ಧಾರವಾಡ

ಯೋಜನೆಗೆ ನಿಗಮ ನಿರ್ಲಕ್ಷ್ಯ

Published On :

ಧಾರವಾಡ: ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ನಿಗದಿತ ಸಮಯಕ್ಕೆ ಕಾರ್ಯಯೋಜನೆ ಪೂರ್ಣಗೊಳಿಸಬೇಕಿದ್ದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿರ್ಲಕ್ಷ್ಯತನ ತೋರಿದ್ದರ ಪರಿಣಾಮ ಟೀಕೆಗೆ ಗುರಿಯಾಗಿದೆ.
ಬುಧವಾರವಷ್ಟೇ ಜಿಪಂನಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ನಿಗಮದ ಅನೇಕ ಅಪೂರ್ಣ ಕೆಲಸಗಳ ಬಗ್ಗೆ ಚರ್ಚೆಯಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಛೀಮಾರಿ ಹಾಕಲಾಗಿದೆ. ಗುತ್ತಿಗೆ ಪಡೆದ ಕಾಮಗಾರಿಗಳನ್ನು ನಿಗಮವು ವರ್ಷಗಟ್ಟಲೇ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕಾಮಗಾರಿ ನೀಡಿದ ಇಲಾಖೆ ಅಧಿಕಾರಿಗಳು ಅನವಶ್ಯಕವಾಗಿ ಸಾರ್ವಜನಿಕರಿಂದ ಟೀಕೆಗೆ ಒಳಗಾಗಬೇಕಾಗಿದೆ.
ಪ್ರಕರಣ ದಾಖಲಿಸಲು ತೀರ್ಮಾನ: ಸಮಾಜ ಕಲ್ಯಾಣ ಇಲಾಖೆಯು ಎರಡು ವರ್ಷಗಳ ಹಿಂದೆಯೇ ರು. 26 ಲಕ್ಷ ಮೊತ್ತದ ಧಾರವಾಡದ ಗೌರಿ ಶಂಕರ ವಸತಿ ನಿಲಯದ ಹಳೇ ಕಟ್ಟಡದ ಸುಧಾರಣೆ ಹಾಗೂ ನೂತನ ವಸತಿ ನಿಲಯದ ಸ್ಥಾಪನೆಗೆ ನಿಗಮಕ್ಕೆ ಗುತ್ತಿಗೆ ನೀಡಿತ್ತು. ಆದರೆ, ಇಲ್ಲಿಯವರೆಗೂ ಕಾಮಗಾರಿ 'ಎಲ್ಲಿಗೆ ಬಂತು ಸಂಗಯ್ಯ ಅಲ್ಲಿಗೆ ಬಂತು ಸಂಗಯ್ಯ' ಎನ್ನುವಂತಿದ್ದು ಏನೂ ಪ್ರಗತಿ ಕಂಡಿಲ್ಲ. ಹುಬ್ಬಳ್ಳಿ ಘಂಟಿಕೇರಿ ಓಣಿಯಲ್ಲೂ ರು. 80 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ವಸತಿ ನಿಲಯದ ಕಾಮಗಾರಿಯೂ ನಿಂತ ನೀರಾಗಿದೆ. ನಿಗದಿತ ಸಮಯಕ್ಕೆ ಪೂರ್ಣಗೊಳ್ಳುವ ಭರವಸೆಯಿಂದ ಸಮಾಜ ಕಲ್ಯಾಣ ಇಲಾಖೆಯು ವಸತಿ ನಿಲಯ ನೀಡುವುದಾಗಿ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯೂ ಪ್ರಕಟಿಸಿದೆ. ಆದರೆ, ಕಾಮಗಾರಿ ಮುಗಿಯದ ಕಾರಣ ಅನವಶ್ಯಕವಾಗಿ 200 ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ವಸತಿ ನಿಲಯವಿಲ್ಲದೇ ಪರದಾಡುವಂತಾಗಿದೆ. ಅಲ್ಲದೆ, ನವಲಗುಂದ, ಧಾರವಾಡ, ಕಲಘಟಗಿ ತಾಲೂಕುಗಳ ಸುಮಾರು 10 ಎಸ್ಸಿ-ಎಸ್ಟಿ ಕಾಲೋನಿಗಳ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ ರು. 10 ಲಕ್ಷ ಬಿಡುಗಡೆಯಾಗಿದ್ದರೂ ನಿಗಮವು ಕಾಮಗಾರಿ ಪೂರ್ಣಗೊಳಿಸಲು ನಿರ್ಲಕ್ಷ್ಯ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ಬೇಸತ್ತು ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು ನಿಗಮದ ಸಂಬಂಧಿತ ಅಧಿಕಾರಿಗಳ ಮೇಲೆ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದಾರೆ.
ಆಗಿಲ್ಲ ಅಂಗನವಾಡಿ ಕಟ್ಟಡ: ಜಿಲ್ಲೆಯ ಸಾಕಷ್ಟು ಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಟ್ಟಡಗಳ ನಿರ್ಮಾಣಕ್ಕೆ ರು. 7.77 ಲಕ್ಷ ಅನುದಾನ ಪಡೆದು ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ 2011ರಲ್ಲಿಯೇ ಗುತ್ತಿಗೆ ನೀಡಿತ್ತು. ಕುಂದಗೋಳ ತಾಲೂಕಿನ ಶಿರೂರ, ಹಿರೇಹರಕುಣಿ, ಸಂಶಿ, ಭರದ್ವಾಡ, ನವಲಗುಂದ ತಾಲೂಕಿನ ಮಣಕವಾಡ, ಶಿರೂರ, ಬಲ್ಲರವಾಡ ಗ್ರಾಮಗಳಲ್ಲಿ ಅಂಗನವಾಡಿ ನಿರ್ಮಿಸಿಕೊಡಬೇಕಿದ್ದ ನಿಗಮ ಇಲ್ಲಿಯೂ ಅರ್ಧ ಕೆಲಸ ಮಾಡಿದ್ದು, ಇಲಾಖೆ ಅಧಿಕಾರಿಗಳಿಗ ತಲೆನೋವಾಗಿದೆ. ಜಿಲ್ಲೆಯ 22 ಗ್ರಾಮಗಳಲ್ಲಿ ಸುವರ್ಣ ಗ್ರಾಮ ಯೋಜನೆ ಕೈಗೆತ್ತಿಗೊಂಡಿದ್ದು, ಈ ಪೈಕಿ ಹಾರೋಬೆಳವಡಿ, ಬಮ್ಮಿಗಟ್ಟಿ, ತಬಕದ ಹೊನ್ನಳ್ಳಿ, ಸಂಶಿ, ಗುಮ್ಮಗೋಳ, ಮಣಕವಾಡ, ಉಮಚಗಿ ಹಾಗೂ ನಾಗರಹಳ್ಳಿಗಳಲ್ಲಿ ಸಮರ್ಪಕವಾಗಿ ಕಾಮಗಾರಿಗಳನ್ನು ಪೂರೈಸದ ಹಿನ್ನೆಲೆಯಲ್ಲಿ ನಿಗಮದ ಅಧಿಕಾರಿಗಳು ತೀವ್ರ ಟೀಕೆಗೆ ಒಳಗಾಗಿದ್ದಾರೆ.
ಸರ್ಕಾರದ ಒಂದು ಅಂಗವಾಗಿ ಕೆಲಸ ಮಾಡಲಿದೆ ಎಂಬ ನಂಬಿಕೆಯಿಂದ ನಿಗಮಕ್ಕೆ ಸರ್ಕಾರದ ಯೋಜನೆಗಳನ್ನು ಗುತ್ತಿಗೆ ನೀಡಿದರೆ, ವಿಳಂಬ ನೀತಿ ಅನುಸರಿಸುತ್ತಿದ್ದು, ನಿಮಗದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ವ್ಯವಸ್ಥಿತವಾಗಿ ಕೆಲಸ ಮಾಡುವಂತೆ ಆದೇಶಿಸುವ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಒತ್ತಾಸೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.