ಕಾರ್ಟೂನ್ ಇಷ್ಟಪಡುವ ಗಾಯಕಿ ಅಂಜನಾ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 21
'ಟಿವಿ ವೀಕ್ಷಿಸುವುದು ಬಹಳ ಇಷ್ಟ. ಅದರಲ್ಲೂ ಪೋಗೋ ಚಾನಲ್ನಲ್ಲಿ ಬರುವ ಕಾರ್ಟೂನ್ಗಳು ಹೆಚ್ಚು ಇಷ್ಟ. ಇಂಡಿಯನ್ ಐಡಿಯಲ್ ಜೂನಿಯರ್ ಸ್ಪರ್ಧೆಯಿಂದಾಗಿ ಜನ ನನ್ನ ಹೋದಲ್ಲೆಲ್ಲಾ ಗುರುತಿಸಿ ಆಟೋಗ್ರಾಫ್ ಕೇಳೋದು, ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಹೆಚ್ಚು ಖುಷಿ ಕೊಡುತ್ತದೆ.'
- ಇದು ಸೋನಿ ಎಂಟರ್ಟೈನ್ಮೆಂಟ್ನ ರಿಯಾಲಿಟಿ ಶೋ ಇಂಡಿಯನ್ ಐಡಿಯಲ್ ಜೂನಿಯರ್ ಸ್ಪರ್ಧೆಯ ವಿಜೇತೆ ಬೆಂಗಳೂರಿನ 10 ವರ್ಷದ ಬಾಲಕಿ ಅಂಜನಾ ಪದ್ಮನಾಭನ್ ಅವರ ಮುಗ್ಧ ಮಾತುಗಳು.
'ಕೆಎಲ್ಇ ಧ್ವನಿ'-ಬಿವಿಬಿ ಎಫ್ಎಂ ಲೋಕಾರ್ಪಣೆಗೊಳಿಸಲು ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿಗೆ ಶನಿವಾರ ಆಗಮಿಸಿದ್ದ ಅಂಜನಾ, ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕನ್ನಡ ಚಿತ್ರ ನಟ ಸುದೀಪ್ ಅವರ ತಾಯಿ ತಮ್ಮನ್ನು ಹೊಗಳಿದ್ದು ಹೆಚ್ಚು ಇಷ್ಟವಾಯಿತು ಎಂದ ಅಂಜನಾ, ಭಾರತೀಯ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಿದ ಕ್ಷಣ ಜೀವನದ ಅವಿಸ್ಮರಣೀಯ ಕ್ಷಣ ಎಂದರು.
ಅಮಿತಾಬ್ ಬಚ್ಚನ್ ತಮ್ಮನ್ನು ಭವಿಷ್ಯದ ಲತಾ ಮಂಗೇಶ್ಕರ್ ಎಂದು ಹೊಗಳಿದ್ದು, ಅವರಲ್ಲಿನ ದೊಡ್ಡ ಗುಣ ತೋರಿಸುತ್ತದೆ. ಇಂಡಿಯನ್ ಐಡಿಯಲ್ ಸ್ಪರ್ಧೆಯ ತೀರ್ಪುಗಾರರಾಗಿದ್ದ ಗಾಯಕಿ ಶ್ರೇಯಾ ಘೋಷಾಲ್ ಹಾಗೂ ಇನ್ನಿಬ್ಬರು ಸ್ಪರ್ಧೆಯ ಸಂದರ್ಭ ಅನೇಕ ರೀತಿಯ ಸಲಹೆ ನೀಡುವ ಮೂಲಕ ಉತ್ತಮವಾಗಿ ಹಾಡಲು ಸಹಕರಿಸಿದರು. ಶ್ರೇಯಾ ಘೋಷಾಲ್ ಅವರಂತೂ ತನ್ನನ್ನು ಹೆಚ್ಚು ಇಷ್ಟಪಡುತ್ತಿದ್ದರು ಎಂದಳು ಅಂಜನಾ.
ಸದ್ಯ 8ನೇ ತರಗತಿಯಲ್ಲಿ ಓದುತ್ತಿರುವ ಅಂಜನಾ, 8ನೇ ವಯಸ್ಸಿನಿಂದಲೇ ಸಂಗೀತದ ತರಬೇತಿ ಪಡೆಯುತ್ತಿದ್ದಾಳೆ ಎಂದು ಆಕೆಯ ತಂದೆ ಪಿ. ಪದ್ಮನಾಭನ್ ಇದೇ ಸಂದರ್ಭ ತಿಳಿಸಿದರು.
ಗಾಯನ ಕೇಳುವ ಅವಕಾಶ
ಸೋನಿ ಎಂಟರ್ಟೈನ್ಮೆಂಟ್ನ ರಿಯಾಲಿಟಿ ಶೋ ಇಂಡಿಯನ್ ಐಡಿಯಲ್ ಜೂನಿಯರ್ ಸ್ಪರ್ಧೆಯಲ್ಲಿ ವಿಜೇತ ಬೆಂಗಳೂರಿನ 10 ವರ್ಷದ ಬಾಲಕಿ ಅಂಜನಾ ಪದ್ಮನಾಭನ್ ಅವರ ಸುಮಧುರ ಕಂಠದ ಹಾಡು ಕೇಳುವ ಹಾಗೂ ವೀಕ್ಷಿಸುವ ಅವಕಾಶ ಇಲ್ಲಿಯ ಕೆಎಲ್ಇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಶನಿವಾರ ಲಭಿಸಿತ್ತು. 'ಕೆಎಲ್ಇ ಧ್ವನಿ'-ಬಿವಿಬಿ ಎಫ್ಎಂ ಲೋಕಾರ್ಪಣೆಗೊಳಿಸಲು ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿಗೆ ಆಗಮಿಸಿದ್ದ ಅಂಜನಾ, ಹಲವಾರು ಹಿಂದಿ ಹಾಗೂ ಒಂದು ಕನ್ನಡ ಚಲನ ಚಿತ್ರದ ಗೀತೆ ಹಾಡುವ ಮೂಲಕ ನೆರೆದಿದ್ದ ವಿದ್ಯಾರ್ಥಿಗಳನ್ನು ಮನಮೋಹಕಗೊಳಿಸಿದರು. ವೇದಿಕೆಯಿಂದ ಕೆಳಗಿಳಿದು ವಿದ್ಯಾರ್ಥಿಗಳ ಮಧ್ಯೆ ತೆರಳಿದ ಅಂಜನಾ ಅವರ ಸರಳ ಸ್ವಭಾವ ಸಮಾರಂಭದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಗಣ್ಯರನ್ನು ಮತ್ತಷ್ಟು ಆಕರ್ಷಿಸಿತು. ಶೋರ್ ಹಿಂದಿ ಚಿತ್ರದ 'ಇಕ ಪ್ಯಾರ ಕಾ ನಗಮಾ ಹೈ....' ಗೀತೆಯಿಂದ ಹಾಡು ಪ್ರಾರಂಭಿಸಿದ ಅಂಜನಾ, ಚೆನೈ ಎಕ್ಸ್ಪ್ರೆಸ್ನ 'ಬನ್ ಕೆ ತಿತಲಿ....', ಡಾನ್ ಚಿತ್ರದ 'ಏ ಮೇರಾ ದಿಲ್ ಪ್ಯಾರ್ ಕಾ ದೀವಾನಾ....', ಮುಂಗಾರು ಮಳೆ ಕನ್ನಡ ಚಿತ್ರದ 'ಅರಳದಿರು ಜೀವನ ಗೆಳೆಯ...' ಹಾಗೂ ಇನ್ನೂ ಕೆಲ ಗೀತೆಗಳನ್ನು ಹಾಡಿದರು. ಇವರೊಂದಿಗೆ ಬೆಳಗಾವಿ ಕೆಎಲ್ಇ ಮ್ಯೂಸಿಕ್ ಸ್ಕೂಲ್ನ ಶುಭಂ ಕಟಾವಕರ ಅವರೂ ಹಿಂದಿ ಚಿತ್ರದ ಗೀತೆ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

