ಇಂದುಮತಿ ಪಾಟೀಲ ನಿಧನ: ಸಂತಾಪ
ಧಾರವಾಡ: ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಧರ್ಮಪತ್ನಿ ಇಂದುಮತಿ ಪಾಟೀಲ ಅವರ ನಿಧನಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗುರುವಾರ ಸಂತಾಪ ಸೂಚಿಸಿದರು. ಇದೇ ಸಂದರ್ಭ ಇತ್ತೀಚಿಗೆ ನಿಧನರಾದ ಹಿರಿಯ ಪತ್ರಕರ್ತ ಎನ್.ವಿ. ಜೋಶಿ ಅವರ ನಿಧನಕ್ಕೂ ಸಂತಾಪ ಸೂಚಿಸಲಾಯಿತು. ವಿಭಾಗದ ಮುಖ್ಯಸ್ಥ ಡಾ.ಎ.ಎಸ್. ಬಾಲಸುಬ್ರಹ್ಮಣ್ಯ ಮಾತನಾಡಿ, ಪ್ರಪಂಚ ಪತ್ರಿಕೆಯನ್ನು ಕಟ್ಟುವಲ್ಲಿ ಇಂದುಮತಿ ಪುಟ್ಟಪ್ಪನವರ ಪಾತ್ರ ಮಹತ್ವದ್ದು. ಪುಟ್ಟಪ್ಪನವರ ಎಲ್ಲ ಚಟುವಟಿಕೆಗೆ ಅವರು ಪ್ರೋತ್ಸಾಹದ ಚಿಲುಮೆಯಾಗಿದ್ದರು. ಇವರ ಹೆಸರಿನಲ್ಲಿ ಕವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗೆ ಚಿನ್ನದ ಪದಕವನ್ನು ಪ್ರತಿ ವರ್ಷ ನೀಡಲಾಗುತ್ತಿದೆ ಎಂದರು. ಎನ್.ವಿ. ಜೋಶಿ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ತಮ್ಮದೆ ಆದ ಛಾಪು ಮೂಡಿಸಿದ ಪ್ರಬುದ್ಧ ಪತ್ರಕರ್ತರು ಎಂದು ಡಾ. ಬಾಲಸುಬ್ರಹ್ಮಣ್ಯ ನುಡಿದರು. ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಂದು ನಿಮಿಷ ಮೌನ ಆಚರಿಸಿ ಮೃತರಿಗೆ ಗೌರವ ಸಲ್ಲಿಸಿದರು.
ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು: ಪ್ರಕರಣ ದಾಖಲು
ಶಿಗ್ಗಾಂವಿ: ಪಟ್ಟಣದ ನಾಗನೂರ ಕೆರೆಯಲ್ಲಿ ಮುಳುಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಬಟ್ಟೆಗಳನ್ನು ದಂಡೆಯ ಮೇಲಿಟ್ಟು, ಗಾಳಿಗೆ ಹಾರದಂತೆ ಕಲ್ಲು ಹೇರಿದ್ದ ಈತ ಈಜಲು ಕೆರೆಗಿಳಿದಿದ್ದ ಎಂದು ಅಂದಾಜಿಸಲಾಗಿದೆ. ವ್ಯಕ್ತಿಯ ಅಂಗಿ ಜೇಬಿನಲ್ಲಿದ್ದ ಚೀಟಿಗಳಿಂದ ಈತ ಹುಬ್ಬಳ್ಳಿ ನೇಕಾರ ನಗರದ ನಿವಾಸಿ ಈರಣ್ಣ ಮುರಿಗೆಪ್ಪ ವಡವಿ (55) ಎಂದು ತಿಳಿದು ಬಂದಿದೆ. ಈತ ಹಮಾಲಿ ಕೆಲಸ ಮಾಡುತ್ತಿದ್ದ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: 13 ಜನರ ಸೆರೆ
ಕಲಘಟಗಿ: ತಾಲೂಕಿನ ಹೆದ್ದಾರಿಗೆ ಹೊಂದಿಕೊಂಡಿರುವ ದಾಸ್ತಿಕೊಪ್ಪ ಗ್ರಾಮದ ತಿರುಮಲೇಶ್ವರ ದೇವಸ್ಥಾನದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 13 ಜನರನ್ನು ಬಂಧಿಸಿ ರು. 13,500 ನಗದು ಹಾಗೂ 5 ಮೊಬೈಲ್ಗಳನ್ನು ಕಲಘಟಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೂತನ ಇನ್ಸ್ಪೆಕ್ಟರ್ ಮಂಜುನಾಥ ನಡುವಿನಮನಿ ನೇತೃತ್ವದ ತಂಡ ನಿನ್ನೆ ರಾತ್ರಿ ದೇವಸ್ಥಾನದಲ್ಲಿ ಜೂಜಾಡುತ್ತಿದ್ದವರ ಮೇಲೆ ದಾಳಿ ನಡೆಸಿತ್ತು. ಚನ್ನಯ್ಯ ಹಿರೇಮಠ, ಪ್ರಸನ್ನ ಹೂಗಾರ, ಯಲ್ಲಪ್ಪ ಹುಲ್ಲಂಬಿ, ಶಿವುಕುಮಾರ ತೇಗೂರಮಠ, ಮಯೂರ ಮುತ್ತಳ್ಳಿ, ಸಂಗಳಪ್ಪ ಬೂದಪ್ಪನವರ ಸೋಮನಗೌಡ ಜಂಗಲ್ಲಪ್ಪನವರ, ಶಿವುಕುಮಾರ ಹಿರೇಮಠ, ಮಹಾಂತೇಶ ಆಚಮಟ್ಟಿ, ಕಲ್ಲಯ್ಯ ಹಿರೇಮಠ, ಶೇಖಪ್ಪ ಅಂಗಡಿ ಇವರು ಬಂಧಿಸಲ್ಪಟ್ಟವರಾಗಿದ್ದಾರೆ.
ನಾಳೆಯಿಂದ ನವರಾತ್ರಿ ಉತ್ಸವ
ನವಲಗುಂದ: ಇಲ್ಲಿಯ ಶ್ರೀ ಕೃಷ್ಣ ಕಲ್ಯಾಣ ಕೇಂದ್ರದಲ್ಲಿರುವ ಶ್ರೀ ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ನವರಾತ್ರಿ ಹಬ್ಬದ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ. 5ರಿಂದ ಪ್ರಾರಂಭವಾಗುವ ಉತ್ಸವದಲ್ಲಿ ಪ್ರತಿದಿನ ಬೆ. 7ಕ್ಕೆ ಅಭಿಷೇಕ, ಅಲಂಕಾರ, ಬೆ. 8ರಿಂದ 10ಗಂಟೆ ವರೆಗೆ ಆರತಿ ಪ್ರಸಾದ ವಿತರಣೆ ಹಾಗೂ ಸಂಜೆ 6.30ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ವಿಶೇಷ ಕಾರ್ಯಕ್ರಮಗಳಾದ ಅ. 5ರಂದು ಬೆ. 8.15ಕ್ಕೆ ಘಟಸ್ಥಾಪನೆ, 9ರಂದು ಬೆ. 11ಕ್ಕೆ ಕಲ್ಯಾಣೋತ್ಸವ, 12ರಂದು ದುರ್ಗಷ್ಚಮಿ ಪೂಜೆ ಹಾಗೂ 13ರಂದು ಮಹಾನವಿ ಉತ್ಸವ, 14ರಂದು ವಿಜಯ ದಶಮಿ ಅಂಗವಾಗಿ ಸಂಜೆ 6.15ಕ್ಕೆ ಶಮಿಪೂಜೆಯೊಂದಿಗೆ ನವರಾತ್ರಿ ಉತ್ಸವ ಮಂಗಲಗೊಳ್ಳಲಿದೆ. ಕಾರಣ ಸದ್ಭಕ್ತರು ಪಾಲ್ಗೊಂಡು ಉತ್ಸವ ಯಶಸ್ವಿಗೊಳಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಾಣ ಅಭಿನಯದ ಚಿತ್ರ ಪ್ರದರ್ಶನ
ಧಾರವಾಡ: ಅ. 6ರಂದು ಬೆಳಗ್ಗೆ 10ಕ್ಕೆ ಡಾ ಅಣ್ಣಾಜಿರಾವ್ ಸಿರೂರ್ ರಂಗಮಂದಿರ(ಸೃಜನಾ)ದಲ್ಲಿ ಚಿತ್ರಾ ಫಿಲ್ಮ್ ಸೊಸೈಟಿಯಿಂದ ಕಳೆದ ಜುಲೈನಲ್ಲಿ ನಿಧನರಾದ ಸಹಸ್ರಮಾನದ ಬಾಲಿವುಡ್ ಖಳನಾಯಕ ಪ್ರಾಣ ಅವರ, ಬೆಳಗಾವಿಯ ಬಾಲಿವುಡ್ ಚಿತ್ರಪ್ರೇಮಿ ಆರ್.ಆರ್. ಕುಲಕರ್ಣಿ ಅವರು ಸಂಯೋಜಿಸಿರುವ ಚಿತ್ರ ಪ್ರದರ್ಶನದಲ್ಲಿ ಪ್ರಾಣ ಅಭಿನಯದ ಪ್ರಮುಖ ಚಿತ್ರಗಳ ದೃಶ್ಯಗಳು, ಗೀತೆಗಳು, ಅವರ ಸಂದರ್ಶನ, ಮತ್ತಿತರ ಅಪರೂಪದ ವಿವರಗಳಿವೆ. ಪ್ರವೇಶ ಉಚಿತವಾಗಿದ್ದು, ಹೆಚ್ಚಿನವರು ಆಗಮಿಸಬೇಕೆಂದು ಸಂಯೋಜಕ ಅಬ್ದುಲ್ ಖಾನ್ ತಿಳಿಸಿದ್ದಾರೆ.
ಇಂದು ವಿಶ್ವ ಪ್ರಾಣಿಗಳ ದಿನಾಚರಣೆ
ಧಾರವಾಡ: ಅ. 4 ವಿಶ್ವ ಪ್ರಾಣಿಗಳ ದಿನಾಚರಣೆ ಅಂಗವಾಗಿ ಧಾರವಾಡದ ಗ್ರೀನ್ ಆರ್ಮಿ ಸಂಸ್ಥೆಯಿಂದ ಕಲಕೇರಿ ಸಂಗೀತ ಮಹಾವಿದ್ಯಾಲಯದ ಶಾಲಾ ಮಕ್ಕಳಿಗೆ ವನ್ಯ ಪ್ರಾಣಿಗಳು ಮತ್ತು ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವ ವನ್ಯ ಜೀವಿಗಳ ತಜ್ಞರಿಂದ ಪ್ರಾಣಿಗಳು ಮತ್ತು ಪರಿಸರ ಎಂಬ ವಿಷಯದಲ್ಲಿ ಉಪನ್ಯಾಸವನ್ನು ಬೆಳಗ್ಗೆ 11.30ಕ್ಕೆ ಶಾಲೆಯ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಶಾಲಾ ನಿರ್ದೇಶಕ ಆಡಂ ವುಡ್ವರ್ಡ್ ವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಗ್ರೀನ್ ಆರ್ಮಿ ಸಂಸ್ಥೆ ಕಾರ್ಯದರ್ಶಿ ಅನೀಲ ಅಳ್ಳೊಳ್ಳಿ ಹಾಗೂ ಅಧ್ಯಕ್ಷ ಪ್ರಕಾಶ ಗೌಡರ ಭಾಗವಹಿಸುತ್ತಾರೆ.
ನಾಳೆ ಬೇಂದ್ರೆ ಮಾಸ್ತರ ನೆನಪು
ಧಾರವಾಡ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನಿಂದ ಇಲ್ಲಿನ ಸಾಧನಕೇರಿಯ ಬೇಂದ್ರೆ ಸಭಾಭವನದಲ್ಲಿ ಅ. 5ರಂದು ಸಂಜೆ 5ಕ್ಕೆ ವಿಶ್ವ ಶಿಕ್ಷಕರ ದಿನ ಬೇಂದ್ರೆ ಮಾಸ್ತರ ನೆನಪು ಕಾರ್ಯಕ್ರಮ ನಡೆಯಲಿದೆ. ಡಾ. ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕವಿ ಸುಬ್ರಾಯ ಚೊಕ್ಕಾಡಿ ಆಗಮಿಸಲಿದ್ದಾರೆ. ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ ಬಿಕೆಎಸ್ ವರ್ಧನ ಕವಿಯ ಕಂಗಳಲಿ ವರಕವಿ ಕೃತಿ ಬಿಡುಗಡೆಗೊಳಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

