ಕಾರ್ಯಕರ್ತರಿಂದ ಕಾಗೇರಿ ತರಾಟೆ
-ವಿಶೇಷ ವರದಿ
ಶಿರಸಿ: ಚುನಾವಣಾ ಆತ್ಮಾವಲೋಕನ ಕುರಿತಂತೆ ಗುರುವಾರ ನಡೆದ ಬಿಜೆಪಿ ಸಭೆಯಲ್ಲಿ ಕಾರ್ಯಕರ್ತರು ಸಚಿವ ಕಾಗೇರಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಗುರುವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಬಿಜೆಪಿಯ ಜಿಲ್ಲಾ ಕಚೇರಿಯಲ್ಲಿ ಶಿರಸಿ ನಗರ ಕಾರ್ಯಕರ್ತರ ಸಭೆ ಕರೆದಿದ್ದರು. ಈ ಸಭೆಯಲ್ಲಿ ನಗರಸಭೆಯ ಸೋಲಿನ ಕುರಿತಂತೆ ಆತ್ಮಾವಲೋಕನ ಮಾಡಿಕೊಳ್ಳುವ ಪ್ರಯತ್ನ ನಡೆಯಿತು. ಆದರೆ ಸಭೆಗೆ ಬಂದ ಕಾರ್ಯಕರ್ತರಲ್ಲಿ ಬಹುತೇಕರು ತೀವ್ರ ಅಸಮಾಧಾನ ಹೊರಗೆಡವಿ ಸೋಲಿಗೆ ಸಚಿವರ ಕಾರ್ಯವೈಖರಿಯೇ ಕಾರಣ ಎಂದು ಬಹುತೇಕ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಈ ಸೋಲಿಗೆ ನಾವು ಎದೆಗುಂದಬಾರದು. ಬರುವ ವಿಧಾನಸಭಾ ಚುನಾವಣೆ ನಮಗೆ ಇನ್ನೂ ದೊಡ್ಡ ಸವಾಲಾಗಿ ಎದುರು ನಿಂತಿದೆ. ಅದಕ್ಕಾಗಿ ಸಿದ್ಧರಾಗಬೇಕು. ಕಾರ್ಯಕರ್ತರ ಪಡೆಯನ್ನು ಚುರುಕುಗೊಳಿಸಬೇಕು ಎಂದು ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಂತೆ ಆಕ್ರೋಶಗೊಂಡ ಕಾರ್ಯಕರ್ತರು ತಮ್ಮ ಮನದಾಳದ ಅಭಿಪ್ರಾಯವನ್ನು ಹೊರಗೆಡವಲು ಪ್ರಾರಂಭಿಸಿದರು.
ಸೋತ ಪ್ರಮುಖರಲ್ಲಿ ಹಲವರು ಸಭೆಗೆ ಆಗಮಿಸಲೇ ಇಲ್ಲ. ಗೆದ್ದ ಅಭ್ಯರ್ಥಿಗಳು ಮತ್ತು ಸೋತ ಅಭ್ಯರ್ಥಿಗಳ ವಾರ್ಡ್ನ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದು, ಅಭಿಪ್ರಾಯ ಹಂಚಿಕೊಳ್ಳುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಸಚಿವರು ಈಗ ನಡೆದಿರುವ ಚುನಾವಣೆ ಸೋಲಿನ ಕುರಿತಂತೆ ಆತ್ಮಾವಲೋಕನಕ್ಕೆ ಒತ್ತು ಕೊಡದೆ ಬರಲಿರುವ ತಮ್ಮ ಕ್ಷೇತ್ರದ ಚುನಾವಣೆಯ ಕುರಿತಂತೆ ಮಾತನಾಡಿದ್ದು ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿತು.
ಪ್ರಯತ್ನವಾಗುತ್ತಿಲ್ಲ: ಸಚಿವರ ಆಪ್ತರೆಂದೇ ಗುರುತಿಸಿಕೊಂಡ ನಗರಸಭೆ ಸದಸ್ಯರೊಬ್ಬರು ಮಾತನಾಡಿ, ಕೇವಲ ನಿಮ್ಮ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಾತನಾಡುತ್ತೀರಿ. ಈಗ ಆದ ಸೋಲಿನ ಕುರಿತಂತೆ ಪರಾಮರ್ಶೆ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಪಕ್ಷ ಸಂಘಟನೆಗೆ ಈವರೆಗೂ ಆದ್ಯತೆ ನೀಡಲಾಗುತ್ತಿಲ್ಲ. ಜನಸಾಮಾನ್ಯರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸುತ್ತಿಲ್ಲ. ಬಿಪಿಎಲ್ ಕಾರ್ಡ್ದಾರರಿಗೆ ರು. 2ಗೆ ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದ್ದೀರಿ. ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದವರ ಕುರಿತಂತೆ ಸರ್ಕಾರ ಯಾವ ಕಾರ್ಯಕ್ರಮವನ್ನೂ ಹಾಕಿಕೊಳ್ಳಲಿಲ್ಲ. ಕೇಂದ್ರ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಪೆಟ್ರೋಲ್ ಬೆಲೆಯನ್ನು ಇಳಿಸಿದೆ. ಆದರೆ ನಮ್ಮ ಸರ್ಕಾರ ಪೆಟ್ರೋಲ್ ಬೆಲೆ ಇಳಿಸಿ ಮಧ್ಯಮ ವರ್ಗದವರ ಸಹಾಯಕ್ಕೆ ನಿಲ್ಲದಿರುವುದು ಚುನಾವಣಾ ಸೋಲಿಗೆ ಕಾರಣಗಳಲ್ಲೊಂದಾಗಿದೆ. ಇಂತಹ ಸಂಗತಿಗಳ ಕಡೆ ನೀವು ಗಮನ ನೀಡುತ್ತಿಲ್ಲವೇಕೆ ಎಂದು ಮಾತಿನ ವಾಗ್ದಾಳಿಯನ್ನೇ ನಡೆಸಿದರು.
ಇದಕ್ಕೆ ಅಲ್ಲಿದ್ದ ಮಿಕ್ಕ ಎಲ್ಲರೂ ಚಪ್ಪಾಳೆ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು. ಕ್ಯಾಬಿನೆಟ್ ಮತ್ತು ಉಸ್ತುವಾರಿ ಸಚಿವರಾಗಿ ತಾವು ಎರಡನೇ ಮಟ್ಟದ ನಾಯಕರನ್ನು ಬೆಳೆಸಲೇ ಇಲ್ಲ. ಪ್ರತಿ ವಾರ್ಡ್ನಲ್ಲಿರುವ ಅತಿ ಚಿಕ್ಕ ಕಾಮಗಾರಿ ಉದ್ಘಾಟನೆ ಮತ್ತು ಗುದ್ದಲಿ ಪೂಜೆಯನ್ನೂ ಮಾಡುತ್ತ ಸ್ಥಳೀಯ ನಗರಸಭೆ ಸದಸ್ಯರ ಬೆಳೆವಣಿಗೆಗೆ ಅಡ್ಡಿಯುಂಟುಮಾಡಿದ್ದೀರಿ. ಇದರಿಂದಾಗಿ ಸ್ಥಳೀಯ ಸದಸ್ಯರು ತಮ್ಮ ವಾರ್ಡುಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಸಿದ್ದರ ಕುರಿತು ಮತದಾರರಿಗೆ ಮನಗಾಣಿಸುವಲ್ಲಿ ಸೋಲುವಂತಾಯಿತು. ನಿಮ್ಮ ಮತ್ತು ಸಂಸದರ ಮಧ್ಯೆ ಇರುವ ಭಿನ್ನಾಭಿಪ್ರಾಯ ಈ ಸೋಲಿನ ಪ್ರಮುಖ ಅಂಶಗಳಲ್ಲೊಂದಾಗಿದೆ. ನಿಮ್ಮಿಬ್ಬರ ಧೋರಣೆ ಮತ್ತು ಕಚ್ಚಾಟವೇ ಪಕ್ಷದ ಹೀನಾಯ ಸ್ಥಿತಿಗೆ ಕಾರಣವಾಗಿದೆ. ಹೀಗಾದರೆ ಪಕ್ಷ ಸಂಘಟಿಸುವುದಾದರೂ ಹೇಗೆ ಎನ್ನುವುದನ್ನು ನೀವೇ ಹೇಳಬೇಕು ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಅನುದಾನ ಸಮರ್ಪಕ ಬಳಕೆಯಾಗಿಲ್ಲ: ಇನ್ನೋರ್ವ ಕಾರ್ಯಕರ್ತ ಮಾತನಾಡಿ, ಅಭಿವೃದ್ಧಿಗೆ ಅನುದಾನ ತಂದಿದ್ದೇವೆಂದರೆ ಸಾಕಾಗುವುದಿಲ್ಲ. ಬಂದ ಅನುದಾನ ಸಮರ್ಪಕ ಬಳಕೆಯಾಗಿದೆಯೇ ಎನ್ನುವುದರ ಅವಲೋಕನವೂ ನಡೆಯಬೇಕು. ಕೇವಲ ಅನುದಾನ ಅಭಿವೃದ್ಧಿ ಎಂದು ಹೇಳಿಕೊಂಡರೆ ಜನ ನಮ್ಮತ್ತ ತಿರುಗಿಯೂ ನೋಡುವುದಿಲ್ಲ. ಕಾಮಗಾರಿಗಳ ಗುಣಮಟ್ಟದ ಕುರಿತಂತೆಯೂ ಮೇಲ್ವಿಚಾರಣೆ ನಡೆಯಬೇಕಾಗಿತ್ತು. ಅದೂ ಆಗಿಲ್ಲ. ನಗರದ ಸಾಮಾನ್ಯ ಕಾರ್ಯಕರ್ತರು ಚಿಕ್ಕಪುಟ್ಟ ಕೆಲಸಗಳನ್ನು ಹೇಳಿಕೊಂಡು ನಿಮ್ಮ ಕಚೇರಿಗೆ ಹೋದರೆ ಹೇಳುವವರು, ಕೇಳುವವರೇ ಇಲ್ಲ. ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವವರಿಲ್ಲ.
ಚುನಾವಣೆಯಲ್ಲಿ ಬೇರೆ ಪಕ್ಷಗಳು ಕಾರ್ಯಕರ್ತರ ಯೋಗಕ್ಷೇವುಕ್ಕಾಗಿ ಧಾರಾಳವಾಗಿ ಖರ್ಚು ಮಾಡಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಕಾರ್ಯಕರ್ತರನ್ನು ತೀವ್ರ ಕಡೆಗಣಿಸಲಾಗಿದೆ. ಕೆಲವೇ ಕೆಲ ಜನರ ಕೈಯಲ್ಲಿ ಆಡಳಿತ ಯಂತ್ರ ಸೀಮಿತಗೊಂಡಿದೆ. ಇಂಥ ಭಾವನೆಯಿಂದಾಗಿಯೇ ಕಾರ್ಯಕರ್ತರು ವಿಮುಖರಾಗಿದ್ದಾರೆ. ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಹಿಡಿದಿಡುವ ಸಾಮರ್ಥ್ಯ ಇಲ್ಲದಂತಾಗಿದೆ ಎನ್ನುವುದೇ ಅತ್ಯಂತ ಹಾಸ್ಯಾಸ್ಪದ ಸಂಗತಿಯಾಗಿದೆ. ಹೀಗಾದರೆ ಬರುವ ಚುನಾವಣೆಯಲ್ಲಿ ಕಾರ್ಯಕರ್ತರು ನಮ್ಮೊಂದಿಗಿರಲು ಸಾಧ್ಯವಿಲ್ಲ. ನಾವು ಎಲ್ಲೆಲ್ಲಿ ವಿಫಲರಾಗಿದ್ದೇವೆ ಎನ್ನುವುದರ ಕುರಿತಂತೆ ಚಿಂತನೆ ನಡೆಯದೆ ಮುಂದಿನ ಚುನಾವಣೆ ಕುರಿತಂತೆ ಯೋಜನೆ ರೂಪಿಸುವುದು ಸೀಮಿತ ರಾಜಕಾರಣ ಎನ್ನುವ ಆಪಾದನೆಗೆ ಗುರಿಯಾಗಬೇಕಾದೀತು ಎನ್ನುವ ಎಚ್ಚರಿಕೆ ನೀಡಿದರು.
ಕಾರ್ಯಕರ್ತರ ರೋಷಾವೇಷದ ಮಾತುಗಳಿಗೆ ಸ್ಪಷ್ಟನೆಯನ್ನೂ ನೀಡದೇ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ, ಮುಂದಿನ ಸಭೆಯಲ್ಲಿ ಬರುವ ವಿಧಾನಸಭೆ ಚುನಾವಣೆ ಕುರಿತಂತೆ ಚರ್ಚಿಸೋಣ ಎಂದು ಸಭೆಯನ್ನು ಬರಕಾಸ್ತುಗೊಳಿಸಲಾಯಿತೆಂದು ಪಕ್ಷದ ಮೂಲವೊಂದು ಪತ್ರಿಕೆಗೆ ಮಾಹಿತಿ ನೀಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

