ಆರ್ಟ್ ಫಾರ್ ಹ್ಯುಮಾನಿಟಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 30
ಉತ್ತರಾಖಂಡದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಿಂದ ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿದ್ದು, ಅವರಿಗೆ ಸಾಧ್ಯವಾದಷ್ಟು ಆರ್ಥಿಕ ಸಹಾಯ ನೀಡುವ ದೃಷ್ಟಿಯಿಂದ ಧಾರವಾಡದ ಕಲಾಮಂಡಳ ಜು. 3ರಿಂದ ವಿಶೇಷ ಕಲಾ ಪ್ರದರ್ಶನ ಹಮ್ಮಿಕೊಂಡಿದೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಲಾಮಂಡಳ ಸಂಸ್ಥೆಯ ಕಾರ್ಯದರ್ಶಿ ಮಧು ದೇಸಾಯಿ, ಪ್ರಸ್ತುತ ಅತಂತ್ರ ಸ್ಥಿತಿಯಲ್ಲಿರುವ ಅಲ್ಲಿನ ಜನರಿಗೆ ಮಾನವೀಯ ದೃಷ್ಟಿಯಿಂದ ಸಹಕಾರ ನೀಡುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸಂಸ್ಥೆಯು ಜು. 3ರಿಂದ 7ರ ವರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳ 50 ಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ. ಮಾರಾಟದಿಂದ ಬಂದ ಹಣವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಿಸಲಾಗುವುದು. ಈ ಕಾರ್ಯಕ್ಕೆ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಧಾರವಾಡದ ಲೈಯನ್ಸ್ ಕ್ಲಬ್ ಹಾಗೂ ಪ್ರದರ್ಶನ ನಡೆಯುವ ಮಯೂರ ಆದಿತ್ಯಾ ರೆಸಾರ್ಟ್ ಸಹಕಾರ ನೀಡಿವೆ ಎಂದರು.
ಪ್ರಖ್ಯಾತ ಕಲಾವಿದರ ಕೃತಿಗಳು: ರಾಷ್ಟ್ರದ ಪ್ರಖ್ಯಾತ ಕಲಾವಿದರಾದ ಗುಲ್ಬರ್ಗಾದ ವಿ.ಜಿ. ಅಂದಾನಿ, ಪುಣೆಯ ರಾಮಚಂದ್ರ ಕರಟಮಲ್, ಸತಾರಾದ ವಿಜಯಕುಮಾರ ದುಮ್ಮಲ ಹೀಗೆ ಮೈಸೂರು, ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡದ ಅನೇಕ ಕಲಾವಿದರು ಈಗಾಗಲೇ ತಮ್ಮ ಕಲಾಕೃತಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಫೇಸ್ಬುಕ್ನಲ್ಲಿ ಆಮಂತ್ರಣ ಪತ್ರಿಕೆ ಹಾಕಿದ್ದು, ಸುಮಾರು 500 ಜನ ಸ್ಪಂದನೆ ಮಾಡಿದ್ದಾರೆ ಮಾತ್ರವಲ್ಲದೇ, ಕಲಾಕೃತಿಗಳನ್ನು ಖರೀದಿಸುವ ಭರವಸೆ ನೀಡಿದ್ದಾರೆ ಎಂದರು. ಜು. 3ರಂದು ಸಂಜೆ 5.30ಕ್ಕೆ ಮಯೂರ ರೆಸಾರ್ಟ್ನಲ್ಲಿ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ವಿನಯ ಕುಲಕರ್ಣಿ ಹಾಗೂ ಅರವಿಂದ ಬೆಲ್ಲದ ಭಾಗವಹಿಸುತ್ತಾರೆ ಎಂದು ಮಧು ದೇಸಾಯಿ ತಿಳಿಸಿದರು.
ಕಾರ್ಯಕ್ಕೆ ಸ್ಪಂದಿಸಿ: ಕಲಾ ಮಂಡಳದ ಅಧ್ಯಕ್ಷ ಆರ್ಯ ಆಚಾರ್ಯ ಮಾತನಾಡಿ, ಧಾರವಾಡ ಕೇಂದ್ರವಾಗಿಸಿಕೊಂಡು ಕಲಾಮಂಡಳ ದೇಶ-ವಿದೇಶಗಳಲ್ಲಿ ದೃಶ್ಯಕಲಾ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು, ಈ ಹಿಂದೆ ಲಾತೂರ, ಕಾಶ್ಮೀರ, ಗುಜರಾತ್ ಭೂಕಂಪದ ಸಂದರ್ಭ, ಕಾರ್ಗಿಲ್ ಯುದ್ಧ ಹಾಗೂ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿ ಸಂದರ್ಭದಲ್ಲಿ ಸಂಸ್ಥೆಯು ಸ್ಪಂದಿಸಿದ್ದು, ಉತ್ತರಾಖಂಡದ ಪ್ರವಾಹದ ವೇಳೆಯೂ ಮಾನವೀಯತೆಯಿಂದ ಈ ಕಾರ್ಯ ಮಾಡಲಾಗುತ್ತಿದೆ. ಕಲಾಸಕ್ತರು ಈ ಕಾರ್ಯಕ್ಕೆ ಸ್ಪಂದಿಸಬೇಕೆಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಲೈಯನ್ಸ್ ಕ್ಲಬ್ನ ಹರ್ಷ ದೇಸಾಯಿ, ಉಸ್ಮಾನ ದೇಸಾಯಿ, ಮನೋಹರ ಮೋರೆ, ಗಾಯತ್ರಿ ದೇಸಾಯಿ, ಡಾ. ತಾವರಗೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

