ಧಾರವಾಡ

ಹಾಡಹಗಲೇ ಕುರಿ ಬಲಿ: ಮೂವರ ಬಂಧನ

Published On :

ಹುಬ್ಬಳ್ಳಿ: ದೇಶಪಾಂಡೆ ನಗರದ ರಿಲಾಯನ್ಸ್ ಫ್ರೆಷ್ ಮಳಿಗೆ ಮುಂಭಾಗದ ಮೂರು ರಸ್ತೆ ಕೂಡುವಲ್ಲಿ ಶನಿವಾರ ಬೆಳಗ್ಗೆ ಕುರಿ ಬಲಿಕೊಟ್ಟಿದ್ದು, ಸ್ಥಳೀಯ ನಿವಾಸಿಗಳನ್ನು ದಿಗಿಲುಗೊಳಿಸಿತು. ಕೆಲವರು ಇದನ್ನು ಮಾಟ ಎಂದು ಕರೆದರೆ ಮತ್ತೆ ಕೆಲವರು ದೇವರಿಗೆ ಹರಕೆ ಒಪ್ಪಿಸಲಾಗಿದೆ ಎಂದು ವ್ಯಾಖ್ಯಾನಿಸುತ್ತಿದ್ದರು. ಈ ಪ್ರಕರಣ ಭೇದಿಸಿರುವ ಸಬ್ ಅರ್ಬನ್ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜನನಿಬಿಡ ಪ್ರದೇಶವಾಗಿರುವ ದೇಶಪಾಂಡೆ ರಸ್ತೆಯಲ್ಲಿ ಶನಿವಾರ ಬೆಳಗ್ಗೆ 10.30ರ ವೇಳೆಗೆ ದುರ್ಗಪ್ಪ ಪೂಜಾರ, ದುರ್ಗಮ್ಮ ಬಂಡಿವಡ್ಡರ, ಚಿನ್ನಮ್ಮ ಬಂಡಿವಡ್ಡರ ಎಂಬುವವರು ನಡುರಸ್ತೆಯಲ್ಲಿಯೇ ಕುರಿ ಬಲಿಕೊಟ್ಟು ಅಲ್ಲಿಂದು ಹೊರಟು ಹೋಗಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಈ ಕೃತ್ಯವೆಸಗಿ ಆರೋಪಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹೀಗಾಗಿ ಜನರಿಗೆ ಯಾರು ಈ ಕೃತ್ಯವೆಸಗಿದ್ದಾರೆಂದು ತಿಳಿಯಲಿಲ್ಲ. ಬೂದು ಕುಂಬಳಕಾಯಿ, ಕುಂಕುಮ ಮಿಶ್ರಿತ ಅನ್ನ, ಲಿಂಬೆಹಣ್ಣು, ರಂಗೋಲಿ ಹಾಕಿ ಅದರ ಮಧ್ಯದಲ್ಲಿ ಕುರಿ ಮರಿಯನ್ನು ಬಲಿ ನೀಡಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಮನೋಜ ಹಾನಗಲ್, ಲೂಂಚಾ ಮತ್ತಿತರರು ಇದನ್ನು ಯಾರೋ ಆಗದವರು ವಾಮಾಚಾರ ಮಾಡಿಸಿದ್ದಾರೆಂದು ದೂರಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅಮಾವಾಸ್ಯೆ ಮಾರನೇ ದಿನ ಈ ಘಟನೆ ನಡೆದಿದ್ದರಿಂದ ಇದು ವಾಮಾಚಾರವೇ ಎಂದು ಅನೇಕರು ವಾದಿಸಿದರು. ಘಟನೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಸಬ್ ಅರ್ಬನ್ ಪೊಲೀಸರು ತನಿಖೆ ಕೈಗೊಂಡರು. ಬಳಿಕ ಈ ಕೃತ್ಯವೆಸಗಿದವರು ದುರ್ಗಪ್ಪ ಪೂಜಾರ, ದುರ್ಗಮ್ಮ ಬಂಡಿವಡ್ಡರ, ಚಿನ್ನಮ್ಮ ಬಂಡಿವಡ್ಡರ ಎಂದು ತಿಳಿದು ಬಂದು, ಪೊಲೀಸರು ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದುರ್ಗಮ್ಮ ದೇವಿಯ ಪಲ್ಲಕ್ಕಿ ಉತ್ಸವ ಮಾಡುವ ಸಲುವಾಗಿ ಕುರಿ ಬಲಿ ನೀಡಲಾಗಿತ್ತು, ಇದು ವಾಮಾಚಾರವಲ್ಲ ಎಂದು ಆರೋಪಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದಾಗ್ಯೂ ಇದು ದೇವರಿಗೆ ಕೊಟ್ಟ ಬಲಿಯೋ ಅಥವಾ ವಾಮಾಚಾರವೋ ಎನ್ನುವ ಗೊಂದಲ ಮಾತ್ರ ಜನರಿಂದ ದೂರವಾಗಿಲ್ಲ.
ಅಂತೋನಿ ಕರ್ನಲ್
ಧಾರವಾಡ: ಇಲ್ಲಿನ ಸಾಧುನವರ ಎಸ್ಟೇಟ್‌ನ ನಿವಾಸಿಗಳಾಗಿದ್ದ ನಿವೃತ್ತ ಆಕಾಶವಾಣಿ ನೌಕರ ಅಂತೋನಿ ಕರ್ನಲ್(86) ಶನಿವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವಿದೆ.
ಇಂದು ಡಾ೤ ದೇಶಪಾಂಡೆಗೆ ಸನ್ಮಾನ
ಧಾರವಾಡ: 25 ವರ್ಷಗಳಿಂದ ಗ್ರ್ಯಾಂಡ್ ಲಾಜ್ ಸಂಘಟನೆ ಸದಸ್ಯರಾಗಿ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಡಾ೤ ರಾಜನ್ ದೇಶಪಾಂಡೆ ಅವರಿಗೆ ಅ. 6ರಂದು ಸಂಜೆ 6ಕ್ಕೆ ಸಮೀಪದ ಟ್ರಾವೆಲ್ ಇನ್ ಹೊಟೇಲ್‌ನಲ್ಲಿ ಸನ್ಮಾನಿಸಲಾಗುತ್ತಿದೆ ಎಂದು ದಕ್ಷಿಣ ಭಾರತ ಪ್ರಾಂತೀಯ ಗ್ರ್ಯಾಂಡ್ ಮಾಸ್ಟ್‌ರ್ ಪ್ರೈ. ಲಿಮಿಟೆಡ್‌ನ ಆರ್. ಸುಶೀಲ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಧಾರವಾಡದಲ್ಲಿ 1891ರಲ್ಲಿ ಲಾಜ್ ನಂ. 54 ಎಂಬ ಸಂಘಟನೆ ಸ್ಥಾಪನೆಯಾಗಿದ್ದು, 94 ಜನ ಸದಸ್ಯರನ್ನು ಒಳಗೊಂಡಿದೆ. ಈ ಸಂಘಟನೆಯಿಂದ ಹಲವಾರು ಬಡ ಮಕ್ಕಳಿಗೆ ಶಿಕ್ಷಣ, ಜನರ ಆರೋಗ್ಯ ಸುಧಾರಣೆ, ಬಡ ಕುಟುಂಬಗಳಿಗೆ ಸೂರು ಸೇರಿದಂತೆ ಇನ್ನಿತರ ಸಹಾಯಹಸ್ತಗಳನ್ನು ಸಂಘಟನೆಯಿಂದ ನೀಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಟೀನು ಠಕ್ಕರ್, ಡಿ.ಬಿ. ಮಾಸೂರ, ಡಿ.ಪಿ. ದಯಾನಂದ, ಸಂಜೀವ ಕುಲಕರ್ಣಿ, ರಾಮ ಪೈ, ಎಸ್.ಎಫ್. ಕುಂಬಾರ ಇದ್ದರು.
ಇಂದು ಶಿಖಾಮಣಿ 103ನೇ ಉಪನ್ಯಾಸ
ಧಾರವಾಡ: ಇಲ್ಲಿಯ ವೀರಶೈವ ಜಂಗಮ ಸಂಸ್ಥೆ ಆಶ್ರಯದಲ್ಲಿ ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಕುರಿತು 103ನೇ ಉಪನ್ಯಾಸ ಕಾರ್ಯಕ್ರಮ ಇಲ್ಲಿನ ತತ್ವಾನ್ವೇಷಣ ಮಂದಿರದಲ್ಲಿ ಅ. 6ರಂದು ಸಂಜೆ 5.30ಕ್ಕೆ ನಡೆಯಲಿದೆ. ಹಿರಿಯ ಭಾಷಾ ವಿಜ್ಞಾನಿ, ಗುಲ್ಬರ್ಗ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ೤ ಸಂಗಮೇಶ ಸವದತ್ತಿಮಠ ಉಪನ್ಯಾಸ ನೀಡುವರು. ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ೤ ಎಸ್.ಎಂ. ವೃಷಭೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು. ಜಂಗಮ ಸಂಸ್ಥೆ ಅಧ್ಯಕ್ಷ ಜಿ.ಆರ್. ಹಿರೇಮಠ, ಡಾ೤ ಎಸ್.ಬಿ. ಪುರಾಣಿಕ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
8ರಂದು ಎಸ್‌ಡಿಎಂ ಡಾಕ್ಟರ್
ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಎಸ್‌ಡಿಎಂ ಡಾಕ್ಟರ್ ಕಾರ್ಯಕ್ರಮದಲ್ಲಿ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ನೇತ್ರ ಚಿಕಿತ್ಸಾ ವಿಭಾಗದ ಡಾ೤ ಅನುಪಮಾ ಕಾಖಂಡಕಿ ಅವರು ಅ. 8ರಂದು ಸಂಜೆ 6.50ಕ್ಕೆ ಹಠಾತ್ ಆದ ದೃಷ್ಟಿಹೀನತೆ ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ದೂರವಾಣಿ: 0836- 2443414, 2443415, 2443416 ಸಂಪರ್ಕಿಸಿ ಪ್ರಶ್ನೆಗಳನ್ನು ಕೇಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಕೋನರಡ್ಡಿ ಆಯ್ಕೆ
ನವಲಗುಂದ: ತಾಲೂಕಿನ ಚಿಲಕವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆರ್.ಎಚ್. ಕೋನರಡ್ಡಿ ಈಚೆಗೆ ಅವಿರೋಧವಾಗಿ ಆಯ್ಕೆಯಾದರು. ಈಚೆಗೆ ನಡೆದ ಚುನಾವಣೆಯಲ್ಲಿ ಆರ್.ಎಚ್. ಕೋನರಡ್ಡಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೆಶಕರಾದ ಬಿ.ಜಿ. ಕೋನರಡ್ಡಿ, ಕೆ.ವಿ. ಹುಲಕೋಟಿ, ಮಾಲತಿ ಕುಲಕರ್ಣಿ, ಶಿವಪ್ಪ ತಿಪ್ಪಣ್ಣವರ, ಗೋವಿಂದಪ್ಪ ಕರ್ಲವಾಡ, ವೀರಭದ್ರಗೌಡ ಅಕ್ಕುಂದ, ಎಸ್.ಜಿ. ಮಾಸ್ತಿ, ಕಾರ್ಯದರ್ಶಿ ರಮಜಾನ್ ನದಾಫ್ ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಸಿ.ಎಸ್. ಹಿರೇಮಠ ಕಾರ್ಯನಿರ್ವಹಿಸಿದರು.
ಇಂದು ಬಿಜೆಪಿ ಸಭೆ
ಹುಬ್ಬಳ್ಳಿ:  ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಅ. 6ರಂದು ಸಂಜೆ 4.30ಕ್ಕೆ ವಿದ್ಯಾನಗರದ ಲೋಕಪ್ಪನ ಹಕ್ಕಲ ಹತ್ತಿರದ ಸುಧರ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾಜ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಪ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ಪಾಲಿಕೆ ಬಿಜೆಪಿ ಸದಸ್ಯರು, ಜಿಲ್ಲಾ ಮೋರ್ಚಾದ ಪದಾಧಿಕಾರಿಗಳು ಸಭೆಗೆ ಆಪೇಕ್ಷಿತರು. ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ ಅಧ್ಯಕ್ಷತೆ ವಹಿಸುವುದಾಗಿ ವೀರೇಶ ಸಂಗಳದ ತಿಳಿಸಿದ್ದಾರೆ.
ಶೆಟ್ಟರ್ ಸಂತಾಪ
ಹುಬ್ಬಳ್ಳಿ:  ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಂತಾಪ ವ್ಯಕ್ತ ಪಡಿಸಿದ್ದಾರೆ. ಜಯಪುರದ ಅಕ್ರೌಲಿ ಘರಾಣೆಯ ಗಾಯಕರಾಗಿದ್ದ ಮತ್ತಿಗಟ್ಟಿಯವರ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ. ಸರಳ ಸಜ್ಜನಿಕೆಯ ಜೀವನ ನಡೆಸಿದ್ದ ಮತ್ತಿಗಟ್ಟಿಯವರು ಅನೇಕ ಸಂಗೀತಾಸಕ್ತರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದಿದ್ದಾರೆ.
ಇಂದು ಪ್ರತಿಭಾ ಪುರಸ್ಕಾರ
ಹುಬ್ಬಳ್ಳಿ: ಅಖಿಲ ಭಾರತೀಯ ಸಿಂಡಿಕೇಟ್ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಕಲ್ಯಾಣ ಸಂಘಟನೆಯಿಂದ ಅ. 6ರಂದು ಬೆಳಗ್ಗೆ 11ಕ್ಕೆ ಚೆಂಬರ್ ಆಫ್ ಕಾಮರ್ಸ್‌ನಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.  ವಾರ್ತಾ ಮತ್ತು ಮೂಲಸೌಕರ್ಯ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರತಿಭಾ ಪುರಸ್ಕಾರ ಉದ್ಘಾಟಿಸಲಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಪ ಮಹಾಪ್ರಬಂಧಕ ಸ್ಟಿವನ್ ವಾಸ್ ಅಧ್ಯಕ್ಷತೆ ವಹಿಸುವರು. ಸಂಸದ ಪ್ರಹ್ಲಾದ ಜೋಶಿ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಶಾಸಕರಾದ ಪ್ರಸಾದ ಅಬ್ಬಯ್ಯ, ರುದ್ರಪ್ಪ ಲಮಾಣಿ, ಸಿಂಡಿಕೇಟ್ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಕಲ್ಯಾಣ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಏಕನಾಥ ಕಾಂಬಳೆ ಆಗಮಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.