್ಲ. ಇದಕ್ಕೆ ಮೂಗುದಾರ ಹಾಕುವ ಅಗತ್ಯವಿದೆ. ಇಲ್ಲದೇ ಹೋದಲ್ಲಿ ಇಂತಹ ರಾಜಕಾರಣಿಗಳು ದೇಶ ಆಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡಬಹುದು ಎಂದು ಆತಂಕ ವ್ಯಕ್ತ ಪಡಿಸಿದರು. ಅಣ್ಣಾ ವಿನಯಚಂದ್ರ, ಸಿಎ ಮದ್ದನಸ್ವಾಮಿ ಬಿ ವಿ. ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

