ಕಟಕಟೆಯಲ್ಲಿ ಹು-ಧಾ ಪಾಲಿಕೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 29
ತೆರಿಗೆ, ಕಟ್ಟಡ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಲೆ ನ್ಯಾಯಾಲಯದಲ್ಲಿ ಇದುವರೆಗೆ ಇತ್ಯರ್ಥಗೊಳ್ಳದ 498 ಪ್ರಕರಣಗಳು ಬಾಕಿ ಇರುವ ಸಂಗತಿ ಬಹಿರಂಗಗೊಂಡಿದೆ.
2007 ರಿಂದ 31-10-2013ರವರೆಗೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 1,069 ಪ್ರಕರಣಗಳು ದಾಖಲಾಗಿದ್ದು, ಇದವರೆಗೆ 571 ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನೂ 498 ಪ್ರಕರಣಗಳ ಕುರಿತಂತೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಈ 1,069 ಪ್ರಕರಣಗಳಲ್ಲಿ ಅವಳಿ ನಗರದ ಕೆಳ ಹಂತದ ನ್ಯಾಯಾಲಯದಲ್ಲಿ ಒಟ್ಟು 720 ಪ್ರಕರಣಗಳು, ಹೈಕೋರ್ಟ್ನಲ್ಲಿ 343 ಹಾಗೂ ಸುಪ್ರೀಂಕೋರ್ಟ್ನಲ್ಲಿ 6 ಪ್ರಕರಣಗಳು ದಾಖಲಾಗಿದ್ದವು.
ಇವುಗಳಲ್ಲಿ ಕಟ್ಟಡ ನಿಯಮ ಉಲ್ಲಂಘನೆ ಹಾಗೂ ಸಾಮಾನ್ಯ ವಿಭಾಗಗಳಿಗೆ ಸಂಬಂಧಿಸಿದಂತೆ ಹೆಚ್ಚು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಕಟ್ಟಡ ನಿಯಮಕ್ಕೆ ಸಂಬಂಧಿಸಿದ ಒಟ್ಟು 279 ಪ್ರಕರಣಗಳು ಈ ಆರು ವರ್ಷಗಳಲ್ಲಿ ದಾಖಲಾಗಿದ್ದು, 158 ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನೂ 111 ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನೌಕರರ ಬಾಕಿ ವೇತನ ಪಾವತಿ, ನೌಕರರ ಬಡ್ತಿಯಂಥ ಸಾಮಾನ್ಯ ಪ್ರಕರಣಗಳ ಇದುವರೆಗಿನ ಸಂಖ್ಯೆ 206. ಇದರಲ್ಲಿ 106 ಪ್ರಕರಣಗಳ ತೀರ್ಪು ಹೊರಬಿದ್ದಿದ್ದು, ಇನ್ನೂ 100 ಪ್ರಕರಣಗಳ ವ್ಯಾಜ್ಯ ನ್ಯಾಯಾಲಯದಲ್ಲಿದೆ.
ಕಟ್ಟಡ ವಿಭಾಗ, ಆರೋಗ್ಯ ಇಲಾಖೆ, ಭೂ ವಿಭಾಗ, ಮಾರುಕಟ್ಟೆ ವಿಭಾಗ, ಲೋಕೋಪಯೋಗಿ ವಿಭಾಗ, ತೆರಿಗೆ ವಿಭಾಗ ಹಾಗೂ ಸಾಮಾನ್ಯ ಪ್ರಕರಣಗಳ ವಿಭಾಗಗಳಲ್ಲಿ ಎಲ್ಲ ಪ್ರಕರಣಗಳು ದಾಖಲಾಗಿವೆ. ಕಟ್ಟಡ ನಿರ್ಮಿಸುವಾಗ ನಿಯಮ ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು ನೀಡಿರುವ ನೋಟಿಸ್ ಹಾಗೂ ಹೇರಿರುವ ದಂಡಕ್ಕೆ ಸಂಬಂಧಿಸಿದಂತೆ 2007ರಿಂದ ಇದುವರೆಗೆ ಕಟ್ಟಡ ವಿಭಾಗದಲ್ಲಿ ಒಟ್ಟು 279 ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಇವುಗಳಲ್ಲಿ ಇದೀಗ 111 ಪ್ರಕರಣಗಳ ವಿಚಾರಣೆ ಮಾತ್ರ ಬಾಕಿ ಇದೆ. ಈ ಪ್ರಕರಣಗಳಲ್ಲಿ 202 ಪ್ರಕರಣಗಳು ಕೆಳ ಹಂತದ ಮತ್ತು 72 ಪ್ರಕರಣಗಳು ಹೈಕೋರ್ಟ್ ಹಾಗೂ 5 ಪ್ರಕರಣಗಳು ಸುಪ್ರೀಂಕೋರ್ಟ್ನಲ್ಲಿದ್ದವು. ಇವುಗಳಲ್ಲಿ 158 ಪ್ರಕರಣಗಳು ಇತ್ಯರ್ಥಗೊಂಡಿವೆ.
ಜನನ, ಮರಣ, ಟ್ರೇಡ್ ಲೈಸೆನ್ಸ್ ಮತ್ತಿತರ 116 ಪ್ರಕರಣಗಳು ಆರೋಗ್ಯ ಇಲಾಖೆಯಡಿ ದಾಖಲಾಗಿದ್ದವು. ಇವುಗಳಲ್ಲಿ 36 ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪು ಹೊರಬಿದ್ದಿದ್ದು, 80 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಇಲಾಖೆಯ ಒಟ್ಟು ಪ್ರಕರಣಗಳಲ್ಲಿ 94 ಪ್ರಕರಣಗಳು ಕೆಳ ಹಂತದ ಹಾಗೂ 22 ಪ್ರಕರಣಗಳು ಹೈಕೋರ್ಟ್ನಲ್ಲಿದ್ದವು.
ನಿವೇಶನ, ಚಿರಾಸ್ತಿ ಮತ್ತಿತರ ಆಸ್ತಿಗಳಿಗೆ ಸಂಬಂಧಿಸಿದಂತೆ ಭೂಖಾತೆ ವಿಭಾಗದಡಿ (ಎಲ್ಎನ್ಡಿ) ಒಟ್ಟು 140 ಪ್ರಕರಣಗಳು ಇದುವರೆಗೆ ದಾಖಲಾಗಿದ್ದು, 92 ಪ್ರಕರಣಗಳು ಮುಕ್ತಾಯಗೊಂಡಿವೆ. ಇನ್ನೂ 48 ಪ್ರಕರಣಗಳ ವಿಚಾರಣೆ ಮುಂದುವರೆದಿದೆ. ಇದರಲ್ಲಿ 121 ಪ್ರಕರಣಗಳು ಕೆಳ ಹಂತದ, 19 ಪ್ರಕರಣಗಳು ಹೈಕೋರ್ಟ್ನಲ್ಲಿದ್ದವು.
ಮಾರುಕಟ್ಟೆ ವಿಭಾಗದಲ್ಲಿ 85 ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, 64 ಪ್ರಕರಣಗಳು ಕೆಳ ಹಂತದ ಹಾಗೂ 21 ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಇದರಲ್ಲಿ 46 ಪ್ರಕರಣಗಳು ಇತ್ಯರ್ಥಗೊಂಡಿದ್ದು, 39 ಪ್ರಕರಣಗಳ ವಿಚಾರಣೆ ಮುಂದುವರೆದಿದೆ.
116 ಪ್ರಕರಣಗಳು ಲೋಕೋಪಯೋಗಿ ಇಲಾಖೆ ಮೇಲೆ ದಾಖಲಾಗಿದ್ದು, 79 ಪ್ರಕರಣಗಳು ಕೆಳ ಹಂತದ ಹಾಗೂ 37 ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಇದರಲ್ಲಿ 63 ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪು ಪ್ರಕಟಗೊಂಡಿದ್ದು, ಇನ್ನೂ 63 ಪ್ರಕರಣಗಳ ವಿಚಾರಣೆ ಬಾಕಿ ಇದೆ.
ತೆರಿಗೆ ಇಲಾಖೆಯಡಿ ದಾಖಲಾಗಿರುವ 127 ಪ್ರಕರಣಗಳಲ್ಲಿ ಒಂದು ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 98 ಪ್ರಕರಣಗಳು ಕೆಳ ಹಂತದ ಹಾಗೂ 28 ಪ್ರಕರಣಗಳು ಹೈಕೋರ್ಟ್ನಲ್ಲಿ ವಿಚಾರಣೆಗೀಡಾಗಿವೆ. ಇವುಗಳಲ್ಲಿ 70 ಪ್ರಕರಣಗಳು ಮುಕ್ತಾಯಗೊಂಡಿದ್ದು, 57 ಪ್ರಕರಣಗಳು ಇತ್ಯರ್ಥಗೊಳ್ಳಬೇಕಿವೆ.
ಜಿಆರ್ಬಿ (ಸಾಮಾನ್ಯ) ವಿಭಾಗದಡಿ ದಾಖಲಾಗಿರುವ 206 ಪ್ರಕರಣಗಳಲ್ಲಿ 106 ಪ್ರಕರಣಗಳು ಇತ್ಯರ್ಥಗೊಂಡಿದ್ದು, 100 ಪ್ರಕರಣಗಳ ವಿಚಾರಣೆ ಮುಂದುವರೆದಿದೆ. ಇವುಗಳಲ್ಲಿ 62 ಪ್ರಕರಣಗಳು ಕೆಳ ಹಂತದ ಹಾಗೂ 144 ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.
- ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

