ನಾಳೆ ಮಾತೃ ವಂದನ, ಗುರುವಂದನ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 19
ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಸೆ. 22ರಂದು ಬೆಳಗ್ಗೆ 10.30ಕ್ಕೆ ನಿಂಗಮ್ಮ ಸಿದ್ಧರಾಮಪ್ಪ ಹೂಗಾರ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಮಾತೃ ವಂದನ ಮತ್ತು ಗುರುವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಸಂಸ್ಥಾಪಕ ಧರ್ಮದರ್ಶಿಗಳಾದ ಶೋಭನಾ ಆರ್. ಹೂಗಾರ, ತಮ್ಮ ಪತಿ ದಿ. ಆರ್.ಎಸ್. ಹೂಗಾರ ಅವರ ಕನಸಿನ ಕೂಸು ಈ ಪ್ರತಿಷ್ಠಾನ. ಅವರ ಆಸೆಯಂತೆ ಸಾಮಾಜಿಕ ಕಳಕಳಿಯೊಂದಿಗೆ 13 ವರ್ಷಗಳಿಂದ ಸಮಾಜಮುಖಿಯಾಗಿ ಪ್ರತಿಷ್ಠಾನ ಮುನ್ನಡೆಯುತ್ತಿದ್ದು, ಅದರ ಭಾಗವಾಗಿ ಪ್ರತಿವರ್ಷದಂತೆ ಮಾತೃ ವಂದನಾ ಮತ್ತು ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷವೂ ಪ್ರತಿಷ್ಠಾನದ ವತಿಯಿಂದ ಹಿರಿಯ ನಾಗರಿಕರ ಸನ್ಮಾನ, ಮಾತೃ ವಂದನಾ ಸನ್ಮಾನ ಮತ್ತು ಗುರುವಂದನಾ ಸನ್ಮಾನ ನಡೆಸಲಾಗುತ್ತಿದೆ. ಈ ಸನ್ಮಾನಕ್ಕೆ ಪಾತ್ರರಾದ ಗಣ್ಯರನ್ನು ಫಲ-ಪುಷ್ಪ ಹಾಗೂ ರು. 10 ಸಾವಿರ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಆದರೆ ಈ ಸಲ ಪ್ರಥಮ ಬಾರಿಗೆ ಗುರುಮಾತಾ ಮತ್ತು ಗುರುಪಿತಾ ಗೌರವವನ್ನು ಸಹ ಮಾಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹಾಗೂ ಇಂದುಮತಿ ಪುಟ್ಟಪ್ಪನವರಿಗೆ ಗುರುಮಾತಾ-ಗುರುಪಿತಾ ಗೌರವವನ್ನು ಪ್ರದಾನ ಮಾಡಲಾಗುತ್ತಿದ್ದು, ಇದು ರು. 25 ಸಾವಿರ ನಗದು ಮತ್ತು ಪುರಸ್ಕಾರ ಒಳಗೊಂಡಿದೆ. ಅದೇ ರೀತಿ ಮಾತೃವಂದನಾ ಗೌರವಕ್ಕೆ ರಾಜ್ಯಪ್ರಶಸ್ತಿ ವಿಜೇತ ಜಾನಪದ ಕಲಾವಿದೆ ಪಾರ್ವತೆವ್ವ ಹೊಂಗಲ್, ಗುರುವಂದನಾ ಗೌರವಕ್ಕೆ ವಿಶ್ರಾಂತ ಪ್ರಾಧ್ಯಾಪಕಿ ಡಾ. ಸರೋಜಿನಿ ಶಿಂತ್ರಿ, ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಡಾ. ಮೀನಾ ಚಂದಾವರಕರ, ವಿಶ್ರಾಂತ ಪ್ರಾಚಾರ್ಯ ಪ್ರೊ. ಅಬ್ದುಲ್ ಕರೀಮ್ ಭಾಜನರಾಗಿದ್ದಾರೆ.
ವೈದ್ಯ ಡಾ. ಆನಂದ ಕಬ್ಬೂರ, ಸಮಾಜ ಸೇವಕ ಬಿ.ಎಂ. ಪಾಟೀಲ ಹಿರಿಯ ನಾಗರಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರಿಗೆ ರು. 10 ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದರು.
ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕ ಧರ್ಮದರ್ಶಿ ನಮೃತಾ ಪಾಟೀಲ, ಸಲಹಾ ಮಂಡಳಿಯ ಸದಸ್ಯ ಪ್ರೊ ವಿ.ವಿ. ಹೆಬ್ಬಳ್ಳಿ, ಎಸ್.ಬಿ. ಮುಮ್ಮಿಗಟ್ಟಿ, ಶಶಿಧರ ತೋಡಕರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

