ನೇಕಾರರ ಬೇಡಿಕೆ ನ್ಯಾಯಸಮ್ಮತ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 28
ಕೂಲಿ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೇಕಾರರು ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದ್ದು, ಹದಿನೈದು ದಿನಗಳಲ್ಲಿ ಕೂಲಿ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದರು.
ಶನಿವಾರ ಇಲ್ಲಿನ ಪ್ರಿಯದರ್ಶಿನಿ ನೇಕಾರ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಸದಸ್ಯರನ್ನು ಭೇಟಿಯಾಗಿ, ಸರ್ಕಾರ ನೇಕಾರರ ಪರವಾಗಿದ್ದು ಅವರ ಬಹುತೇಕ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.
ಸಮಸ್ಯೆ ಎದುರಿಸುತ್ತಿರುವ ನೇಕಾರರ ನಿಯೋಗ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬೇಡಿಕೆಗಳನ್ನು ಮನವರಿಕೆ ಮಾಡಿಕೊಡುವುದಕ್ಕೆ ವ್ಯವಸ್ಥೆ ಮಾಡುತ್ತೇನೆ. ಈ ವಾರದಲ್ಲಿ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿಯಾದಲ್ಲಿ ಹದಿನೈದು ದಿನಗಳಲ್ಲಿ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವುದಿಲ್ಲ. ಬೆಂಗಳೂರಿನಲ್ಲಿ ಕುಳಿತಿರುವ ಅಧಿಕಾರಿಗಳನ್ನು ಹುಬ್ಬಳ್ಳಿಗೆ ತೆರಳುವಂತೆ ಸೂಚಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಉಪಾಧ್ಯಕ್ಷ ಎನ್.ಜೆ. ಮಾಳವದೆ ಮಾತನಾಡಿ, 10 ವರ್ಷದಿಂದ ಸರ್ಕಾರ ವಿದ್ಯಾವಿಕಾಸ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುವುದಕ್ಕೆ ಕೆಎಚ್ಡಿಸಿಯಿಂದ ಬಟ್ಟೆ ಖರೀದಿಸುತ್ತಿದೆ. ಆದರೆ 10 ವರ್ಷಗಳಿಂದ ಒಂದೇ ದರ ನಿಗದಿ ಪಡಿಸಲಾಗಿದ್ದು, ಈ ನಿಟ್ಟಿನಲ್ಲೂ ಸರ್ಕಾರ ಚಿಂತನೆ ಮಾಡಿ ಖರೀದಿ ದರ ಹೆಚ್ಚಳ ಮಾಡಬೇಕು ಎಂದು ಸಚಿವ ಚಿಂಚನಸೂರ ಅವರಿಗೆ ಮನವಿ ಮಾಡಿದ್ದೇವೆ.
ಸಚಿವರಿಗೆ ಘೇರಾವ್: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಧರಣಿ ನಡೆಸಿದ್ದ ಕೈಮಗ್ಗ ನೇಕಾರರು, ಶನಿವಾರ ಕೂಡ ಸಚಿವ ಬಾಬುರಾವ್ ಚಿಂಚನಸೂರ ಅವರು ಕೆಎಚ್ಡಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ ವೇಳೆ ಘೇರಾವ್ ಹಾಕಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ನಿಮ್ಮ ಬಹುತೇಕ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ. ನೀವು ಬೆಂಗಳೂರಿಗೆ ಬನ್ನಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಎಂದು ಹೇಳಿದರು.
ಎನ್.ಜೆ. ಮಾಳವದೆ, ಧಾರವಾಡ ಜಿಲ್ಲಾ ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷ ನಾಗಪ್ಪ ಬನ್ನಿಗಿಡದ, ಪುಂಡಲಿಕ ಕುರಟ್ಟಿ, ಹೊನ್ನಳ್ಳಿ, ಜನ್ನತಬೀ ಮುದ್ಗಲ್, ಶಾಂತವ್ವ ದರಿಗೌಡರ, ಪ್ರೇಮವ್ವ ಮುಳಗುಂದ ಇದ್ದರು.
ಅಧಿಕಾರಿಗಳಿಗೆ ಬೆವರಿಳಿಸಿದ ಫ್ಯಾಕ್ಸ್
ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿ ಇರಿಸಿಕೊಂಡು ಬೆಂಗಳೂರಿನಲ್ಲಿ ನೆಲೆಯೂರಿ ಅಲ್ಲಿಯೇ ಬೋರ್ಡ್ ಮೀಟಿಂಗ್ ಆಯೋಜಿಸಿದ್ದ ಕೆಎಚ್ಡಿಸಿ ಅಧಿಕಾರಿಗಳಿಗೆ ಬೆವರಿಳಿಸಿದ್ದು ಒಂದು ಫ್ಯಾಕ್ಸ್. ಫ್ಯಾಕ್ಸ್ ಕಳುಹಿಸಿದ್ದು ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಉಪಾಧ್ಯಕ್ಷ ಎನ್.ಜೆ. ಮಾಳವದೆ ಅವರು, ಸೆ. 6ರಂದು ಜವಳಿ ಸಚಿವ ಬಾಬುರಾವ ಚಿಂಚನಸೂರ್ ಅವರಿಗೆ ಮಾಡಿದ ಫ್ಯಾಕ್ಸ್ನಲ್ಲಿ ನೇಕಾರರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಆಶ್ವಾಸನೆ ನೀಡಿದ್ದೀರಿ. ಆದರೆ ಇಲ್ಲಿಯವರೆಗೂ ನೇಕಾರ ಮುಖಂಡರನ್ನು ಕರೆಸಿ ಚರ್ಚೆ ಮಾಡಿಲ್ಲ. ಇಲಾಖೆಗೆ ಸಂಬಂಧಿಸಿದ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿದ್ದರೂ ನಿಗಮದ ಬೋರ್ಡ್ ಮೀಟಿಂಗ್ನ್ನು ಬೆಂಗಳೂರಿನಲ್ಲಿ ಆಯೋಜಿಸುವ ಔಚಿತ್ಯ ಏನು? ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ನೇಕಾರರು ಬೆಂಬಲಿಸಿದ್ದಾರೆ. ಒಂದು ವೇಳೆ ನೀವು ನಮ್ಮನ್ನು ಕೈಬಿಟ್ಟರೆ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ನಾವು ಕೈಬಿಡಬೇಕಾಗುತ್ತದೆ ಎನ್ನುವ ವಿಷಯ ಗಮನದಲ್ಲಿರಲಿ ಎಂದು ಫ್ಯಾಕ್ಸ್ ಕಳುಹಿಸಿದ್ದಾರೆ. ಫ್ಯಾಕ್ಸ್ನಲ್ಲಿ ವಿವರಿಸಿರುವ ಕೊನೆಯ ವಾಕ್ಯಕ್ಕೊ ಅಥವಾ ಮತ್ತಿನ್ನ್ಯಾವ ಕಾರಣಕ್ಕೊ ಅಂತೂ ಇಂತೂ ಮೂರು ಬಾರಿ ರದ್ದಾಗಿದ್ದ ಕೆಎಚ್ಡಿಸಿ ಬೋರ್ಡ್ ಮೀಟಿಂಗ್ ಶನಿವಾರ ಹುಬ್ಬಳ್ಳಿಯಲ್ಲಿ ಸಚಿವ ಬಾಬುರಾವ್ ಚಿಂಚನಸೂರ ಅಧ್ಯಕ್ಷತೆಯಲ್ಲಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

