ಹಿರಿಯರ ಮೇಲಿನ ಪೂಜ್ಯ ಭಾವ ಕಣ್ಮರೆ
ಧಾರವಾಡ: ಕೌಟುಂಬಿಕ ಆಸರೆ ಕಳೆದುಕೊಳ್ಳುತ್ತಿರುವ ಹಿರಿಯರಿಗೆ ದೇಶದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಗಳ ಮೇಲೆ ನಂಬಿಕೆ ಬರುವಂತೆ ಹಾಗೂ ಈ ಹಿರಿಯ ಜೀವಿಗಳ ಸಂಧ್ಯಾಕಾಲವು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ. ನಟರಾಜನ್ ಹೇಳಿದರು.
ಜಿಲ್ಲಾಡಳಿತದ ಆಶ್ರಯದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಹಿರಿಯ ಚೇತನಾ ಒಕ್ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರನ್ನು ಮಾರ್ಗದರ್ಶಕರನ್ನಾಗಿ ಪೂಜನೀಯ ಭಾವದಿಂದ ಗೌರವಿಸುತ್ತಿದ್ದ ಪದ್ಧತಿ ಇಂದು ಸಮಾಜದಲ್ಲಿ ಕ್ರಮೇಣ ಕಣ್ಮರೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾಜ ತಿದ್ದಲಿ: ಇತ್ತೀಚಿನ ವರ್ಷಗಳಲ್ಲಿ ಅತ್ಯಾಚಾರ, ಭ್ರಷ್ಟಾಚಾರದ ಪ್ರಮಾಣ ಹೆಚ್ಚುತ್ತಿದ್ದು, ಹಿರಿಯರು ಈ ಎಲ್ಲ ಘಟನೆಗಳನ್ನು ಮೂಕ ಪ್ರೇಕ್ಷಕರಂತೆ ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಹತ್ತಾರು ವರ್ಷಗಳ ಅನುಭವವನ್ನು ಯುವಕರಿಗೆ ನೀಡುವ ಮೂಲಕ ಸಮಾಜ ತಿದ್ದುವ ಕಾರ್ಯವನ್ನು ಹಿರಿಯರು ಮಾಡಬೇಕೆಂದು ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಕೆ.ಎಂ. ಅಮರನಾಥ, ಅನಾಥ ಹಿರಿಯರಿಗಾಗಿ ಸಂಘ-ಸಂಸ್ಥೆಗಳು ನಡೆಸುವ ವೃದ್ಧಾಶ್ರಮಗಳಿಗೆ ಸರ್ಕಾರ ಸಹಾಯಧನ ನೀಡುತ್ತಿದೆ. ವಾರ್ಷಿಕ ಕುಟುಂಬ ಆದಾಯ ರು. 20 ಸಾವಿರ ಮಿತಿಯಲ್ಲಿರುವ 60 ವರ್ಷದ ಹಿರಿಯರಿಗೆ ಮಾಸಿಕ ಪಿಂಚಣಿ, ಸಣ್ಣ ಅತಿ, ಸಣ್ಣ ರೈತರ, ಕೃಷಿ ಕೂಲಿಕಾರ, ನೇಕಾರರು, ಮೀನುಗಾರರು ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಗುಂಪಿಗೆ ಸೇರಿದ ಹಿರಿಯ ಜೀವಿಗಳಿಗೆ ನಿಬಂಧನೆಗೊಳಪಟ್ಟು ಸಂಧ್ಯಾ ಸುರಕ್ಷಾ ಮಾಸಿಕ ಪಿಂಚಣಿ, ಹಿರಿಯ ನಾಗರಿಕರ ಗುರುತಿನ ಚೀಟಿ, ರಾಜ್ಯ ಸಾರಿಗೆ, ರೈಲು ಹಾಗೂ ವಿಮಾನಗಳ ರಿಯಾಯ್ತಿ ದರದಲ್ಲಿ ಪ್ರಯಾಣಿಸಲು ಸೌಲಭ್ಯ, ಬೆಂಗಳೂರು, ಹುಬ್ಬಳ್ಳಿ- ಧಾರವಾಡ ಸೇರಿದಂತೆ 14 ಸ್ಥಳಗಳಲ್ಲಿ ಹಿರಿಯ ನಾಗರಿಕರಿಗಾಗಿ ಸಹಾಯವಾಣಿ ಹಾಗೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾಮಾಜಿಕ, ಸಂವೇದನಾತ್ಮಕ, ಮನರಂಜನೆ ಹಾಗೂ ಆರೋಗ್ಯ ಸೇವೆ ಒದಗಿಸುವ ಹಗಲು ಯೋಗಕ್ಷೇವು ಕೇಂದ್ರಗಳನ್ನು ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಂಟು ಶತಾಯುಷಿಗಳನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರ ಪರ ಬೇಡಿಕೆಗಳ ಕುರಿತ ಮನವಿಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕಿ ತ್ರಿಶುಲಾ ಅಪ್ಪಣ್ಣವರ ಸ್ವೀಕರಿಸಿದರು. ಎನ್‌ಜಿಒಗಳ ರಾಜೇಶ್ವರ ದೇವರಕೊಂಡ, ರಾಯಪ್ಪ ಎಚ್. ಹಾಗೂ ಎಸ್.ಎನ್. ಮುಲ್ಲಾ, ವಿ.ಡಿ. ಕಾಮರೆಡ್ಡಿ, ಬಿ.ಎಸ್. ಸಂಗಟಿ, ಪ್ರಫುಲ್ಲಾ ನಾಯ್ಕ, ಹಿರಿಯ ನ್ಯಾಯವಾದಿ ವೆಂಕಟೇಶ ಕುಲಕರ್ಣಿ ಇದ್ದರು.
ವಿ.ಜಿ. ತಿಗರಿ ಸ್ವಾಗತಿಸಿದರು. ಹೆಲ್ಪೇಜ್ ಇಂಡಿಯಾದ ಎಂ. ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೇಕಬ್ ಅಂತೋನಿ ವಂದಿಸಿದರು.
ಹಿರಿಯರ ನಾಗರಿಕರು ಸರ್ಕಾರಕ್ಕೆ ಸಲ್ಲಿಸಿದ ಪ್ರಮುಖ ಬೇಡಿಕೆಗಳು
* ಜಿಲ್ಲಾಸ್ಪತ್ರೆ, ಕಿಮ್ಸ್ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಹಿರಿಯರಿಗೆ ಪ್ರತ್ಯೇಕ ವಾರ್ಡ್ ಸ್ಥಾಪನೆ. ಈಗಿರುವ ಜಿಯಾಟ್ರಿಕ್ ವಾರ್ಡ್‌ಗಳ ನವೀಕರಣ.
* ವೃದ್ಧರಿಗೆ ಇರುವ ಸಾಮಾನ್ಯ ರೋಗಗಳ (ಫಿಜಿಯೋಥೆರಪಿ, ಕ್ಷಯ, ಅಸ್ತಮಾ, ದಂತ ಚಿಕಿತ್ಸೆ, ಸಕ್ಕರೆ ಕಾಯಿಲೆ..) ಚಿಕಿತ್ಸೆಗಾಗಿ ಸೌಲಭ್ಯ ನೀಡಬೇಕು.
* ಕುಟುಂಬದಿಂದ ದೂರಾದ, ನಿರ್ಲಕ್ಷಿದ ಏಕಾಂಗಿ ಹಿರಿಯರಿಗೆ ಪಡಿತರ ನೀಡಿ.
* ಅಪೌಷ್ಟಿಕತೆಯಿಂದ ಬಳಲುವ ಹಿರಿಯರಿಗೆ ಅಂಗನವಾಡಿ ಕೇಂದ್ರಗಳಿಂದ ಪೌಷ್ಟಿಕ ಆಹಾರ, ಕ್ಷೀರಭಾಗ್ಯ ಅನುಕೂಲ ಸಿಗಬೇಕು.
* 60 ವರ್ಷ ಮೀರಿದ ಹಿರಿಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ ರು. 1000 ವೃದ್ಧಾಪ್ಯ ವೇತನ ನೀಡಬೇಕು.
* ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿರಿಯ ನಾಗರಿಕರ ಕುಂದು-ಕೊರತೆ ನಿವಾರಕ ಘಟಕ ಸ್ಥಾಪಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

