ಹೊರಟ್ಟಿಯಿಂದಲೇ ಸೋತೆ: ತಮಟಗಾರ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 9
ಬಸವರಾಜ ಹೊರಟ್ಟಿ ಪಕ್ಷದಲ್ಲಿರುವವರೆಗೂ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿಲ್ಲ ಎಂದು ಹು-ಧಾ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಿ ಸೋತ ಇಸ್ಮಾಯಿಲ್ ತಮಟಗಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರಾಗಿ ಈ ಚುನಾವಣೆಯಲ್ಲಿ ಹೊರಟ್ಟಿ ಒಂದು ಬಾರಿಯೂ ಪ್ರಚಾರ ಮಾಡಲು ಕ್ಷೇತ್ರಕ್ಕೆ ಆಗಮಿಸಲಿಲ್ಲ. ಲಿಂಗಾಯತ ಸಮಾಜದ ಮುಖಂಡರಾಗಿರುವ ಅವರು, ತಮ್ಮ ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡು ಕೇವಲ 6 ಸಾವಿರ ಮತಗಳನ್ನು ಹಾಕಿಸಿದ್ದರೆ ಖಂಡಿತವಾಗಿಯೂ ನಾನು ಗೆಲ್ಲುತ್ತಿದ್ದೆ. ಕ್ಷೇತ್ರದಲ್ಲಿನ ಎಲ್ಲ ಅಲ್ಪಸಂಖ್ಯಾತರು, ಕುಮಾರಸ್ವಾಮಿ ಅವರ ಅಭಿಮಾನಿಗಳ ಹಾಗೂ ಪಕ್ಷದ ಕಾರ್ಯಕರ್ತರ ಮತಗಳನ್ನು ನನ್ನ ಶ್ರಮದಿಂದ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ. ತಮಗೆ ಮತ ಹಾಕಿದವರಿಗೆ ಅಭಿನಂದನೆ ಸಲ್ಲಿಸಿದರು.
ಕಳೆದ ಬಾರಿ ಹುಬ್ಬಳ್ಳಿ ನಗರ ವ್ಯಾಪ್ತಿಯ ವಾರ್ಡ್ಗಳಲ್ಲಿ 800ಕ್ಕೂ ಅಧಿಕ ಮತಗಳನ್ನು ಪಡೆದಿದ್ದ ನಾನು, ಈ ಬಾರಿ ಅಷ್ಟೂ ಪಡೆಯಲು ಸಾಧ್ಯವಾಗಲಿಲ್ಲ. ಮಹಾನಗರ ಜಿಲ್ಲಾಧ್ಯಕ್ಷ ಮತ್ತು ಪಾಲಿಕೆ ಸದಸ್ಯರಾಗಿರುವ ರಾಜಣ್ಣ ಕೊರವಿ ನೀಡಿದ್ದ ಭರವಸೆ ನಂಬಿದ್ದ ನನಗೆ ಮೋಸವಾಯಿತು. ಪಕ್ಷದ ಮುಖಂಡರ ಇಂತಹ ದ್ವಿಮುಖ ನೀತಿಯಿಂದ ಕ್ಷೇತ್ರದಲ್ಲಿ ನೆಲೆ ಇಲ್ಲದ ಪಕ್ಷದ ಅಭ್ಯರ್ಥಿಯಾಗಿ ತಾವು ಇಷ್ಟು ಮತಗಳನ್ನು ಪಡೆದಿರುವುದು ಸಾಧನೆಯೇ ಸರಿ ಎಂದರು.
ಶಹರ ಅಧ್ಯಕ್ಷ ಸುರೇಶ ಹಿರೇಮಠ ತಮ್ಮ ಪಕ್ಷದ ಪರವಾಗಿ ಚುನಾವಣಾ ರಣತಂತ್ರ ರೂಪಿಸುವ ಬದಲು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೂ ನನ್ನ ಸೋಲಿಗೆ ಕಾರಣ. ಕಾಂಗ್ರೆಸ್ ಅಲೆ ಮತ್ತು ಬಿಜೆಪಿ ಮುಖಂಡರ ಜಾತಿ ರಾಜಕಾರಣ ಮುಂತಾದ ಅಂಶಗಳೂ ನಮ್ಮ ಗೆಲವಿಗೆ ಅಡ್ಡಿಯಾದವು. ನಮ್ಮ ಪಕ್ಷವೇ ನನ್ನನ್ನು ಸೋಲಿಸಿತು. ಆದ್ದರಿಂದ ಸದ್ಯ ರಾಜಕೀಯದಿಂದ ತಟಸ್ಥನಾಗಿ ಉಳಿದು ಪಕ್ಷದ ರಾಜ್ಯ ಮುಖಂಡರ ತೀರ್ಮಾನದ ಬಳಿಕ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತೇನೆ. ನವಲಗುಂದ ಕ್ಷೇತ್ರದಲ್ಲಿ ಎನ್.ಎಚ್. ಕೋನರಡ್ಡಿ ಅವರು ರೈತಪರ ಹೋರಾಟ ಹಾಗೂ ವೈಯಕ್ತಿಕ ಪರಿಶ್ರಮದಿಂದ ಗೆದ್ದಿದ್ದಾರೆಯೆ ಹೊರತು, ಹೊರಟ್ಟಿ ಅವರ ಕೊಡುಗೆ ಏನೂ ಇಲ್ಲ ಎಂದರು.
ಅರವಿಂದ ಬೆಲ್ಲದ ಅವರು ಶಾಸಕರಾಗಿದ್ದಕ್ಕೆ ತೀರಾ ಸಂತೋಷ ಪಡುವ ಅಗತ್ಯವಿಲ್ಲ. ತಂದೆ ಚಂದ್ರಕಾಂತ ಬೆಲ್ಲದ ಅವರಂತೆ ತಟಸ್ಥ ನೀತಿ ಅನುಸರಿಸಿದರೆ ನಾವು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ರಾಜು ಅಂಬೋರೆ, ಮಾಜಿ ಸದಸ್ಯರಾದ ವಿಜಯಲಕ್ಷ್ಮಿ ಲೂತಿಮಠ, ಎಂ.ಎಫ್. ಹಿರೇಮಠ, ಮಾಹುತಿ ಹಿಂಡಸಗೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

