ಧಾರವಾಡ

21 ಸಾವಿರ ಪೊಲೀಸರು ಹುತಾತ್ಮ

Published On :

ಧಾರವಾಡ: ರಾಷ್ಟ್ರದ ಏಳ್ಗೆಗಾಗಿ ಹಾಗೂ ದೇಶ ನಿಷ್ಠೆಗಾಗಿ 1959ರಿಂದ ಇಲ್ಲಿಯವರೆಗೆ ಒಟ್ಟು 21 ಸಾವಿರ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಪ್ರಕಾಶ ನಾಡಿಗೇರ ಹೇಳಿದರು.
ಇಲ್ಲಿನ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಮತ್ತು ಅಧಿಕಾರಿ ವರ್ಗದ ವತಿಯಿಂದ ಸೋಮವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
1959ನೇ ಸಾಲಿನ ಅಕ್ಟೋಬರ್ 21ರಂದು ಭಾರತ ಗಡಿ ರಕ್ಷಣೆ ಸಂದರ್ಭದಲ್ಲಿ ಅಸುನೀಗಿದ ಪೊಲೀಸರ ಗೌರವಾರ್ಥವಾಗಿ ಪೊಲೀಸ್ ಹುತಾತ್ಮರ ದಿನವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ. 2012ರ ಅಕ್ಟೋಬರ್ 21ರಿಂದ ಇದುವರೆಗೆ ಒಂದು ವರ್ಷದ ಅವಧಿಯಲ್ಲಿ 577 ಜನ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.
ಸಮಾಜದಲ್ಲಿ ಪ್ರಸ್ತುತ ಗಂಭೀರ ಸ್ವರೂಪದ ಅಪರಾಧಗಳಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಬೇಕೆಂದು ಅಪರಾಧಗಳನ್ನು ತಡೆಯಲು ಪೊಲೀಸರಿಗೆ ಬರೀ ಶಸ್ತಾಸ್ತ್ರ ಅಲ್ಲದೇ, ಅವುಗಳ ಸಮರ್ಪಕ ಬಳಕೆಗೆ ಬೇಕಾದ ತರಬೇತಿ ನೀಡಬೇಕು. ಈ ಮೂಲಕ ಸಮಾಜ, ತಮ್ಮ ಜೀವ ರಕ್ಷಣೆಗೆ ಅನುಕೂಲವಾಗುತ್ತದೆ. ಪೊಲೀಸರ ಬಗ್ಗೆ ಜನರ ಮನೋಭಾವನೆ ಇತ್ತೀಚೆಗೆ ಬದಲಾವಣೆಯಾಗುತ್ತಿದ್ದು, ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಿ ಕೆಲಸ ಮಾಡುವ ಮೂಲಕ ಜನರಿಗೆ ಹತ್ತಿರವಾಗಬೇಕು. ಇಲಾಖೆ ತನಿಖೆ, ಇತರ ಸಂದರ್ಭಗಳಲ್ಲಿ ಪೊಲೀಸರಿಗೆ ಜನತೆ ಸಹಕಾರ ನೀಡುವುದು ಅವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶಕುಮಾರ ಮಾತನಾಡಿದರು. ಗೌರವ ರಕ್ಷೆಯಾಗಿ ಮೂರು ಸುತ್ತಿನ ಗುಂಡು ಹಾರಿಸಲಾಯಿತು. ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಮೈದಾನದಲ್ಲಿರುವ ಹುತಾತ್ಮ ಸ್ಮಾರಕಕ್ಕೆ ಗಣ್ಯರು ಹೂಗುಚ್ಛ ಅರ್ಪಿಸಿದರು. ಡಿವೈಎಸ್ಪಿ ಆರ್.ಎಸ್. ಬನಹಟ್ಟಿ, ವೈ.ಪಿ. ಕಲ್ಲನಗೌಡರ, ಪ್ರೊಬೇಷನರಿ ಪಿಎಸ್‌ಐ ಸುಮಾ, ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು.

ಪೊಲೀಸ್ ಹುತಾತ್ಮ ದಿನಾಚರಣೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ನಗರದ ಕಾರವಾರ ರಸ್ತೆಯಲ್ಲಿರುವ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮೈದಾನದಲ್ಲಿ ಸೋಮವಾರ ಪೊಲೀಸ್ ಹುತಾತ್ಮ ದಿನಾಚರಣೆ ಆಯೋಜಿಸಲಾಗಿತ್ತು. ಹು-ಧಾ ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಧಾರವಾಡ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಶಿರೂರ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ಅವರು ಕರ್ತವ್ಯ ಪಾಲನೆ ವೇಳೆ ಬಲಿದಾನ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಈ ಸಂದರ್ಭ ಸ್ಮರಿಸಿದರು. ಬೆಳಗ್ಗೆ ಪೊಲೀಸ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ, ವಾಲಿ ಫೈರಿಂಗ್ ಜರುಗಿತು. ನಂತರ ವೇದಿಕೆಯಲ್ಲಿದ್ದ ಗಣ್ಯರು ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ವಂದನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.