ಪಾಲಿಕೆ ಉದ್ಯಾನ ಸೋಮಾರಿಗಳ ತಾಣ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 8
ಪಾಚಿಗಟ್ಟಿ ಹಸಿರು ಬಣ್ಣಕ್ಕೆ ತಿರುಗಿದ ನೀರು, ಆ ನೀರಿನ ಮಧ್ಯೆ ಒಂದು ಬಂಡೆಗಲ್ಲು, ಕ್ಲಾಸಿಗೆ ಚಕ್ಕರ್ ಹಾಕಿ ಕುಳಿತ ವಿದ್ಯಾರ್ಥಿನಿಯರು ಒಂದು ಕಡೆಯಾದರೆ, ಲ್ಯಾಂಡ್ಸ್ಕೇಪ್ ಮಾದರಿಯ ಕಿರುದಾರಿಗಳ ಮೇಲೆ ಬಿಸಿಲಿನಲ್ಲೂ ರಗ್ಗು ಹೊದ್ದು ಮಲಗಿರುವ ಸೋಮಾರಿಗಳ ದಂಡು.
ಇಂತಹದ್ದೊಂದು ಚಿತ್ರಣ ನಿಮ್ಮ ಕಣ್ಮುಂದೆ ಬರಬೇಕು ಎಂದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಉದ್ಯಾನಕ್ಕೆ ಬರಬೇಕು. ವಿಹಾರಕ್ಕೆಂದು ನಿರ್ಮಿಸಿದ ಪಾಲಿಕೆಯ ಉದ್ಯಾನದ ಕಾಲುದಾರಿಗಳಲ್ಲಿ ಇಡೀ ಸಂಸಾರವೇ ಬೀಡು ಬಿಟ್ಟಿರುತ್ತದೆ. ಹಾಸಿದ ಜಮಖಾನೆ ಮೇಲೆ ನಿಶ್ಚಿಂತೆಯಿಂದ ಮಲಗಿ, ಲೋಕಾಭಿರಾಮವಾಗಿ ಹರಟೆ ಹೊಡೆಯುವ ಮತ್ತು ಬೇಜಾರು ಅನ್ನಿಸಿದರೆ ಅಲ್ಲಿಯೇ ಮಲಗುವ ಇವರು, ನಾವು ಹೀಗೆ ಮಾಡುವುದರಿಂದ ಉಳಿದವರಿಗೆ ತೊಂದರೆಯಾಗಲಿಕ್ಕಿಲ್ಲವೇ ಎಂದು ಯೋಚಿಸುವುದಿಲ್ಲ.
ಸೋಮಾರಿಗಳ ದಂಡು: ಕೆಲಸ ಮಾಡದ ಸೋಮಾರಿಗಳು ಮನೆಯಲ್ಲಿದ್ದರೆ ನಿದ್ರೆಗೂ ತೊಂದರೆ ಎಂದು ಈ ಉದ್ಯಾನದಲ್ಲಿ ಬೇಕಾಬಿಟ್ಟಿಯಾಗಿ ಮಲಗುತ್ತಾರೆ. ಆಟ-ಪಾಠಕ್ಕೆ ಎಂದು ಬರುವ ಹತ್ತಿರದ ಲ್ಯಾಮಿಂಗ್ಟನ್ ಸ್ಕೂಲ್ ವಿದ್ಯಾರ್ಥಿನಿಯರು ಕೂಡ ಕೆಲವು ಕ್ಷಣ ಅತಂಕದಿಂದಲೇ ಇಲ್ಲಿ ಸಮಯ ಕಳೆಯುತ್ತಾರೆ.ಇನ್ನೂ ಕೆಲವು ವಿದ್ಯಾರ್ಥಿನಿಯರಂತೂ ಕ್ಲಾಸಿಗೆ ಚಕ್ಕರ್ ಹಾಕುವುದರಲ್ಲಿ ನಿಸ್ಸಿಮರು. ಯಾರಿಗೂ ಕಾಣಬಾರದು ಎಂದುಕೊಂಡು ಪಾಚಿಗಟ್ಟಿ ದುರ್ನಾತ ಬೀರುವ ನೀರಿನ ಮಧ್ಯೆ ಇರುವ ಬಂಡೆಗಲ್ಲಿನ ಮೇಲೆ ಕುಳಿತುಕೊಂಡು ಹರಟೆ ಹೊಡೆದು ತಮಗೆ ಸಾಕೆನ್ನಿಸಿದಾಗ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.
ಸೋಮಾರಿಗಳ ದಂಡಿಗೆ ಹಿಡಿಶಾಪ: ಮಳೆಗಾಲವಿರಲಿ, ಚಳಿಗಾಲ ಇರಲಿ ವರ್ಷದ ಎಲ್ಲ ದಿನಗಳಲ್ಲೂ ಇಂತಹದ್ದೆ ಪರಿಸರ ಇರುತ್ತದೆ. ಹತ್ತಿರದಲ್ಲೇ ಸರ್ಕಾರದ ಚಿಟಗುಪ್ಪಿ ಆಸ್ಪತ್ರೆ ಇದ್ದು, ಆಸ್ಪತ್ರೆಯಲ್ಲಿ ಕಾದು ಸಾಕಾಗುವ ರೋಗಿಗಳು ಕೂಡ ಕೆಲವು ಗಂಟೆಗಳ ಕಾಲ ಇಲ್ಲಿ ಬಂದು ಕುಳಿತು ವಿಶ್ರಮಿಸಿಕೊಳ್ಳೊಣ ಎಂದರೂ ಆಗುವುದಿಲ್ಲ.
ಏಕೆಂದರೆ ಬೆಂಚು, ಮರದ ನೆರಳುಗಳನ್ನು ಕೆಲಸಕ್ಕೆ ಕರಿಬೇಡಿ ಊಟಕ್ಕೆ ಮರಿಬೇಡಿ ಎನ್ನುವ ಆಲಸಿಗಳು ಜಾಗ ಆಕ್ರಮಿಸಿಕೊಂಡಿರುತ್ತಾರೆ. ಹೀಗಾಗಿ, ರೋಗಿಗಳು ಮತ್ತು ಮಹಾನಗರ ಪಾಲಿಕೆಯಲ್ಲಿ ಆಗಬೇಕಿರುವ ಸರ್ಕಾರಿ ಕೆಲಸಕ್ಕೆ ಆಗಮಿಸಿದವರು ದಂಡುಗಟ್ಟಲೇ ಮಲಗಿದ ಸೋಮಾರಿಗಳನ್ನು ನೋಡಿ ಹಿಡಿಶಾಪ ಹಾಕುತ್ತ ಅಲ್ಲಿಂದ ಜಾಗ ಖಾಲಿ ಮಾಡಿ, ಹತ್ತಿರದ ಪಾಲಿಕೆ ಆವರಣಕ್ಕೊ ಇಲ್ಲ ನೆಹರು ಮೈದಾನಕ್ಕೊ ಹೋಗಿ ಕುಳಿತುಕೊಳ್ಳುತ್ತಾರೆ.
ಹಿರಿಯ ನಾಗರಿಕರಿಗೆ ತೊಂದರೆ: ಸೋಮಾರಿಗಳ ವಿಶ್ರಾಂತಿ ಧಾಮ ಆಗುವುದರ ಜೊತೆಗೆ ಮಹಾನಗರ ಪಾಲಿಕೆಯ ಈ ಉದ್ಯಾನ, ಹಲವು ಅನೈತಿಕ ಚಟುವಟಿಕೆಗಳಿಗೂ ಕೇಂದ್ರವಾಗುತ್ತಿರುವುದಕ್ಕೆ ಆಸ್ಪದ ನೀಡುವ ತಾಣವಾಗಿದೆ ಎಂಬ ಸಂಶಯ ನಿಯಮಿತವಾಗಿ ವಿಶ್ರಾಂತಿಗೆ ಬರುವ ಕೆಲವು ಹಿರಿಯ ನಾಗರಿಕರದ್ದು. ಹಿರಿಯರು, ವಯಸ್ಕರಿಗೆ ವಾಯುವಿಹಾರ ಮಾಡುವುದಕ್ಕೆ ನಿರ್ಮಿಸಿರುವ ಕಾಲುದಾರಿಗಳಲ್ಲಿ ಜನರು ಬೇಕಾಬಿಟ್ಟಿ ಮಲಗುತ್ತಿರುವುದರಿಂದ ಹಿರಿಯ ನಾಗರಿಕರು ವಾಯು ವಿಹಾರಕ್ಕೆ ಬದಲಿ ಮಾರ್ಗವನ್ನು ಆಶ್ರಯಿಸಿಕೊಂಡಿದ್ದಾರೆ.
ಉದ್ಯಾನವನ್ನು ಸ್ವಚ್ಛವಾಗಿರಿಸಿಕೊಳ್ಳುವುದರ ಜೊತೆಗೆ ಉದ್ಯಾನದಲ್ಲಿ ಸಭ್ಯ ನಾಗರಿಕರಿಗೆ ಸಹ್ಯ ವಾತಾವರಣ ಕಾಪಾಡಿಕೊಳ್ಳುವುದು ಮಹಾನಗರ ಪಾಲಿಕೆಯ ಜವಾಬ್ದಾರಿ. ಆದರೆ, ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಉದ್ಯಾನ ನಿರ್ಮಾಣಗೊಂಡ ದಿನದಿಂದ ಇಲ್ಲಿಯವರೆಗೆ ಚಿಂತನೆ ಮಾಡಿದಂತೆ ಕಾಣುತ್ತಿಲ್ಲ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಇಡೀ ಉದ್ಯಾನವನ ಇಂದು ಸೋಮಾರಿಗಳ ವಿಶ್ರಾಂತಿ ತಾಣವಾಗಿ ಮಾರ್ಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

