ಸಾವಯವ ಕೃಷಿ ಮಿಶನ್ ಅವ್ಯವಹಾರ
ಧಾರವಾಡ: ಸಾವಯವ ಕೃಷಿ ಮಿಶನ್ ಯೋಜನೆಯಡಿ ಸಾಕಷ್ಟು ಅವ್ಯವಹಾರವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಜಿಲ್ಲಾಧಿಕಾರಿ, ಜಿಪಂ ಸಿಇಒ ತಕ್ಷಣ ಈ ಕುರಿತ ವರದಿ ಸಲ್ಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚಿಸಿದ್ದಾರೆ.
ಶನಿವಾರ ಜಿಪಂ ಸಭೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಯಡಿ ರೈತರಲ್ಲದವರು ಫಲಾನುಭವಿಗಳಾಗಿದ್ದಾರೆಂಬ ಸಾಕಷ್ಟು ದೂರುಗಳು ಬಂದಿವೆ. ಸಾವಯವ ಕೃಷಿ ಹೆಸರಲ್ಲಿ ಹಲವರು ಹಣ ಗಳಿಸಿದ್ದಾರೆ. ಈ ಕುರಿತು ಶೀಘ್ರ ವರದಿ ಪಡೆದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದರು.
ಬಡ ಮಕ್ಕಳಿಗಾಗಿ ಜಾರಿಗೊಳಿಸಿದ ಶಿಕ್ಷಣ ಹಕ್ಕು ಯೋಜನೆಯಡಿ ಶೇ. 25 ಮೀಸಲಾತಿ ಮಾಹಿತಿ ಕೊರತೆ, ಶಿಕ್ಷಣ ಇಲಾಖೆ ಬೇಜವಾಬ್ದಾರಿಯಿಂದ ವಿಫಲವಾಗಿದೆ. ಜಿಲ್ಲೆಯಲ್ಲಿ 3036 ಸೀಟುಗಳ ಪೈಕಿ 2094 ಅರ್ಜಿಗಳು ಬಂದಿದ್ದು, ಇದರಲ್ಲಿ 1724 ಅರ್ಜಿಗಳನ್ನು ಆರಿಸಿದೆ. ಹೀಗಾಗಲು ಶಿಕ್ಷಣ ಇಲಾಖೆ ಪಾಲಕರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದರು.
ಜಿಲ್ಲೆಯಲ್ಲಿ ಸಮರ್ಪಕ ಮಾಹಿತಿ ನೀಡಿದ್ದರೂ ಕಡಿಮೆ ಅರ್ಜಿಗಳು ಬಂದಿವೆ ಎಂದು ಉಪನಿರ್ದೇಶಕ ಬಿ.ಕೆ.ಎಸ್. ವರ್ಧನ ತಿಳಿಸಿದರು. ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಹೆಚ್ಚಿದೆ ಎಂದು ಮಹಿಳೆಯರಿಂದ ದೂರುಗಳು ಬರುತ್ತಿವೆ. ಇಲ್ಲಿನ ಕೆಲ ಬಾರ್, ರೆಸ್ಟೋರೆಂಟ್ಗಳು ತಮ್ಮ ವಾಹನಗಳ ಮೂಲಕ ಸಮೀಪದ ಹಳ್ಳಿಗಳಿಗೆ ಮದ್ಯ ಸಾಗಿಸುತ್ತಿವೆ ಎಂದು ಶಾಸಕ ವಿನಯ ಕುಲಕರ್ಣಿ ಆರೋಪಿಸಿದರು.
ಅಬಕಾರಿ ಅಧೀಕ್ಷಕ ರಮೇಶ ಕ್ಯಾತನ್ನವರ ಮಾತನಾಡಿ, ಇಲಾಖೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಪಡಿಸಿಕೊಳ್ಳಲಾಗುತ್ತಿದೆ. ಸರ್ಕಾರಿ ಮದ್ಯವೇ ಹಳ್ಳಿಗಳಲ್ಲಿ ಅಕ್ರಮವಾಗಿದೆ ಹೊರತು ಅಕ್ರಮ ಮದ್ಯ ಮಾರಾಟವಾಗುತ್ತಿಲ್ಲ ಎಂದರು. ಪೊಲೀಸ್, ಅಬಕಾರಿ ಜಂಟಿ ಸಮಿತಿ ರಚಿಸಿ ಜಿಲ್ಲೆಯಲ್ಲಿನ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಬೇಕೆಂದು ಸಚಿವ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗ್ಗೆ 11.30ಕ್ಕೆ ಆರಂಭವಾದ ಕೆಡಿಪಿ ಸಭೆ ರಾತ್ರಿ 8ಕ್ಕೆ ಮುಗಿಯಿತು. ಈ ಮಧ್ಯೆ ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳ ಬಗ್ಗೆ ಸಚಿವ, ಶಾಸಕರಿಗೆ ಮಾಹಿತಿ ನೀಡಿದರು. ಹಲವು ಯೋಜನೆಗಳಲ್ಲಿ ಸಚಿವರು ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡರು. ಶಾಸಕರಾದ ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಸಿ.ಎಸ್. ಶಿವಳ್ಳಿ, ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಸಮೀರ ಶುಕ್ಲ, ಜಿಪಂ ಸಿಇಓ ಪಿ.ಎ. ಮೇಘಣ್ಣವರ, ಎಸ್ಪಿ ಬಿ.ಎಸ್. ಲೋಕೇಶಕುಮಾರ ಇದ್ದರು.
'ಲೋಕಾ'ಗೆ ದೂರು ನೀಡಿ
ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಹುಬ್ಬಳ್ಳಿಯ ಭೈರಿದೇವರಕೊಪ್ಪ, ರಾಯಾಪುರ ಕೆರೆ ಅಭಿವೃದ್ಧಿಗಾಗಿ ರು. 60 ಲಕ್ಷ ವ್ಯಯಿಸಿದ್ದಾರೆ. ಅಲ್ಲಿ ಕೆಲಸವಾಗಿದ್ದು ರು. 25 ಲಕ್ಷ. ಅದರಲ್ಲೂ ಗೋಲ್ಮಾಲ್ ನಡೆದಿದೆ. ಸಚಿವ ಸಂತೋಷ ಲಾಡ್ ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ನೀಡಬೇಕೆಂದು ಸಚಿವರಿಗೆ ಮನವಿ ನೀಡಿದರು.
ಯಾವ ಕೆರೆ ಯಾರಿಗೆ ಬರ್ತವೆ?
ಧಾರವಾಡ ಹೊಸಯಲ್ಲಾಪುರ ಸಮೀಪದ ಕೋಳಿಕೆರೆ ಸಣ್ಣ ನೀರಾವರಿ ಅಥವಾ ಪಾಲಿಕೆಗೆ ಸಂಬಂಧಿಸಿದ್ದೋ ಅಥವಾ ಇನ್ನ್ಯಾರಿಗೆ ಸಂಬಂಧಿಸಿದ್ದೆಂದು ತಿಳಿಯುತ್ತಿಲ್ಲ. ಜಿಲ್ಲೆಯಲ್ಲಿ ಎಷ್ಟು ಕೆರೆಗಳಿವೆ? ಅವು ಯಾವ ಇಲಾಖೆ ವ್ಯಾಪ್ತಿಗೆ ಬರುತ್ತವೆ? ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದರೆ ಅವುಗಳ ಅಭಿವೃದ್ಧಿ ಕುರಿತು ಆಯಾ ಇಲಾಖೆಯವರನ್ನು ಪ್ರಶ್ನಿಸಬಹುದು. ಇಲ್ಲಿನ ಕೋಳಿಕೆರೆ ಸ್ಥಿತಿ ಹದಗೆಟ್ಟಿದ್ದು, ಊರಿನ ಕಸವೆಲ್ಲ ಈ ಕೆರೆಯಲ್ಲಿ ಹಾಕಲಾಗುತ್ತಿದೆ. 80 ಎಕರೆ ವಿಸ್ತೀರ್ಣದ ಉತ್ತಮ ಕೆರೆಯೊಂದನ್ನು ನಾವು ಹಾಳು ಮಾಡುತ್ತಿದ್ದೇವೆ. ಈ ಕೆರೆ ಅಭಿವೃದ್ಧಿಗೊಳಿಸುವ ಕಾರ್ಯವಾಗಬೇಕಿದೆ.
- ವಿನಯ ಕುಲಕರ್ಣಿ, ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

