ಧಾರವಾಡ

ಹೋರಾಟಕ್ಕಿಳಿಯದ ಅವಳಿನಗರ ಜನತೆ

Published On :

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಹೋರಾಟದಲ್ಲಿ ಅವಳಿ ನಗರದ ನಾಗರಿಕರು ಕೈ ಜೋಡಿಸದಿರುವುದು ವಿಷಾದನೀಯ. ಈ ವಿಚಾರದಲ್ಲಿ ಅವಳಿ ನಗರದ ನಾಗರಿಕರಿಂದ ತಪ್ಪಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು.
ಶನಿವಾರ, ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ನಲ್ಲಿ ಆಯೋಜಿಸಿದ್ದ ಕಳಸಾ ಬಂಡೂರಿ ಹೋರಾಟ ಪೂರ್ವಭಾವಿ ಸಭೆ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲಪ್ರಭಾ ನದಿಗೆ ಕಳಸಾ ಬಂಡೂರಿ ನಾಲೆ ಜೋಡಣೆಗೆ ಆಗ್ರಹಿಸಿ ಅಕ್ಟೋಬರ್ 7ರಂದು ಕರೆ ನೀಡಿರುವ ಹುಬ್ಬಳ್ಳಿ-ಧಾರವಾಡ ನಗರ ಬಂದ್ಗೆ ಅವಳಿ ನಗರದ ನಾಗರಿಕರು ಬೆಂಬಲಿಸಲಿದ್ದಾರೆ. ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ಮಲಪ್ರಭಾ ನದಿಯಿಂದ. ಈ ನದಿಗೆ ಕಳಸಾ ಮತ್ತು ಬಂಡೂರಿ ನಾಲೆಗಳನ್ನು ಜೋಡಿಸುವ ಮುಖಾಂತರ ಹುಬ್ಬಳ್ಳಿ, ಧಾರವಾಡ ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಸಬಹುದು. ಕಳೆದ 13ಕ್ಕೂ ಹೆಚ್ಚು ವರ್ಷಗಳಿಂದ ರೈತರು ನಡೆಸಿಕೊಂಡು ಬರುತ್ತಿರುವ ಹೋರಾಟಕ್ಕೆ ಹುಬ್ಬಳ್ಳಿ ನಾಗರಿಕರು ಕೈಜೋಡಿಸಿಲ್ಲ. ಈ ನಿಟ್ಟಿನಲ್ಲಿ ರೈತ ಹೋರಾಟ ಸಮಿತಿ ಅವಳಿ ನಗರದ ನಾಗರಿಕರನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳುವ ಯತ್ನ ಮಾಡಿಲ್ಲ ಎಂದು ಹೇಳಿದರು.
ಮಾಜಿ ಮೇಯರ್ ಪಾಂಡುರಂಗ ಪಾಟೀಲ ಮಾತನಾಡಿ, ಅವಳಿ ನಗರದ ಜೀವನಾಡಿ ಮಲಪ್ರಭಾ ನದಿ, ನೀರ ಸಾಗರದಿಂದ ಪೂರೈಕೆಯಾಗುತ್ತಿರುವ ನೀರು 8-10 ವಾರ್ಡ್ಗಳಿಗೂ ಸಾಲದು. ಮಲಪ್ರಭಾ ನದಿಯಿಂದ ಮಾತ್ರ ಅವಳಿ ನಗರಕ್ಕೆ ಕುಡಿಯುವ ನೀರು ಲಭಿಸಲು ಸಾಧ್ಯ ವಿನಃ ಇನ್ನೊಂದು ಪರ್ಯಾಯ ಆಯ್ಕೆ ನಮಗಿಲ್ಲ. ಭವಿಷ್ಯದಲ್ಲಿ ಅವಳಿ ನಗರಕ್ಕೆ 7 ಟಿಎಂಸಿ ನೀರಿನ ಅಗತ್ಯವಿದೆ. ಈ ಬಂಡೂರಿ ನಾಲಾ ಹೋರಾಟಕ್ಕೆ ಜನತೆ ಬೆಂಬಲ ನೀಡಬೇಕಾದ ಅನಿವಾರ್ಯತೆ ಇದೆ ಎಂದರು.
ಈ ನಾಲೆಗಳ ಜೋಡಣೆಯಿಂದ ಸವದತ್ತಿಯಿಂದ ಕುಂದಗೋಳದವರೆಗೆ ಇರುವ ಎಲ್ಲ ಗ್ರಾಮ, ನಗರಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಬಹುದು ಎಂದು ಹೇಳಿದರು.
ಕಳಸಾ ಬಂಡೂರಿ ನಾಲಾ ರೈತ ಹೋರಾಟ ಸಮಿತಿ ಮುಖಂಡ ವಿಜಯ ಕುಲಕರ್ಣಿ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಹುಟ್ಟಿರುವ ಕಳಸಾ, ಬಂಡೂರಿ ನಾಲೆಗಳನ್ನು ಮಲಪ್ರಭಾ ನದಿಗೆ ಜೋಡಿಸುವ ಯೋಜನೆಗೆ ಗೋವಾ ಸರ್ಕಾರ ಅಡ್ಡಗಾಲು ಹಾಕಿದೆ. ಮಹದಾಯಿ ನದಿಯಲ್ಲಿ ಕರ್ನಾಟಕದ ಪಾಲಿನ 57 ಟಿಎಂಸಿ ನೀರಿದ್ದು, ಅದರಲ್ಲಿ ಕೇವಲ 4 ಟಿಎಂಸಿ ನೀರನ್ನು ಮಾತ್ರ ಮಲಪ್ರಭಾ ನದಿಗೆ ಪಡೆಯಲಾಗುತ್ತದೆ. ಇನ್ನುಳಿದ 53 ಟಿಎಂಸಿಯನ್ನು ಕಳಸಾ ಹಳ್ಳದಿಂದ ಪಡೆಯುವ ಯೋಜನೆ ಇದೆ. ಕಳಸಾ-ಬಂಡೂರಿ ನಾಲಾ ಯೋಜನೆ ಪೂರ್ಣಗೊಂಡಲ್ಲಿ ಮಲಪ್ರಭಾ ನದಿಗೆ ಹೆಚ್ಚುವರಿಯಾಗಿ 7.56 ಟಿಎಂಸಿ ನೀರು ಲಭಿಸುತ್ತದೆ. ಮಲಪ್ರಭಾ ಅಣೆಕಟ್ಟೆಯಲ್ಲಿ 34 ಟಿಎಂಸಿ ನೀರು ಸಂಗ್ರಹಿಸಲು ಸಾಧ್ಯವಿದ್ದು ಅದರಲ್ಲಿ 26 ಟಿಎಂಸಿ ಮಾತ್ರ ನೀರಾವರಿಗೆ ಬಳಕೆಯಾಗುತ್ತಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಹೋರಾಟ ಸಮಿತಿಯ ವಿಕಾಸ ಸೊಪ್ಪಿನ, ಕಾನೂನಿನ ಪ್ರಕಾರ ನ್ಯಾಯಾಧೀಕರಣ ರಚನೆಗೊಂಡ ಮೂರು ವರ್ಷದೊಳಗೆ ತೀರ್ಪು ನೀಡಬೇಕು. 2010ರಲ್ಲಿ ರಚನೆಯಾಗಿರುವ ಮಹದಾಯಿ ನ್ಯಾಯಾಧೀಕರಣ ಇನ್ನೂ ತೀರ್ಪು ನೀಡಿಲ್ಲ. ನ್ಯಾಯಾಧೀಕರಣದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನ್ಯಾಯವಾದಿಗಳು ಮಧ್ಯಂತರ ತೀರ್ಪು ಪಡೆಯುವ ನಿಟ್ಟಿನಲ್ಲಿ ವಾದ ಮಂಡಿಸಿದರೆ ಕಾಮಗಾರಿಗೆ ವೇಗ ನೀಡಬಹುದು ಎಂದರು.
ಹಸಿರು ಸೇನೆಯ ಕಲ್ಯಾಣರಾವ್ ಮುಚಳಂಬಿ, ಕೆಸಿಸಿಐ ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ್, ಬಸವರಾಜಪ್ಪ, ರೈತ ಸಂಘದ ಬಸವರಾಜಪ್ಪ ಮಳಲಿ, ಮಂಜುನಾಥ ಮುದರಡ್ಡಿ ಮುಂತಾದವರು ಉಪಸ್ಥಿತರಿದ್ದರು.


ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ಮಲಪ್ರಭಾ ನದಿಯಿಂದ. ಈ ನದಿಗೆ ಕಳಸಾ-ಬಂಡೂರಿ ನಾಲೆ ಜೋಡಿಸುವ ಮೂಲಕ ಹುಬ್ಬಳ್ಳಿ, ಧಾರವಾಡ ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಸಬಹುದು. 13 ವರ್ಷಗಳಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಹುಬ್ಬಳ್ಳಿ ನಾಗರಿಕರು ಕೈಜೋಡಿಸಿಲ್ಲ. ಈ ನಿಟ್ಟಿನಲ್ಲಿ ರೈತ ಹೋರಾಟ ಸಮಿತಿ ಅವಳಿ ನಗರ ಜನರನ್ನು ಹೋರಾಟದಲ್ಲಿ ತೊಡಗಿಸಲು ಯತ್ನಿಸಿಲ್ಲ. ಮಲಪ್ರಭಾ ನದಿಗೆ ಕಳಸಾ ಬಂಡೂರಿ ನಾಲೆ ಜೋಡಣೆಗೆ ಆಗ್ರಹಿಸಿ ಅ. 7ರಂದು ಕರೆ ನೀಡಿರುವ ಹು-ಧಾ ಬಂದ್ಗೆ ಅವಳಿ ನಗರದ ನಾಗರಿಕರು ಬೆಂಬಲಿಸಲಿದ್ದಾರೆ.
- ರಾಜಣ್ಣ ಕೊರವಿ, ಸದಸ್ಯ, ಮಹಾನಗರ ಪಾಲಿಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.