ಸಹಿಗೆ ನಿರಾಕರಣೆ: ಆಘಾತಕಾರಿ
ಧಾರವಾಡ: ಎಳೆ ವಯಸ್ಸಿನಲ್ಲಿ ಹಾಗೂ ಬಲವಂತವಾಗಿ ಮಕ್ಕಳನ್ನು ವಿವಾಹ ಮಾಡುವ ವಿರುದ್ಧ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತು ಮಂಡಿಸಿದ ಗೊತ್ತುವಳಿಗೆ ಭಾರತವು ಸಹಿ ಹಾಕಲು ನಿರಾಕರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಆಘಾತಕಾರಿ ವಿಷಯ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಅಭಿಪ್ರಾಯಿಸಿದೆ. ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಜಿ. ಜಯಲಕ್ಷ್ಮಿ ಹಾಗೂ ಪ್ರಭಾವತಿ ಗೂಗಲ್, ವರದಿಯ ಪ್ರಕಾರ ಗೊತ್ತುವಳಿಗೆ 107 ದೇಶಗಳು ಸಹಿ ಹಾಕಿದ್ದು, ಭಾರತ ಇದರಿಂದ ದೂರ ಉಳಿದಿದೆ. ಭಾರತದಲ್ಲಿ ಬಾಲ್ಯ ವಿವಾಹದ ರಾಷ್ಟ್ರೀಯ ಸರಾಸರಿ ಶೇ. 47ರಷ್ಟಿದೆ ಎಂದು ಹಲವು ಅಧ್ಯಯನಗಳ ವರದಿಗಳು ಹೇಳುತ್ತವೆ. ಇಡೀ ಪ್ರಪಂಚದಲ್ಲಿ 60 ಮಿಲಿಯದಷ್ಟು ಬಾಲ್ಯ ವಿವಾಹಗಳು ನಡೆಯುತ್ತಿದ್ದು ಅದರ ಶೇ. 40ರಷ್ಟು ಪಾಲು ಭಾರತಕ್ಕಿದೆ. ಪ್ರತಿದಿನ ಮಹಿಳೆಯರ ಮೇಲೆ ಅಮಾನವೀಯ ಹಿಂಸೆ, ಕಿರುಕುಳಗಳು ನಡೆಯುತ್ತಿರುವುದನ್ನು, ಅತ್ಯಂತ ವೇದನೆಯಿಂದ ಗಮನಿಸುತ್ತಿರುವಾಗ ಭಾರತ ಈ ಗೊತ್ತುವಳಿಗೆ ಸಹಿ ಹಾಕದಿರುವುದು ಸರಿಯಲ್ಲ. ಪ್ರಪಂಚದ ಅತಿ ದೊಡ್ಡ ಪ್ರಜಾತಂತ್ರ ದೇಶವೆಂದು ಕರೆಸಿಕೊಳ್ಳುವ ದೇಶವು ತೋರಿದ ಈ ಧೋರಣೆ ಅತ್ಯಂತ ಖಂಡನೀಯ ಹಾಗೂ ನಿರಾಶಾದಾಯಕ ಎಂದಿದ್ದಾರೆ.
26ರಂದು ಪೂರ್ವಭಾವಿ ಸಭೆ
ಹುಬ್ಬಳ್ಳಿ: ಗ್ರಾಹಕ ಜಾಗೃತಿ, ಗ್ರಾಹಕರ ಸಮಸ್ಯೆ ಕುರಿತು ಚರ್ಚಿಸಲು ಅ. 26ರ ಸಂಜೆ 4ಕ್ಕೆ ಧಾರವಾಡದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ನಾರಾಯಣಪುರ 2ನೇ ಮುಖ್ಯರಸ್ತೆಯ 3ನೇ ಅಡ್ಡರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಬಳಿಯ ಅವನಿ ಸಭಾಗೃಹದಲ್ಲಿ ನಡೆಯುವ ಸಭೆ ಅಧ್ಯಕ್ಷತೆಯನ್ನು ಎನ್.ಪಿ. ಭಟ್ ವಹಿಸುವರು. ಡಿಸೆಂಬರ್, ಮಾರ್ಚ್ನಲ್ಲಿ ಎರಡು ದಿನ ಗ್ರಾಹಕ ದಿನ ಆಚರಿಸಿ ಕೈ ತೊಳೆದುಕೊಳ್ಳುತ್ತಿರುವ ಸರ್ಕಾರದ ಧೋರಣೆಯಿಂದ ಗ್ರ್ರಾಹಕರ ಸಮಸ್ಯೆಗಳು ನಿರ್ಲಲ್ಷ್ಯಕ್ಕೆ ಒಳಗಾಗಿ ಪರಿಹಾರ ಕಾಣದಾಗಿವೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಗ್ರಾಹಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡ ಗ್ರಾಹಕ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಮಾಹಿತಿಗೆ ಡಾ. ಸರೋಜಿನಿ ಚವಲಾರ (ದೂ. 0836-2472131 ಅಥವಾ ಮೊ. 9448543899) ಸಂಪರ್ಕಿಸಬಹುದು.
ಜವಳಿ ಖಾತೆ ಸಚಿವರ ಪ್ರವಾಸ
ಹುಬ್ಬಳ್ಳಿ: ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚಸೂರ ಅವರು ಅ. 25ರಂದು ಹುಬ್ಬಳ್ಳಿಗೆ ಆಗಮಿಸುವರು. 26ರಂದು ಬೆಳಗ್ಗೆ 10ಕ್ಕೆ ಗೋಕರ್ಣಕ್ಕೆ ತೆರಳಲಿದ್ದಾರೆ.
ಗಾಯನ ಸ್ಪರ್ಧೆ
ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶಾಂತಾದೇವಿ ಮಾಳವಾಡ ದತ್ತಿ ಅಂಗವಾಗಿ ಅ. 23ರಂದು ಸಂಜೆ 4ಕ್ಕೆ ಮಹಿಳಾ ಮಂಡಳದ ಸದಸ್ಯರಿಗಾಗಿ ಕನ್ನಡದಲ್ಲಿ ಭಾವಗೀತೆ ಸಮೂಹ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆ
ಧಾರವಾಡ: ವಿಧಾನಸಭಾ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಅಂಗವಾಗಿ ನ್ಯಾಯವಾದಿ ವಿ.ಡಿ. ಕಾಮರಡ್ಡಿ ಬೆಂಬಲಿಗರ ಸಭೆ ನಗರದ ಒಸವಾಲ್ ಟಾವರ್ನಲ್ಲಿ ಜರುಗಿತು. ಮತಕ್ಷೇತ್ರದ ಚುನಾವಣೆಯು ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿ.ಡಿ. ಕಾಮರಡ್ಡಿ ಸ್ಪರ್ಧಿಸುವ ಕುರಿತು ಚರ್ಚಿಸಲಾಯಿತು. ಪಶ್ಚಿಮ ಪದವೀಧರ ಮತಕ್ಷೇತ್ರ ಅತ್ಯಂತ ವಿಶಾಲವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರಾಮಾಣಿಕ ಕೆಲಸಗಾರರು ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ವ್ಯಕ್ತಿಗಳ ಕೊರತೆಯಿದೆ. ಇದರಿಂದ ಪದವೀದರರು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಅವಶ್ಯ. ಈ ದಿಶೆಯಲ್ಲಿ ಕಾಮರಡ್ಡಿ ಅವರು ಸ್ಪರ್ಧಿಸುವುದು ಅವಶ್ಯವಿದೆ. ಜೊತೆಗೆ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಅಭಿಪ್ರಾಯಿಸಿದರು. ಸಭೆಯಲ್ಲಿ ಪ್ರಕಾಶ ಉಡಕೇರಿ, ಪಿ.ಎಚ್. ನೀರಲಕೇರಿ, ಆರ್.ಎಚ್. ಅಂಗಡಿ, ಆರ್.ಎಂ. ಜಾವೇದ, ಎಸ್.ಎಸ್. ಯಡ್ರಾಮಿ ಇದ್ದರು. ಕೆ.ಎಚ್. ಪಾಟೀಲ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

