ಧಾರವಾಡ

ಅಕ್ರಮ ಮಾರಾಟ: ರಕ್ತದ ಪ್ಯಾಕೆಟ್ ವಶ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 30
ಅಕ್ರಮ ರಕ್ತ ಮಾರಾಟ ಜಾಲವನ್ನು ಜಿಲ್ಲಾ ಔಷಧ ನಿಯಂತ್ರಣ ಇಲಾಖೆ ನಗರದಲ್ಲಿ ಬುಧವಾರ ಭೇದಿಸಿದೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಸ್‌ನಲ್ಲಿ ತಂದು ನಗರದ ಮೂರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ರಕ್ತ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರ ಸಹಕಾರದಿಂದ ಪತ್ತೆ ಹಚ್ಚಿರುವ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಾರಾಟ ಕೈಚಳಕ: ಕಿಮ್ಸ್‌ನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ ಪ್ರದೀಪ ರಾಠೋಡ್ ಎಂಬಾತನೇ ರಕ್ತವನ್ನು ಅಕ್ರಮವಾಗಿ ಆಸ್ಪತ್ರೆಯೊಂದಕ್ಕೆ ಸರಬರಾಜು ಮಾಡುತ್ತಿದ್ದಾಗ ಔಷಧ ನಿಯಂತ್ರಣ ಇಲಾಖೆ ಬೀಸಿದ್ದ ಜಾಲದಲ್ಲಿ ಸಿಲುಕಿ ಬಿದ್ದಿದ್ದಾನೆ. ನಾರಾಯಣ ಉರ್ಫ್ ರವಿ ಎಂಬ ವ್ಯಕ್ತಿ ಈ ಅಕ್ರಮ ರಕ್ತ ಮಾರಾಟದ ಮುಖ್ಯ ರೂವಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. 6 ತಿಂಗಳಿಂದ ಪ್ರದೀಪ ರಾಠೋಡ್ ರಕ್ತದ ಪ್ಯಾಕೆಟ್ ತಲುಪಿಸುವ ಕೆಲಸದಲ್ಲಿ ತೊಡಗಿದ್ದ. ನಾರಾಯಣ ಉರ್ಫ್ ರವಿ ಸೂಚಿಸುವ ಖಾಸಗಿ ಆಸ್ಪತ್ರೆಗೆ ತೆರಳಿ, ರೋಗಿ ಹಾಗೂ ಸಂಬಂಧಿಸಿದ ವೈದ್ಯರಿಗೆ ರಕ್ತದ ಪ್ಯಾಕೆಟ್ ತಲುಪಿಸುತ್ತಿದ್ದ. ರಕ್ತದ ಪ್ಯಾಕೆಟ್ ತಲುಪಿಸುವ ಪ್ರದೀಪನಿಗೆ ತಿಂಗಳಿಗೆ ರು. 3 ಸಾವಿರ ಸಂಬಳ ನೀಡಲಾಗುತ್ತಿತ್ತು.
ತನಿಖೆ ಅಗತ್ಯ: ಪ್ರತಿ ರಕ್ತದ ಪ್ಯಾಕೆಟ್‌ಗೆ ರು. 1,500ದಿಂದ ರು. 1,800ರ ವರೆಗೂ ರೋಗಿಗಳಿಂದ ಹಣ ಪಡೆಯಲಾಗುತ್ತಿತ್ತು. ಈ ಜಾಲದಲ್ಲಿ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಯೂ ಭಾಗಿಯಾಗಿರುವ ಸಾಧ್ಯತೆ ಇದ್ದು, ತನಿಖೆ ಮೂಲಕ ಮತ್ತಷ್ಟು ಮಾಹಿತಿ ಬಹಿರಂಗಗೊಳ್ಳಬೇಕಿದೆ.
ವೈಭವಲಕ್ಷ್ಮೀ ಬ್ಲಡ್ ಬ್ಯಾಂಕ್ ಹೆಸರಿನ ಈ ರಕ್ತದ ಪ್ಯಾಕೆಟ್‌ಗಳನ್ನು ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಸ್ ಮೂಲಕ ಹುಬ್ಬಳ್ಳಿಗೆ ತರಲಾಗುತ್ತಿತ್ತು. ಹುಬ್ಬಳ್ಳಿಗೆ ಬರುವ ರಕ್ತದ ಪ್ಯಾಕೆಟ್‌ಗಳನ್ನು ಬಂಜಾರಾ ಕಾಲೋನಿಯಲ್ಲಿ ಸಂಗ್ರಹಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಅಕ್ರಮ ರಕ್ತ ಮಾರಾಟ ಜಾಲದ ಶಂಕೆ ಇದ್ದ ಕೆಲ ಸಾರ್ವಜನಿಕರು ಕಳೆದ ಕೆಲ ದಿನಗಳಿಂದ ವಿವಿಧ ಮಾದರಿಯ ರಕ್ತದ ಪ್ಯಾಕೆಟ್‌ಗಳಿಗಾಗಿ ನಾರಾಯಣ ಎಂಬಾತನಿಗೆ ಮೊಬೈಲ್ ಕರೆ ಮಾಡುತ್ತಿದ್ದರು. ಹೊಸೂರು ವೃತ್ತ, ಹಳೇ ಬಸ್ ನಿಲ್ದಾಣ ಮತ್ತಿತರ ಸ್ಥಳಗಳಿಗೆ ಬಂದು ರಕ್ತದ ಪ್ಯಾಕೆಟ್ ಪಡೆಯುವಂತೆ ನಾರಾಯಣ ತನಗೆ ಕರೆ ಮಾಡುವ ಸಾರ್ವಜನಿಕರಿಗೆ ಸೂಚಿಸುತ್ತಿದ್ದನಾದರೂ ರಕ್ತದ ಪ್ಯಾಕೆಟ್ ತಲುಪಿಸಿರಲಿಲ್ಲ.
ಸಾರ್ವಜನಿಕರಿಂದ ಥಳಿತ: ಬುಧವಾರ ಸಂಜೆ ನಾರಾಯಣ ಎಂಬಾತನಿಗೆ ಕರೆ ಮಾಡಿದ ಕೆಲ ವ್ಯಕ್ತಿಗಳು, ತಾವು ಗದಗನಿಂದ ಬರುತ್ತಿದ್ದು, ತುರ್ತಾಗಿ ಎ ಪಾಸಿಟಿವ್ ರಕ್ತ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ರು. 1,700 ನೀಡಿದರೆ ರಕ್ತದ ಪ್ಯಾಕೆಟ್ ನೀಡುವ ಬೇಡಿಕೆ ಇಟ್ಟ ನಾರಾಯಣ, ವಿದ್ಯಾನಗರ ಹಿಂದಿನ ಖಾಸಗಿ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದಾನೆ. ರಕ್ತದ ಪ್ಯಾಕೆಟ್‌ನ್ನು ಖಾಸಗಿ ಆಸ್ಪತ್ರೆಯ ಸಿಬ್ಬಂದಿಗೆ ತಲುಪಿಸುತ್ತಿದ್ದ ಪ್ರದೀಪ ರಾಠೋಡನನ್ನು ಹಿಡಿದ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ. ನಂತರ ಜಿಲ್ಲಾ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ಅಧಿಕಾರಿ ರಮಾಕಾಂತ ಕುಂಠೆ ಹಾಗೂ ಇಲಾಖೆಯ ನಿರೀಕ್ಷಕಿ ಶ್ವೇತಾ ಅವರಿಗೆ ಒಪ್ಪಿಸಿದ್ದಾರೆ. ಇಲಾಖೆ ಅಧಿಕಾರಿಗಳು ಪ್ರದೀಪನ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.