ಧಾರವಾಡ: ಕೃಷಿ ಮೇಳಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 21
ಕೃಷಿ ಸಂಶೋಧನೆಯಲ್ಲಿ ದೇಶಾದ್ಯಂತ ಖ್ಯಾತಿ ಪಡೆದಿರುವ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಬಾರಿ ನಾಲ್ಕು ದಿನಗಳ ಕೃಷಿ ಮೇಳ ಶನಿವಾರದಿಂದ ಆರಂಭವಾಗಿದೆ.
'ಆಹಾರ ಭದ್ರತೆಗಾಗಿ ಜಲ ಸಂರಕ್ಷಣೆ' ಎಂಬ ಮುಖ್ಯ ಉದ್ದೇಶದೊಂದಿಗೆ ಕೃಷಿ ಮೇಳ ನಡೆಯುತ್ತಿದ್ದು, ಈ ಬಗ್ಗೆ ಹೆಚ್ಚು ಅರಿವು ಮೂಡಿಸುವ ವಸ್ತು ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವವಿದ್ಯಾಲಯದ ಸುಮಾರು 50ಕ್ಕೂ ಹೆಚ್ಚು ಎಕರೆ ವಿಶಾಲ ಪ್ರದೇಶದಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಸಂಪನ್ಮೂಲ ಸಂರಕ್ಷಣೆಗಾಗಿ ಸಮಗ್ರ ಜಲಾನಯನ ಅಭಿವೃದ್ಧಿ, ಅಧಿಕ ಇಳುವರಿ ಮತ್ತು ನೀರಿನ ಉಳಿತಾಯಕ್ಕೆ ಸುಧಾರಿತ ನೀರಾವರಿ ಕ್ರಮಗಳು, ಸವಳು ಭೂಮಿಗಳ ಸುಧಾರಣೆ ಮತ್ತು ಫಲವತ್ತತೆ ಹೆಚ್ಚಿಸುವುದು ಸೇರಿದಂತೆ ರೈತರ ಆವಿಷ್ಕಾರಗಳು ಸಹ ಗಮನ ಸೆಳೆಯುತ್ತಿವೆ.
ಹೈಟೆಕ್ ತೋಟಗಾರಿಕೆ, ಸುಗಂಧ ಮತ್ತು ಔಷಧಿ ಸಸ್ಯಗಳು, ಫಲಪುಷ್ಪ ಪ್ರದರ್ಶನವಂತೂ ಎಲ್ಲರ ಗಮನ ಸೆಳೆಯುತ್ತಿದೆ. ಜಾನುವಾರು ಪ್ರದರ್ಶನ ಹಾಗೂ ಮೇವಿನ ಬೆಳೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಅಗ್ರಿ ಕ್ಲಿನಿಕ್, ಕೃಷಿ ವ್ಯವಹಾರ, ರಫ್ತು ಹಾಗೂ ಕೃಷಿ ಮಾಹಿತಿ ತಂತ್ರಜ್ಞಾನ ಕುರಿತು ರೈತರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಸಣ್ಣ ಹಾಗೂ ದೊಡ್ಡ ರೈತರಿಗೆ ಅನುಕೂಲವಾಗುವ ರೀತಿಯ ಕೃಷಿ ಪರಿಕರಗಳ ಮಾರಾಟ ಸಹ ಭರ್ಜರಿಯಾಗಿ ನಡೆಯುತ್ತಿದ್ದು, ಧಾರವಾಡ, ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಾರವಾರ, ಶಿರಸಿ, ದಾವಣಗೆರೆ, ಕೊಪ್ಪಳ ಹಾಗೂ ಬಳ್ಳಾರಿ ರೈತರು ಮೇಳದಲ್ಲಿ ಭಾಗವಹಿಸಿ ಮಾಹಿತಿ ಪಡೆದರು. ಅಲ್ಲದೇ, ಹಿಂಗಾರು ಹಂಗಾಮಿಗೆ ಬೇಕಾದ ಕಡಲೆ, ಜೋಳ ಸೇರಿದಂತೆ ಹಿಂಗಾರು ಬಿತ್ತನೆ ಬೀಜಗಳನ್ನು ಖರೀದಿಸಿದರು.
1.9 ಲಕ್ಷ ಬೀಜ ಉತ್ಪಾದನೆ:
ಹಿಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಮ್ಮಿಕೊಂಡ ಬೀಜ ಮೇಳವನ್ನು ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆನಂದಕೃಷ್ಣ ಉದ್ಘಾಟಿಸಿದರು. ಪ್ರಸಕ್ತ ವರ್ಷ ಕೃಷಿ ವಿವಿ 1.9 ಲಕ್ಷ ಕ್ವಿಂಟಲ್ ಬೀಜ ಉತ್ಪಾದಿಸಿರುವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಹಾರ ಭದ್ರತೆಗಾಗಿ ಬೀಜ ಭದ್ರತೆ ಅಗತ್ಯ. ಈ ಹಿನ್ನೆಲೆಯಲ್ಲಿ ರೈತರು ಕಂಪನಿಗಳು ಸಿದ್ಧಪಡಿಸಿದ ಪ್ಯಾಕೆಟ್ ಬೀಜಗಳಿಗೆ ಮಾರು ಹೋಗದೆ ಬೀಜ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬೇಕು ಎಂದು ಅಭಿಪ್ರಾಯಿಸಿದರು. ಅಲ್ಲದೇ, ಬೀಜೋತ್ಪಾದನೆ ಮಾಡಿದ ರೈತರಿಗೆ ಸನ್ಮಾನ ಮಾಡಲಾಯಿತು. ಕೃಷಿ ವಿವಿ ಕುಲಪತಿ ಡಾ. ಎಚ್.ಎಸ್. ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ನಂತರ ಮಧ್ಯಾಹ್ನ 2.30ಕ್ಕೆ ಬೆಳಗಾವಿ ಜಿಲ್ಲೆಯ 10 ಜನ ರೈತರಿಗೆ ಶ್ರೇಷ್ಠ ಮಟ್ಟದ ಯುವ ಕೃಷಿಕ ಹಾಗೂ ಶ್ರೇಷ್ಠ ಮಟ್ಟದ ಯುವ ಕೃಷಿ ಮಹಿಳೆ ಪ್ರಶಸ್ತಿಯನ್ನು ಕೃಷಿ ಸಚಿವ ಕೃಷ್ಣ ಬೈರೇಗೌಡ ವಿತರಿಸಿದರು. ರೈತರಿಂದ ರೈತರಿಗಾಗಿ ಸಂವಾದ ಜರುಗಿತು.
ಇಂದು ಉದ್ಘಾಟನೆ
ಕೃಷಿ ಮೇಳ ಶನಿವಾರದಿಂದ ಆರಂಭವಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಭಾನುವಾರ ಬೆಳಗ್ಗೆ 11ಕ್ಕೆ ಉದ್ಘಾಟನೆಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾರ್ತಾ ಇಲಾಖೆ ಸಚಿವ ಸಂತೋಷ್ ಲಾಡ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಅರಣ್ಯ, ಪರಿಸರ ಸಚಿವ ರಮಾನಾಥ ರೈ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಸಾಕ್ಷಿಯಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

