ಧಾರವಾಡ

ಶೀಘ್ರವೇ ಬಸ್ ಸೌಲಭ್ಯ ಕಲ್ಪಿಸಿ

Published On :

ಧಾರವಾಡ ರೈಲು ನಿಲ್ದಾಣಕ್ಕೆ ವೇಳೆಗೆ ಸರಿಯಾಗಿ ಬಸ್ಸುಗಳಿಲ್ಲದ ಕಾರಣ ಬೇರೆ ಬೇರೆ ಬಡಾವಣೆಗೆ ತೆರಳುವ ಪ್ರಯಾಣಿಕರು ಪರಿತಪ್ಪಿಸುವಂತಾಗಿದೆ. ಶಿಕ್ಷಣ, ಉದ್ಯೋಗ, ವ್ಯಾಪಾರ ಹೀಗೆ ಅನೇಕ ಕಾರಣಗಳ ಸಲುವಾಗಿ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ನಿತ್ಯ ಸಾವಿರಾರು ಜನರು ರೈಲುಗಳ ಮುಖಾಂತರ ನಗರಕ್ಕೆ ಬಂದು-ಹೋಗುತ್ತಾರೆ. ಬೆಳಗ್ಗೆಯಿಂದ ರಾತ್ರಿ ವರೆಗೆ ವಿವಿಧ ರೈಲುಗಳ ಮೂಲಕ ನಗರಕ್ಕೆ ಬರುವ ಪ್ರಯಾಣಿಕರು ಭಾರದ ಸಾಮಗ್ರಿಗಳನ್ನು ಹೊತ್ತು ತರುತ್ತಾರೆ. ಆದರೆ, ರೈಲು ಬರುವ ಅಥವಾ ಹೋಗುವ ಸಮಯಕ್ಕೆ ಸಿಬಿಟಿಯಿಂದ ಸರಿಯಾದ ಸಮಯಕ್ಕೆ ಬಸ್ಸುಗಳು ಬರುತ್ತಿಲ್ಲ. ಹಾಗಾಗಿ, ಬಡ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅನಿವಾರ್ಯವಾಗಿ ಹೆಚ್ಚಿನ ಹಣ ತೆತ್ತು ಆಟೋ ರಿಕ್ಷಾ ಬಳಸುವಂತಾಗಿದೆ. ಆದ್ದರಿಂದ ರೈಲು ನಿಲ್ದಾಣದಲ್ಲಿ ವಿವಿಧ ಬಡಾವಣೆಗಳಿಗೆ ತೆರಳಲು ಬಸ್ ಸೌಲಭ್ಯ ಒದಗಿಸುವ ಮೂಲಕ ಬಡ ರೈಲು ಪ್ರಯಾಣಿಕರಿಗೆ ಅನಕೂಲ ಮಾಡಿಕೊಡಬೇಕು.
- ಪಿ.ಜಿ. ನರಸಾಪುರ
(ಮಾಡಳಮಡ್ಡಿ ನಿವಾಸಿ, ಧಾರವಾಡ.)

ಸ್ವಚ್ಛತೆ ಕೊರತೆ
ಧಾರವಾಡದ ಕಿತ್ತೂರು ಚನ್ನಮ್ಮ ಉದ್ಯಾನವನದ ಹಿಂದಿರುವ ರೋಟ್ಸನ್ ಅಪಾರ್ಟ್‌ಮೆಂಟ್ ಬಳಿ ಕಸ ವಿಲೇವಾರಿ ಕಂಟೇನರ್ ಇಲ್ಲದ ಕಾರಣ ಅಪಾರ್ಟ್‌ಮೆಂಟ್ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ರಸ್ತೆ ಬದಿಯಲ್ಲಿ ಕಸ ಚೆಲ್ಲುತ್ತಿದ್ದಾರೆ. ಇದರಿಂದಾಗಿ ಇಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಪಾಲಿಕೆ ಈ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 70 ಕುಟುಂಬಗಳಿದ್ದು, ಸುತ್ತಲು ಅನೇಕ ಕುಟುಂಬಗಳು ವಾಸವಾಗಿವೆ. ಸದ್ಯ ರಸ್ತೆಯಲ್ಲಿ ಕಸ ಬೀಳುತ್ತಿದ್ದು, ಹಂದಿ ಹಾಗೂ ನಾಯಿ ಕಾಟ ವಿಪರೀತವಾಗಿದೆ. ಇದಕ್ಕಿಂತ ಹೆಚ್ಚಾಗಿ ಪರಿಸರ ಮಾಲಿನ್ಯವಾಗುತ್ತಿದೆ. ಹಲವು ರೋಗಗಳಿಗೆ ಇದು ಕಾರಣವಾಗಿದೆ. ಹೀಗಾಗಿ ಪಾಲಿಕೆ ಆರೋಗ್ಯಾಧಿಕಾರಿಗಳು ಇಲ್ಲೊಂದು ಪ್ರತ್ಯೇಕ ಕಂಟೇನರ್ ಇಟ್ಟು ಪರಿಸರ ಕಾಳಜಿ ಮೆರೆಯಬೇಕಿದೆ.
- ಕಿಶೋರ ದಾಮೋದರ
(ಅಪಾರ್ಟ್‌ಮೆಂಟ್ ಎದುರಿನ ನಿವಾಸಿ, ಧಾರವಾಡ)

ಎರ್ರಾಬಿರ್ರಿ ನೀರಿನ ಬಿಲ್
ಜಲಮಂಡಳಿಯು ತಾನು ಮಾಡಿದ ತಪ್ಪನ್ನು ಸಾಮಾನ್ಯ ಜನರ ಮೇಲೆ ಹಾಕುತ್ತಿದೆ. ನಳದ ಸಂಪರ್ಕ ಪಡೆದಾಗಿನಿಂದ ಎರಡು ವರ್ಷಗಳ ಕಾಲ ನಿರಂತರವಾಗಿ ಬಿಲ್ ಕೇಳಿದರೆ ಕೊಡಲಿಲ್ಲ. ಇತ್ತೀಚೆಗೆ ಏಕಾಏಕೀ ಹತ್ತು, ಇಪ್ಪತ್ತು ಸಾವಿರ ಮೊತ್ತದ ಬಿಲ್ ನೀಡುತ್ತಿದೆ. ಅದರಲ್ಲೂ ಕೊಳಚೆ ಪ್ರದೇಶದ ಜನರಿಗೆ ಸಾವಿರಾರು ರುಪಾಯಿ ಬಿಲ್ ನೀಡಿದರೆ, ಇಂದು ದುಡಿದು ಇಂದೇ ತಿನ್ನುವ ಜನ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ಅಲ್ಲದೆ, ಈಗಾಗಲೇ ಬಿಲ್ ತುಂಬಿದವರ ಮನೆಗೆ ನೊಟೀಸ್ ಕಳುಹಿಸಿದ್ದು, ತುಂಬದಿದ್ದರೆ ಮನೆ ಜಫ್ತಿ ಮಾಡುವುದಾಗಿ ಜಲಮಂಡಳಿ ಎಚ್ಚರಿಕೆ ನೀಡಿದೆ. ಈ ಕುರಿತು ಹಲವು ಬಾರಿ ಹೋರಾಟ ಮಾಡಿದರೂ ಯಾವ ಪ್ರಯೋಜನ ಆಗುತ್ತಿಲ್ಲ. ಪಾಲಿಕೆ ಸದಸ್ಯರ ಮೂಲಕ ಈ ಸಮಸ್ಯೆ ಬಗೆಹರಿಸಬೇಕೆಂದರೆ ಪಾಲಿಕೆಯಲ್ಲಿ ಆಡಳಿತವೇ ಇಲ್ಲವಾಗಿದೆ.
- ಸುರೇಶ ದೊಡಮನಿ
ಬಾರಾಕೊಟ್ರಿ ನಿವಾಸಿ, ಧಾರವಾಡ

ಹಂದಿ, ನಾಯಿಗಳ ಉಪಟಳ ತಪ್ಪಿಸಿ
ನಗರದಲ್ಲಿ ಹಂದಿ, ನಾಯಿಗಳ ಉಪಟಳ ಜಾಸ್ತಿಯಾಗಿದ್ದು, ಶ್ರೀಸಾಮಾನ್ಯರು ತಿರುಗಾಡುವುದು ಕಷ್ಟಕರವಾಗಿದೆ. ಅದರಲ್ಲೂ ಚಿಕ್ಕ ಮಕ್ಕಳನ್ನು ಬೀದಿಯಲ್ಲಿ ಆಟಕ್ಕೆ ಕಳುಹಿಸಲಾಗದಂತಹ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ. ಸಾಧನಕೇರಿಯ ಬೇಂದ್ರೆ ಭವನದ ಎದುರಿನ ಪಾರ್ಕ್ ಬಳಿಯ 3ನೇ ವಾರ್ಡಿನ ಹುಬ್ಲೀಕರ ಪ್ಲಾಟ್ ಬಳಿ ನಿತ್ಯ ಹಂದಿ ಹಾಗೂ ನಾಯಿ ಕಚ್ಚಾಟ ಶಾಂತ ಪರಿಸರವನ್ನು ಕೆಡಿಸಿದೆ. ಈ ಕುರಿತು ಅನೇಕ ಬಾರಿ ನಗರದ ನಿವಾಸಿಗಳು ಪಾಲಿಕೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ. ಹಂದಿ ಹಾಗೂ ನಾಯಿಗಳಿಂದ ಮಕ್ಕಳನ್ನು ಕಾಪಾಡಿಕೊಳ್ಳುವುದೇ ಪಾಲಕರಿಗೆ ದೊಡ್ಡ ಕೆಲಸವಾಗಿದೆ. ಈ ಹಿಂದೆ ಇವುಗಳ ದಾಳಿಗೆ ಅನೇಕ ಮಕ್ಕಳು ಗಾಯಗೊಂಡಿರುವ ನಿದರ್ಶನಗಳಿವೆ. ಗಾಯಗೊಂಡ ಸಂದರ್ಭದಲ್ಲಿ ಮಾತ್ರ ಪಾಲಿಕೆ ಎಚ್ಚೆತ್ತು ಕಾರ್ಯನಿರ್ವಹಿಸುತ್ತದೆ. ಈ ರೀತಿ ಕ್ರಮದಿಂದ ನಾಯಿ ಮತ್ತು ಹಂದಿಗಳ ಉಪಟಳ ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದ, ಹಂದಿ ಹಾಗೂ ನಾಯಿಗಳ ಮಾಲೀಕರಿಗೆ ಪಾಲಿಕೆ ಸೂಕ್ತ ತಾಕೀತು ಮಾಡಬೇಕು. ಬೀದಿಯಲ್ಲಿ ತಿರುಗಾಡುವ ನಾಯಿ ಮತ್ತು ಹಂದಿಗಳನ್ನು ಪಾಲಿಕೆ ವಶಪಡಿಸಿಕೊಳ್ಳಬೇಕು.
- ಸಿದ್ದಲಿಂಗಯ್ಯ ಹಿರೇಮಠ
(ಸಾಧನಕೇರಿ ನಿವಾಸಿ, ಧಾರವಾಡ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.