ಧಾರವಾಡ

ನ್ಯಾಯವಾದಿಗಳು ನ್ಯಾಯಪರರಾಗಿರಲಿ

Published On :

ಹುಬ್ಬಳ್ಳಿ: ಸೇವಾ ಜೀವನದಲ್ಲಿ ಮಹತ್ತರ್ನ ಸಾಧನೆಯ ಗುರಿ ಇರಿಸಿಕೊಂಡು ನ್ಯಾಯವಾದಿಗಳು ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ಉತ್ತಮ ನ್ಯಾಯವಾದಿಗಳಾಗಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಚ್.ಎಲ್. ದತ್ತು ಹೇಳಿದರು.
ಶನಿವಾರ ಹುಬ್ಬಳ್ಳಿಯ ಹೊಸೂರು-ಉಣಕಲ್ ರಸ್ತೆ ಬಳಿ ನಿರ್ಮಿಸುತ್ತಿರುವ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯಲ್ಲಿ ವೃತ್ತಿ ಜೀವನದ ಸಾಧನೆಗೆ ಅಗತ್ಯವಿರುವ ಬುದ್ಧಿಮತ್ತೆ ಇರುತ್ತದೆ. ಸ್ವಯಂ ಪ್ರಯತ್ನದಿಂದ ಮಾತ್ರ ಈ ಪ್ರತಿಭೆ ಹೊರಹೊಮ್ಮಲು ಸಾಧ್ಯ. ನಿರಂತರ ಸಾಧನೆ ಮೂಲಕ ವಕೀಲರು ಉತ್ತಮ ನ್ಯಾಯವಾದಿಗಳಾಗಿ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬೇಕು ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಹುಬ್ಬಳ್ಳಿಯ ಈ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಸರ್ಕಾರ ರು. 75 ಕೋಟಿ ಅನುದಾನ ಒದಗಿಸಿದ್ದು, ಐದು ಮಹಡಿಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ರಾಜ್ಯದಲ್ಲಿ ನ್ಯಾಯಾಲಯಗಳ ಅಭಿವೃದ್ಧಿಗೆ ಹಿಂದಿನಿಂದಲೂ ಎಲ್ಲ ಸರ್ಕಾರಗಳು ಬೆಂಬಲಿಸಿರುವುದರಿಂದ ರಾಜ್ಯದಲ್ಲಿ ನ್ಯಾಯಾಲಯಗಳ ಸ್ಥಿತಿಗತಿ ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಉತ್ತಮವಾಗಿದೆ ಎಂದರು.
ಕರ್ನಾಟಕದ ನ್ಯಾಯವಾದಿಗಳ ಸಂಘಗಳು ದೇಶದ ನ್ಯಾಯಾಂಗಕ್ಕೆ ಮಹತ್ತರ ಕೊಡುಗೆ ನೀಡಿದ್ದು, ಈ ಕಾರಣದಿಂದ ರಾಜ್ಯದ ಬಹಳಷ್ಟು ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಹೊರಹೊಮ್ಮಿದ್ದಾರೆ ಎಂದರು.
ವ್ಯಾಜ್ಯಗಳು ನ್ಯಾಯಾಲಯದ ಹೊರಗೆ ಪರಿಹಾರವಾಗಬೇಕು ಎಂದು ಗಾಂಧೀಜಿ ನಂಬಿದ್ದರು. ನಮ್ಮ ಕಾನೂನುಗಳಲ್ಲಿ, ನ್ಯಾಯಾಲಯಕ್ಕೆ ಬಂದ ಪ್ರಕರಣಗಳನ್ನು ಪರಸ್ಪರ ಒಪ್ಪಿಗೆಯಿಂದ ಪರಿಹರಿಸಲು ಅವಕಾಶವಿದೆ. ನಮ್ಮ ಅಪರಾಧ ದಂಡ ಸಂಹಿತೆಯಲ್ಲಿ ಇದಕ್ಕೆ ಅವಕಾಶವಿದ್ದು, ಪರಸ್ಪರ ರಾಜಿ ಸಂಧಾನದ ಮೂಲಕ ವ್ಯಾಜ್ಯ ಪರಿಹಾರಕ್ಕೆ ಹೆಚ್ಚಿನ ಒತ್ತು ಸಿಗುವಂತೆ ಕಾನೂನಿನಲ್ಲಿ ಬದಲಾವಣೆ ತರುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ನ್ಯಾಯವಾದಿಗಳು ಕಕ್ಷಿದಾರರ ಸಮಸ್ಯೆಗಳನ್ನ್ನು ತಿಳಿಯುವ ಮೂಲಕ ಸಮಾಜದ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಧ್ಯ. ಶಾಸಕಾಂಗ ಹಾಗೂ ಕಾರ್ಯಾಂಗಗಳ ವಿಶ್ವಾಸಾರ್ಹತೆ ಪ್ರಶ್ನೆ ಬಂದಾಗ, ಜನರು ನ್ಯಾಯಾಂಗದತ್ತ ಆಶಾ ಭಾವನೆಯಿಂದ ನೋಡುತ್ತಾರೆ. ನ್ಯಾಯಾಂಗ ಸಮಾಜದ ಸಮಸ್ಯೆಗಳಿಗೆ ಖಂಡಿತ ಪರಿಹಾರ ಸೂಚಿಸಬಲ್ಲುದು ಎಂಬುದು ಸಮಾಜಕ್ಕೆ ಮನದಟ್ಟಾಗಿದೆ.
ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ 3 ವರ್ಷ ಶಿಕ್ಷೆ ಅನುಭವಿಸಿದ ಜನಪ್ರತಿನಿಧಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನ್ಯಾಯಾಲಯ ನೀಡಿರುವ ತೀರ್ಪು, ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದಾರಿಯಾಗುತ್ತದೆ.
ತನಗೆ ಬೇಡವಾದ ಪ್ರತಿನಿಧಿಯನ್ನ್ನು ತಿರಸ್ಕರಿಸುವ ಹಕ್ಕು ನಾಗರಿಕರಿಗೆ ಇರಬೇಕೆನ್ನುವ ನ್ಯಾಯಾಲಯದ ತೀರ್ಪಿನ ಬಗ್ಗೆ ಚರ್ಚೆ ಹಾಗೂ ವಿಶ್ಲೇಷಣೆ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಮೋಹನ ಶಾಂತನಗೌಡರ, ನಿತ್ಯ ಜೀವನದಲ್ಲಿ ಧರ್ಮಪಾಲಿಸಿದರೆ ಕಾನೂನು ಪಾಲಿಸಿದಂತೆ. ಧರ್ಮದಿಂದ ನಡೆಯುವುದೆಂದರೆ, ನಿಸರ್ಗದ ಕಾನೂನ್ನು ಪಾಲಿಸಿದಂತೆ. ಈ ಕಾನೂನಿನ ಪಾಲನೆ ಮಾನವೀಯತೆಯಿಂದ ಮೈದಳೆದದ್ದು. ಜೀವನದಲ್ಲಿ ಗುರಿಮುಟ್ಟಲು ಈ ಕಾನೂನು ಸಾಕು ಎಂದರು.
ಜಿಲ್ಲಾ ನ್ಯಾಯಾಧೀಶ ಕೆ. ನಟರಾಜನ್ ಸ್ವಾಗತಿಸಿದರು. ಹುಬ್ಬಳ್ಳಿ  ವಕೀಲರ ಸಂಘದ ಕಾರ್ಯದರ್ಶಿ ಎಸ್.ವೈ. ದುಂಡರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ಬಿ.ಡಿ. ಹೆಗಡೆ ನಿರೂಪಿಸಿದರು. ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಬಿ.ಕೆ. ಪಾಟೀಲ ವಂದಿಸಿದರು.
ಸಮಾರಂಭದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪ, ಲೋಕೋಪಯೋಗಿ ಇಲಾಖೆಯ ಉತ್ತರ ವಲಯದ ಮುಖ್ಯ ಅಭಿಯಂತರ ಓ.ಕೆ. ಸ್ವಾಮಿ, ಧಾರವಾಡ ಲೋಕೋಪಯೋಗಿ ವಿಭಾಗದ ಕಾರ್ಯಪಾಲಕ ಅಭಿಯಂತ ಕೃಷ್ಣಾಜಿ ಚವ್ಹಾಣ, ಜಿಲ್ಲಾ ಹಾಗೂ ಹುಬ್ಬಳ್ಳಿ ನ್ಯಾಯಾಲಯಗಳ ನ್ಯಾಯಾಧೀಶರು, ನ್ಯಾಯವಾದಿಗಳ ಸಂಘದ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.