ಮತದಾನ ಮುಕ್ತಾಯ: ಎಣಿಕೆಗೆ ಕಾತರ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 5
ವಿಧಾನಸಭಾ ಚುನಾವಣೆಯ ಪ್ರಮುಖ ಘಟ್ಟ ಮತದಾನ ಅಂತೂ ಇಂತೂ ಶಾಂತಿಯುತವಾಗಿ ಮುಕ್ತಾಯವಾಗಿದೆ.
ನಗರ ಪ್ರದೇಶದಲ್ಲಿನ ಮತದಾರರು ಸಾವಕಾಶವಾಗಿ ಮತದಾನಕ್ಕೆ ಆಗಮಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ 7ರಿಂದಲೇ ಪಾಳಿ ಹಚ್ಚಿ ತಮ್ಮ ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಕಂಡುಬಂದಿತು. ಹು-ಧಾ ಪಶ್ಚಿಮ, ಧಾರವಾಡ, ಕಲಘಟಗಿ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರಗಳ ಕೆಲ ಮತಗಟ್ಟೆಗಳಿಗೆ ಪತ್ರಕರ್ತರ ತಂಡ ಭೇಟಿ ನೀಡಿ ಭಾನುವಾರ ಮತದಾನದ ಚಟುವಟಿಕೆಯನ್ನು ವೀಕ್ಷಿಸಿತು.
ಧಾರವಾಡ ಶಹರದಲ್ಲಿ ಮಧ್ಯಾಹ್ನ 12ರ ಹೊತ್ತಿಗೆ ಕೇವಲ ಶೇ. 20ರಿಂದ 25ರಷ್ಟು ಮತದಾನವಾಗಿದ್ದರೆ, ಗ್ರಾಮೀಣ ಪ್ರದೇಶವಾದ ಹೆಬ್ಬಳ್ಳಿ, ಶಿವಳ್ಳಿ ಇತರೆಡೆ ಶೇ. 35ರಷ್ಟಾಗಿತ್ತು. ಅಮ್ಮಿನಬಾವಿಯಲ್ಲಿ ಮಧ್ಯಾಹ್ನ 1ರ ಸುಮಾರಿಗೆ ಮತಗಟ್ಟೆ 78ರಲ್ಲಿ 796 ಮತದಾರರ ಪೈಕಿ 424 (ಶೇ. 53) ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 2ರ ಸುಮಾರಿಗೆ ಉಪ್ಪಿನ ಬೆಟಗೇರಿಯ 21ನೇ ಮತಗಟ್ಟೆಯಲ್ಲಿ 1054 ಮತಗಳ ಪೈಕಿ 637 (ಶೇ. 60) ಮತಗಳು, 22ನೇ ಮತಗಟ್ಟೆಯಲ್ಲಿ 1,160ರ ಪೈಕಿ 510 (ಶೇ. 44), 23ನೇ ಮತಗಟ್ಟೆಯಲ್ಲಿ 1,241ರ ಪೈಕಿ 653 (ಶೇ. 52) ಮತಗಳು ಚಲಾವಣೆಯಾಗಿದ್ದವು. ತಡಕೋಡದ 5ನೇ ಮತಗಟ್ಟೆಯಲ್ಲಿ 2.15ರ ಸುಮಾರಿಗೆ 1,246ರ ಪೈಕಿ 743 ಮತಗಳು (59.63) ಚಲಾವಣೆಯಾಗಿದ್ದವು. ಅಂತೆಯೇ ಗರಗನ 37ನೇ ಮತಗಟ್ಟೆಯಲ್ಲಿ 610ರ ಪೈಕಿ 353 (ಶೇ. 57) ಹಾಗೂ 37ಎ ಮತಗಟ್ಟೆಯಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ 1,051ರ ಪೈಕಿ 583 (ಶೇ.55) ಮತಗಳು ಚಲಾವಣೆಗೊಂಡಿದ್ದವು. ಆದರೆ, ಈ ಮತದಾನದ ಹುಮ್ಮಸ್ಸು ನಗರ ಪ್ರದೇಶದಲ್ಲಿ ಮಾತ್ರ ಕಂಡು ಬರಲಿಲ್ಲ.
ವಯೋವೃದ್ಧರು, ಅಂಗವಿಕಲರು ಮತ್ತು ಅನಾರೋಗ್ಯಕ್ಕಿಡಾದವರನ್ನು ವಾಹನಗಳಲ್ಲಿ ಕರೆ ತಂದು ಮತ ಚಲಾಯಿಸಲು ಅವಕಾಶ ಕಲ್ಪಿಸುತ್ತಿರುವುದು ಬಹುತೇಕ ಮತಕೇಂದ್ರದಲ್ಲಿ ನಡೆಯಿತು. ಕಳೆದ ಬಾರಿಗಿಂತ ಚುನಾವಣಾ ನೀತಿಸಂಹಿತೆಯನ್ನು ಈ ಬಾರಿ ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಿದ್ದರಿಂದ ಉಡುಗೊರೆಗಳ ಆಟ ನಡೆಯಲಿಲ್ಲ. ಆದರೆ, ಹಣಕಾಸು ವ್ಯವಹಾರ ಜೋರಾಗಿ ನಡೆದಿದೆ ಎಂಬ ಮಾತುಗಳಲ್ಲಿ ಹಳ್ಳಿ ಜನರ ಬಾಯಲ್ಲಿ ಓಡಾಡುತ್ತಿದ್ದವು.
ಎಲ್ಲ ಮತಗಟ್ಟೆ ಬಳಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರು ಬಿರು ಬಿಸಿಲಿನಲ್ಲಿಯೂ ಸತತ ಓಡಾಟದೊಂದಿಗೆ ನಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರನ್ನು ಒತ್ತಾಯಿಸುತ್ತಿದ್ದರು. ಅಲ್ಲದೇ, ಕೆಲ ಮತಗಟ್ಟೆಯ ಬಳಿ ಕಾರ್ಯಕರ್ತರಿಗೂ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದವು. ಅಲ್ಲದೇ, ವೃದ್ಧರನ್ನು ನಾ ಮುಂದು ತಾ ಮುಂದು ಎಂದು ಪಕ್ಷದ ಕಾರ್ಯಕರ್ತರು ವಾಹನಗಳ ಮೂಲಕ ಮತಗಟ್ಟೆಗೆ ಹೊತ್ತು ತರುತ್ತಿದ್ದರು ದೃಶ್ಯಗಳು ಸಾಮಾನ್ಯವಾಗಿದ್ದವು.
ಇನ್ನು ಕೆಲ ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ಅವಕಾಶ ನೀಡಲಾಗುತ್ತಿತ್ತು. ಇನ್ನು ಕೆಲ ಮತಗಟ್ಟೆಯಲ್ಲಿ ಪೊಲೀಸರಿಗೆ ಚುನಾವಣೆ ಆಯೋಗ ನೀಡಿದ ಪಾಸ್ ತೋರಿಸಿದರೂ ಒಳಗೆ ಬಿಡುತ್ತಿರಲಿಲ್ಲ. ಅಲ್ಲದೇ, ಮಾಹಿತಿ ನೀಡಲು ಹಿಂದೇಟು ಹಾಕಿದ ಘಟನೆಗಳೂ ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

