ಧಾರವಾಡ

ಧಾರವಾಡ ಅದ್ಧೂರಿ ಜಂಬೂ ಸವಾರಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 14
ದಸರಾ ಹಬ್ಬವು ವರ್ಷದಿಂದ ವರ್ಷಕ್ಕೆ ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಅದ್ಧೂರಿಯಿಂದ ಸಾಗುತ್ತಿದ್ದು, ಕಳೆದ ಒಂಬತ್ತೂ ದಿನ ಇಲ್ಲಿ ನಿತ್ಯ ಸಾಂಸ್ಕೃತಿಕ ಹಬ್ಬಗಳು ವಿಜೃಂಭಿಸಿದವು. ನವರಾತ್ರಿಯ ಕೊನೆಯ ಎರಡು ದಿನಗಳಲ್ಲಿ ನಡೆದ ಜಂಬೂ ಸವಾರಿಯಂತೂ ಇಲ್ಲಿನ ಮಂದಿಗೆ ಎಲ್ಲಿಲ್ಲದ ಉತ್ಸಾಹ ನೀಡಿತು.
ಇಲ್ಲಿನ ಗಾಂಧಿನಗರದಿಂದ ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿಯು ಭಾನುವಾರ, ನಗರದ ಮಾಳಮಡ್ಡಿ ಸಾರಸ್ವತಪುರದ ಮೂಲ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಸೋಮವಾರ ವಿಜೃಂಭಣೆಯಿಂದ ಜಂಬೂ ಸವಾರಿ ಉತ್ಸವದ ಝಲಕನ್ನು ಧಾರವಾಡಿಗರಿಗೆ ಮತ್ತೊಮ್ಮೆ ಮರುಕಳಿಸಿದವು.
ಇಲ್ಲಿಯ ಸಾರಸ್ವತಪುರ ಗೌಳಿಗಲ್ಲಿಯ ಮಾರುತಿ ದೇವಸ್ಥಾನ ವಿಶ್ವಸ್ಥ ಮಂಡಳಿಯಿಂದ ಸೋಮವಾರ ನಡೆದ ಜಂಬೂ ಸವಾರಿ ಉತ್ಸವಕ್ಕೆ ಮಧ್ಯಾಹ್ನ 1.30ಕ್ಕೆ ಶಾಸಕ ವಿನಯ ಕುಲಕರ್ಣಿ ಚಾಲನೆ ನೀಡಿದರು. ಮಾರುತಿ ದೇವಸ್ಥಾನದಿಂದ ಪ್ರಾರಂಭವಾದ ಜಂಬೂ ಸವಾರಿ ಸ್ಟೇಶನ್ ರಸ್ತೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ನಾಲ್ಕು ಆನೆಗಳು, ಎಂಟು ಬೆಳ್ಳಿ ರಥಗಳು, ಎರಡು ಕುದುರೆಗಳಿದ್ದವು. 50ಕ್ಕೂ ಹೆಚ್ಚು ಕಲಾ ತಂಡಗಳಲ್ಲಿ ಮಹಿಳಾ ತಂಡದ ಡೊಳ್ಳಿನ ಮೇಳ, ಗೊಂಬೆ ಕುಣಿತ, ಕೀಲು ಕುಣಿತ, ಪೂಜಾ ಕುಣಿತ, ನವಿಲು ಕುದುರೆ, ಝಾಂಜ್, ಕರಡಿ ಮಜಲು, ಕುಣಿತ, ಚೌಡಕಿ ಮೇಳ, ವಿವಿಧ ಜಾನಪದ ನೃತ್ಯ ಪ್ರಕಾರಗಳು ಗಮನ ಸೆಳೆದವು.
ಶಾಸಕ ಅರವಿಂದ ಬೆಲ್ಲದ, ಮುರುಘಾಮಠದ ಮಲ್ಲಿಕಾರ್ಜುನ ಶ್ರೀ, ಪಾಲಿಕೆ ಸದಸ್ಯರಾದ ಶೈಲಾ ಕಾಮರಡ್ಡಿ, ಬಸವರಾಜ ಮುತ್ತಳ್ಳಿ, ವಿ.ಬಿ. ಸೋಮಾಪುರ, ಮಹಾದೇವ ಹೊರಟ್ಟಿ, ವೀರಣ್ಣ ಅಮರಶೆಟ್ಟಿ, ಮಂಜುಗೌಡ್ರ ಪಾಟೀಲ, ಬಸವರಾಜ ತುಂಬರಗುದ್ದಿ ಮಾರುತಿ ದೇವರ ಮೂರ್ತಿಗೆ ಪುಷ್ಪಾರ್ಪಣೆ ಮಾಡಿ ಚಾಲನೆ ನೀಡಿದರು. ಮೆರವಣಿಗೆ ಮುರುಘಾಮಠಕ್ಕೆ ಅಂತ್ಯಗೊಂಡಿತು.
ಇನ್ನೊಂದು ಸವಾರಿ: ಇನ್ನು, ಭಾನುವಾರ ನಡೆದ ಜಂಬೂ ಸವಾರಿ ಉತ್ಸವದ ಮೆರವಣಿಗೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಿದರು. ಈ ಹಬ್ಬದಲ್ಲಿ ಬನ್ನಿ ಕೊಡುವ ಸಂಪ್ರದಾಯ ಎಲ್ಲರನ್ನು ಗೌರವಿಸುವ ಸಂಕೇತ. ಕಿರಿಯರು ಹಿರಿಯರಿಗೆ ಕಾಲು ಮುಟ್ಟಿ ನಮಸ್ಕರಿಸುವುದು ಸೇರಿದಂತೆ ಈ ಹಬ್ಬದ ಮೂಲಕ ಸಮಾಜದಲ್ಲಿ ಇನ್ನಷ್ಟು ಬಾಂಧವ್ಯ ಮೂಡುತ್ತದೆ ಎಂದು ಹೇಳಿದರು. ಸಮಾಜವಾದಿ ನೂತನ ರಾಜ್ಯಾಧ್ಯಕ್ಷ ಬಾಬಾಗೌಡ ಪಾಟೀಲ, ಈ ಉತ್ಸವ ಗ್ರಾಮೀಣ ಕಲೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಪ್ರಮುಖ ವೇದಿಕೆ. ಮುಂದಿನ ಪೀಳಿಗೆ ಪಾಶ್ಚಾತ್ಯ ಜೀವನ ಶೈಲಿಗೆ ಮಾರು ಹೋಗದೆ ನಮ್ಮ ಸಂಸ್ಕೃತಿ ಉಳಿಸಬೇಕಿದೆ ಎಂದರು.
ಹಾಸನ ಜಿಲ್ಲೆಯ ಕೋಡಿಮಠದ ಶಿವಯೋಗಿ ರಾಜೇಂದ್ರ ಶ್ರೀಗಳು, ಮೂರುಸಾವಿರ ಮಠದ ಶಿವಯೋಗಿ ಶ್ರೀಗಳು, ಮನಸೂರು ಬಸವರಾಜ ದೇವರು, ಹುನಗುಂದಮಠದ ವೀರೇಶ್ವರ ಶ್ರೀಗಳು, ತೋರೆಮಠದ ರಾಜಶೇಖರ ಶ್ರೀಗಳು, ಶಾಸಕಿ ಸೀಮಾ ಮಸೂತಿ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಇದ್ದರು. ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸೀಮರದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪೂಜಾ ಕುಣಿತ, ನಗಾರಿ, ಬೆಂಕಿ ಕರಗ, ಮಲ್ಲಕಂಭ, ಡೊಳ್ಳು, ಚಂಡಿ ವಾದ್ಯ, ತಮಟೆ, ಆಕರ್ಷಕ ಗೊಂಬೆಗಳು, ಯಕ್ಷಗಾನದ ವೇಷಧಾರಿಗಳು, ವೈಭವೀಕೃತ ರಥಗಳು, ನಾಲ್ಕು ಆನೆಗಳೊಂದಿಗೆ ಸುಮಾರು 45 ಕಲಾ ತಂಡಗಳು ಜಂಬೂ ಸವಾರಿಗೆ ಮೆರುಗು ತಂದವು.
ಮಧ್ಯಾಹ್ನ 3.30ರ ಸುಮಾರಿಗೆ ಗಾಂಧಿನಗರ ಈಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ರಾತ್ರಿ 8ರ ಸುಮಾರಿಗೆ ವಿವಿಧೆಡೆ ಸಾಗಿ ಕಲಾಭವನ ಸೇರಿ ಮುಕ್ತಾಯಗೊಂಡಿತು. ಒಟ್ಟಿನಲ್ಲಿ ನಾಡಹಬ್ಬ ದಸರಾ ಸಂಭ್ರಮಕ್ಕೆ ಸೋಮವಾರ ತೆರೆ ಬಿದ್ದಿದ್ದು, ಅ. 18ರಂದು ಬರುವ ಶೀಗಿ ಹುಣ್ಣಿಮೆಗೆ ಜನ ಸಿದ್ಧರಾಗುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.