ಧಾರವಾಡ

ದೊರಕೀತೆ ಬಡವರಿಗೆ ಸೂರು?

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 25
ಭ್ರಷ್ಟಾಚಾರದಿಂದಾಗಿ ಉಳ್ಳವರ ಪಾಲಾಗಿರುವ ಆಶ್ರಯ ಮನೆಗಳು ಸೂರಿಲ್ಲದ ಬಡವರಿಗೆ ನೀಡುವ ಪ್ರಯತ್ನ ಅಧಿಕಾರಿಗಳಿಂದ ಆಗುವುದೇ? ಇದಕ್ಕೆ ಕಾಲ ಮತ್ತು ಅಧಿಕಾರಿಗಳ ಕರ್ತವ್ಯ ಪ್ರಜ್ಞೆ ಉತ್ತರಿಸಬೇಕು ಅಷ್ಟೆ?

ಹೌದು, ಆಶ್ರಯ ಯೋಜನೆ ಮನೆಗಳನ್ನು ಹೇಗೆ ವ್ಯವಸ್ಥಿತವಾಗಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಕುರಿತು ಕನ್ನಡಪ್ರಭ ಬೆಳಕು ಚೆಲ್ಲಿದ್ದು, ಇದರ ಪರಿಣಾಮ ಇನ್ನಷ್ಟೇ ಆಗಬೇಕಿದೆ. ಅವಳಿ ನಗರದಲ್ಲಿ ಸಾವಿರಾರು ಬಡವರಿಗೆ ಸೂರು ಸಿಕ್ಕಿಲ್ಲ. ಇಂತಹ ಬಡವರಿಗೆ ಕನಿಷ್ಠ ಒಂದು ಸೂರು ಎನ್ನುವುದು ಆದಲ್ಲಿ ತಮ್ಮ ಜೀವನದಲ್ಲಿ ಎಷ್ಟೋ ನೆಮ್ಮದಿ ಕಾಣುತ್ತಾರೆ.
ಹೇಗೆ ನಡೆಯುತ್ತಿದೆ?: ಸಾಮಾನ್ಯವಾಗಿ ಪತಿ ಅಥವಾ ಸಂಬಂಧಿಕರ ಹೆಸರಿನಲ್ಲಿ ಕೂಡ ಆಸ್ತಿಪಾಸ್ತಿಗಳನ್ನು ಹೊಂದಿದ್ದರೂ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಆಶ್ರಯ ಮನೆಗಳನ್ನು ಪಡೆದುಕೊಂಡಿದ್ದಾರೆ. ಈ ಖೊಟ್ಟಿ ಫಲಾನುಭವಿಗಳೇ ಹಕ್ಕು ಪತ್ರ ಬಂದ ನಂತರ ಆಶ್ರಯ ಮನೆಗಳನ್ನು ಮಾರಾಟ ಮಾಡಿ ಸರ್ಕಾರಿ ಯೋಜನೆಯನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ನಿಯಮದ ದುರ್ಬಳಕೆ: ಬಡ ಕುಟುಂಬದ ಮಹಿಳೆಯ ಹೆಸರಿನಲ್ಲಿ ಮನೆ ಇದ್ದರೆ ಅಕ್ರಮ ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎಂದು ಸರ್ಕಾರ ಏನೋ ಸದುದ್ದೇಶದಿಂದ ಆಶ್ರಯ ಮನೆಗಳನ್ನು ಆಯಾ ಬಡ ಕುಟುಂಬದ ಮಹಿಳೆಯ ಹೆಸರಿನಲ್ಲಿ ನೀಡಬೇಕು ಎಂದು ನಿಯಮ ರೂಪಿಸಿತು. ಇದೀಗ ಸರ್ಕಾರದ ಈ ನಿಯಮವೇ ಆಶ್ರಯದಲ್ಲಿ ಅಕ್ರಮ ಹುಟ್ಟಲು ಕಾರಣವಾಗಿದೆ.

ಹೆಸರಿಗೆ ಮಾತ್ರ: ಪತ್ನಿಯ ಹೆಸರಿನಲ್ಲಿರುವ ಆಶ್ರಯ ಮನೆ ಮಾರಾಟ ಮಾಡುವುದಕ್ಕೆ ಮನೆಯ ಮುಖ್ಯಸ್ಥರು ಮುಂದಾಗುತ್ತಿದ್ದಾರೆ. ರಾಮನಗರದ ಖೊಟ್ಟಿ ಫಲಾನುಭವಿಯೊಬ್ಬರು ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ರಾಮನಗರದಲ್ಲಿರುವ ಆಶ್ರಯ ಮನೆ ನಮ್ಮ ಮನೆಯವರ ಹೆಸರಿನಲ್ಲಿದೆ. ಆದರೆ ಮನೆಯನ್ನು ಬಾಡಿಗೆ, ಲೀಸ್ ಇಲ್ಲವೇ ಮಾರಾಟದ ವ್ಯವಹಾರವನ್ನು ನಾನೇ ಮಾಡುತ್ತೇನೆ. ನಿಮಗೆ ಏನೇ ವ್ಯವಹಾರ ಮಾಡುವುದಿದ್ದರೂ ನನ್ನೊಂದಿಗೆ ಮಾತನಾಡಿ ಎನ್ನುವುದನ್ನು ನೋಡಿದರೆ ಹೆಸರಿಗೆ ಮಾತ್ರ ಮಹಿಳೆ ಫಲಾನುಭವಿ ಎನ್ನುವುದು ಮನದಟ್ಟಾಗುತ್ತದೆ. ಆಶ್ರಯ ಮನೆ ದಂಧೆಯಾಗಿಸಿಕೊಂಡಿರುವ ಕುಳಗಳನ್ನು ಪತ್ತೆ ಹಚ್ಚುವ ಕಾರ್ಯ ಜಿಲ್ಲಾಡಳಿತ ಮಾಡಬೇಕಿದೆ. ತನ್ಮೂಲಕ ಸರ್ಕಾರದ ಯೋಜನೆ ದುರುಪಯೋಗವಾಗುತ್ತಿರುವುದನ್ನು ತಡೆಗಟ್ಟಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗುವುದೇ ಕಾದು ನೋಡಬೇಕು.

ಬಡವರಿಗೂ ದಕ್ಕದ ಸೌಲಭ್ಯಗಳು: ಖೊಟ್ಟಿ ಫಲಾನುಭವಿಗಳು ಪಡೆದಿರುವ ಆಶ್ರಯ ಮನೆಗಳು ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಖಾಲಿ ಬಿದ್ದಿವೆ. ಆದರೆ ನಿಜವಾದ ಬಡವರು ಮಾತ್ರ ಸೂರು ಸಿಕ್ಕ ಸಂತಸದಲ್ಲಿ ಇಲ್ಲಿ ಬಂದು ನೆಲೆಸಿದ್ದರು. ಆದರೆ ಅರ್ಧಕ್ಕಿಂತ ಹೆಚ್ಚು ಮನೆಗಳು ಖಾಲಿ ಇರುವ ಕಾರಣ ಮಹಾನಗರ ಪಾಲಿಕೆ ಕೂಡ ಈ ಆಶ್ರಯ ಕಾಲೋನಿಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳುತ್ತಿಲ್ಲ. ಜನವಸತಿಯೇ ಇಲ್ಲ ಎಂದ ಮೇಲೆ ಅಭಿವೃದ್ಧಿ ಕೆಲಸ ಮಾಡಿದರೆ ಏನು ಬಿಟ್ಟರೆ ಏನು ಎಂಬ ಉದಾಸಿನತೆ ಅಧಿಕಾರಿಗಳಲ್ಲಿ ಮೂಡಿದ್ದು ಇದರ ಪರಿಣಾಮವಾಗಿ ಆಶ್ರಯ ಕಾಲೋನಿಗಳಲ್ಲಿ ರಸ್ತೆ, ನೀರು, ಚರಂಡಿ ಮತ್ತು ಸಾರ್ವಜನಿಕ ಶೌಚಾಲಯಗಳಿಲ್ಲದೇ ನರಕದ ಕೂಪಗಳಾಗಿ ಪರಿವರ್ತನೆಗೊಂಡಿವೆ.
-ಸತೀಶ ಪಾಗಾದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.