ಹುಬ್ಬಳ್ಳಿಯಲ್ಲಿ ಲಾಡ್ಜ್ ಫುಲ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 7
ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ಅಭ್ಯರ್ಥಿಗಳ ಎದೆ ಬಡಿತವೂ ಹೆಚ್ಚಿದೆ. ಎಲ್ಲರಲ್ಲಿಯೂ ಕುತೂಹಲ ಮನೆ ಮಾಡಿದೆ. ಈ ನಡುವೆ ಕ್ಷಣ ಕ್ಷಣದ ಫಲಿತಾಂಶ ತಿಳಿದುಕೊಳ್ಳಲು ಬಹುತೇಕ ಮರಿಪುಡಾರಿಗಳು ಹಾಗೂ ಅಭ್ಯರ್ಥಿಗಳು ಲಾಡ್ಜ್ಗಳಿಗೆ ಮೊರೆ ಹೋಗಿದ್ದಾರೆ.
ಹೌದು, ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೆ ಮುನ್ನಾ ದಿನವೇ ಹುಬ್ಬಳ್ಳಿಯ ಲಾಡ್ಜ್ಗಳು ಭರ್ತಿಯಾಗಿ ಬಿಟ್ಟಿವೆ. ಇದೇನಿದು ಆಶ್ಚರ್ಯ ಚುನಾವಣಾ ಫಲಿತಾಂಶಕ್ಕೂ ಲಾಡ್ಜ್ಗಳಿಗೂ ಏನು ಸಂಬಂಧ ಎನ್ನುತ್ತೀರಾ? ಸಂಬಂಧವಿದೆ ಸ್ವಾಮಿ, ಅದೇನೆಂದರೆ ಲಾಡ್ಜ್ನಲ್ಲಿರುವ ಟಿವಿ ಮುಂದೆ ಕುಳಿತು ಯಾವ ತೊಂದರೆಯಿಲ್ಲದೆ ಹಾಯಾಗಿ ಫಲಿತಾಂಶ ತಿಳಿದುಕೊಳ್ಳಬಹುದೆಂಬ ಉದ್ದೇಶ. ಹೀಗಾಗಿ ಹುಬ್ಬಳ್ಳಿಯ ಲಾಡ್ಜ್ಗೆ ಈಗ ಭರ್ಜರಿ ಬೇಡಿಕೆ ಬಂದು ಬಿಟ್ಟಿದೆ. ಚುನಾವಣೆ ಸಮಯದಲ್ಲಿ ಪ್ರಚಾರ ಕಾರ್ಯಕ್ಕೆಂದು ಪರ ಊರಿನವರು ಹುಬ್ಬಳ್ಳಿಗೆ ಬಂದಿದ್ದರಿಂದ ಆಗ ಲಾಡ್ಜ್ಗಳು ಫುಲ್ ಆಗಿದ್ದವು. ಚುನಾವಣೆಯ ಮುಗಿಯುತ್ತಿದ್ದಂತೆಯೇ ಲಾಡ್ಜ್ಗಳು ಖಾಲಿಯಾಗಿ ಬಿಟ್ಟಿದ್ದವು. ಆದರೀಗ ಮತ್ತೆ ಲಾಡ್ಜ್ಗಳಿಗೆ ರಾಜಕೀಯ ಕಳೆ ಬಂದು ಬಿಟ್ಟಿದೆ.
ಏಕಾಂತ ಅರಸಿ: ಮತ ಎಣಿಕೆ ನಡೆಯುವ ಕೇಂದ್ರದಲ್ಲಿದ್ದರೆ ಆಯಾ ಕ್ಷೇತ್ರದ ಮಾಹಿತಿ ಮಾತ್ರ ಲಭಿಸುತ್ತದೆ. ಜತೆಗೆ ಗದ್ದಲದ ನಡುವೆ ಆ ಮಾಹಿತಿಯೂ ಕೂಡ ಸರಿಯಾಗಿ ಸಿಗುವುದಿಲ್ಲ. ಒಂದು ವೇಳೆ ಟಿವಿ ಮುಂದೆ ಕುಳಿತರೆ ಈ ಕ್ಷೇತ್ರದ ಜತೆಗೆ ಸಂಪೂರ್ಣ ರಾಜ್ಯದ ಫಲಿತಾಂಶ ಏನಾಗಿದೆ ಎಂದು ವೀಕ್ಷಿಸಬಹುದು. ಇನ್ನು ಮನೆಯಲ್ಲಿದ್ದೇ ಫಲಿತಾಂಶ ವೀಕ್ಷಿಸಲು ಕುಳಿತರೆ ಹೆಂಡತಿ-ಮಕ್ಕಳಿಂದ ಕಿರಿಕಿರಿಯಾಗಬಹುದು, ಈ ಉದ್ದೇಶದಿಂದ ಬಹುತೇಕ ಮುಖಂಡರು ಲಾಡ್ಜ್ ಸೇರಿಕೊಂಡಿದ್ದಾರೆ.
ಅಡ್ವಾನ್ಸ್ ಬುಕಿಂಗ್: ಹುಬ್ಬಳ್ಳಿಯಲ್ಲಿ ಸರಿಸುಮಾರು 100ಕ್ಕೂ ಹೆಚ್ಚು ಲಾಡ್ಜ್ಗಳಿವೆ. ಮೇ 8ರಂದು ಫಲಿತಾಂಶ ಎಂಬುದನ್ನು ಅರಿತುಕೊಂಡು ಅನೇಕರು ಮುಂಗಡವಾಗಿ ರೂಮ್ಗಳನ್ನು ಕಾಯ್ದಿರಿಸಿದ್ದಾರೆ. ಹೀಗಾಗಿ ಮಂಗಳವಾರ ಹಾಗೂ ಬುಧವಾರ ಎರಡು ದಿನದ ಮಟ್ಟಿಗೆ ಬಹುತೇಕ ಲಾಡ್ಜ್ಗಳು ಖಾಲಿ ಇಲ್ಲದಂತಾಗಿದೆ. ಇದು ಪರ ಊರಿನಿಂದ ನಗರಕ್ಕೆ ಆಗಮಿಸಿದ ಜನರಿಗೆ ತೊಂದರೆಯಾಗಿಯೂ ಪರಿಣಮಿಸಿದೆ.
ಬೆಂಬಲಿಗರೊಡಗೂಡಿ ಲೆಕ್ಕಾಚಾರ: ರೂಮ್ ಬುಕ್ ಮಾಡಿಸಿದವರು ತಮ್ಮ ಖಾಸಾ ಬೆಂಬಲಿಗರೊಡಗೂಡಿ ರೂಮ್ ಸೇರಿಕೊಂಡಿದ್ದಾರೆ. ಇಲ್ಲಿ ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಆಗಬಹುದು, ಯಾರು ಸೋಲುತ್ತಾರೆ? ಯಾರು ಗೆಲ್ಲುತ್ತಾರೆ? ಯಾವ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ? ಎಂಬಿತ್ಯಾದಿಯಾಗಿ ತಮ್ಮದೇ ಧಾಟಿಯಲ್ಲಿ ಲೆಕ್ಕಾಚಾರ ಮಾಡುತ್ತಿದ್ದಾರೆ.
ಈ ನಡುವೆ ಕುತೂಹಲ ಕೆರಳಿಸಿರುವ ಕ್ಷೇತ್ರಗಳ ಕ್ಷಣ ಕ್ಷಣದ ಮಾಹಿತಿ ಪಡೆಯಲು ಆಯಾ ಕ್ಷೇತ್ರದ ಮರಿಪುಡಾರಿಗಳ ಮೊಬೈಲ್ ಸಂಖ್ಯೆ ಕಲೆ ಹಾಕುತ್ತಿದ್ದಾರೆ. ಜಿದ್ದಾಜಿದ್ದಿ ಇರುವ ಧಾರವಾಡ ಪಶ್ಚಿಮ ಕ್ಷೇತ್ರ, ಶಿವಮೊಗ್ಗ, ಮೈಸೂರು, ಶಿಕಾರಿಪುರ, ಕಾರವಾರ, ಕೊಪ್ಪಳ, ಗದಗ ಇನ್ನಿತರ ಕ್ಷೇತ್ರದಲ್ಲಿರುವ ತಮ್ಮದೇ ಪಕ್ಷದವರೊಂದಿಗೆ ಆಗಲೇ ಮಾಹಿತಿಗಾಗಿ ಸಂಪರ್ಕ ಸಾಧಿಸಿದ್ದಾರೆ. ಚುನಾವಣೆ ಫಲಿತಾಂಶ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರು ತಮ್ಮದೇ ರೀತಿಯಲ್ಲಿ ದಾರಿ ಹುಡುಕಿಕೊಂಡಿರುವುದು ಚುನಾವಣೆಯ ಬಗ್ಗೆ ಅವರಿಗಿರುವ ಆಸಕ್ತಿ ತೋರಿಸಿಕೊಡುತ್ತದೆ. ಒಟ್ಟಾರೆಯಾಗಿ ಚುನಾವಣೆ ಫಲಿತಾಂಶ ತಿಳಿದುಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

