ರೈತರಗಿದು ಕಬ್ಬಿಣದ ಕಡಲೆ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 1
ಇಲ್ಲಿ ಕಡಲೆ ಮಾರಬೇಕಾದರೆ ಯಾವುದಾದರೂ ಪ್ರಭಾವಿ ನಾಯಕನ ವಶೀಲಿ ಇರಬೇಕು ಅಥವಾ ಪ್ರಮುಖ ಅಧಿಕಾರಿಗಳ ಪರಿಚಯವಿರಬೇಕು. ಇಲ್ಲದಿದ್ದರೆ, ಧೈರ್ಯದಿಂದ ಪ್ರತಿಭಟಿಸುವ ಶಕ್ತಿಯಾದರೂ ಇರಬೇಕು. ಅಂದಾಗಲೇ ರೈತರು ಬೆಳೆದ ಕಡಲೆಗೆ ಸರ್ಕಾರದ ಬೆಂಬಲ ಬೆಲೆ ದೊರೆಯುವುದು.
ಧಾರವಾಡದ ಎಪಿಎಂಸಿಯಲ್ಲಿ ಸರ್ಕಾರ ನಿಗದಿ ಪಡಿಸಿದ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿರುವ ಕೇಂದ್ರದ ಸ್ಥಿತಿ ಇದು. ರೈತರು ಪ್ರಭಾವ, ವಶೀಲಿ ಹಾಗೂ ಪರಿಚಯವಿಟ್ಟುಕೊಂಡು ಬಂದರೆ ಮಾತ್ರ ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಸಾಮಾನ್ಯ ರೈತರು ಬಂದರೆ ನಾನಾ ಕಾರಣಗಳನ್ನು ಹೇಳಿ ಕಡಲೆ ಖರೀದಿಸದೇ ಸಾಗಹಾಕಲಾಗುತ್ತದೆ ಎಂಬುದು ಧಾರವಾಡ ತಾಲೂಕಿನ ರೈತರ ಆರೋಪ.
ಮಾರುಕಟ್ಟೆ ಅಂದರೆ ದಲ್ಲಾಳಿ ಅಂಗಡಿಗಳಲ್ಲಿ ಕ್ವಿಂಟಲ್ ಕಡಲೆಗೆ ರು. 2,600 ವರೆಗೆ ಇದ್ದರೆ, ಸರ್ಕಾರ ರು. 3,100 ಬೆಂಬಲ ಬೆಲೆ ಎಂದು ಘೋಷಿಸಿ ಖರೀದಿಸುತ್ತಿದೆ. 1 ಎಕರೆಗೆ 7 ಕ್ವಿಂಟಲ್ ಕಡಲೆಯನ್ನು ತೆಗೆದುಕೊಳ್ಳುವ ಷರತ್ತಿನೊಂದಿಗೆ ಈ ಘೋಷಣೆ ಮಾಡಿತ್ತು. ರೈತರು ತಮ್ಮ ವ್ಯಾಪ್ತಿಯ ತಲಾಟಿಯಿಂದ, ತಾವು ಬೆಳೆದ ಕಡಲೆ ಹಾಗೂ ತಮ್ಮ ಹೊಲದ ವಿವರವನ್ನು ನಮೂದಿಸಿಕೊಂಡು ಉತಾರ ತೆಗೆದುಕೊಂಡು ಬರಬೇಕು. ಆಗ ಕಡಲೆ ಖರೀದಿಸಲು ಸರ್ಕಾರದಿಂದ ನಿಯೋಜಿತಗೊಂಡ ಸಂಸ್ಥೆಯು ರೈತರಿಗೆ ಖರೀದಿ ಮಾಡುವ ದಿನಾಂಕ ತಿಳಿಸಬೇಕು. ಇದು ನಿಯಮ. ಆದರೆ, ಧಾರವಾಡದ ಎಪಿಎಂಸಿಯಲ್ಲಿ ರೈತರು ಕಡಲೆ ಮಾರಾಟಕ್ಕೆ ಬಂದಾಗ ನಿಮ್ಮ ಕಡಲೆ ಗುಣಮಟ್ಟ ಸರಿಯಿಲ್ಲ, ನಾಳೆ, ನಾಡಿದ್ದು ಬನ್ನಿ ಎಂದು ಕಿರುಕುಳ ನೀಡುತ್ತಿದ್ದಾರೆ. ಪ್ರಭಾವ ಬಳಸಿ ಬಂದವರಿಗೆ ಮಾತ್ರ ಇಲ್ಲಿ ಆದ್ಯತೆ ದೊರೆಯುತ್ತಿದೆ. ಈ ಕಿರುಕುಳದಿಂದ ಬೇಸತ್ತು ರೈತರು ಕಡಿಮೆ ದರದಲ್ಲಿ ದಲ್ಲಾಳಿಗಳಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.
ಇನ್ನೂ ಬೇಸರದ ಸಂಗತಿ ಏನೆಂದರೆ ರೈತರಿಂದ ಕಡಿಮೆ ಬೆಲೆಗೆ ಖರೀದಿಸಿದ ದಲ್ಲಾಳಿಗಳು ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
ಬೆಂಬಲ ಬೆಲೆ ಕಡಲೆ ಖರೀದಿಸುವ ಕೇಂದ್ರದ ಸಿಬ್ಬಂದಿ ರೈತರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದು, ಈ ಕಾರಣದಿಂದ ರೈತರು ಬೇರೆ ದಾರಿ ತಿಳಿಯದೆ ದಲ್ಲಾಳಿ ಅಂಗಡಿಗೆ ಸಾಗಿ, ದಲ್ಲಾಳಿಗಳು ಹೇಳಿದ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ದಲ್ಲಾಳಿ ಅಂಗಡಿಯವರು ಇದೇ ಕಡಲೆಯನ್ನು ರೈತರ ಹೆಸರಿನಲ್ಲಿ ಸರ್ಕಾರದ ಬೆಂಬಲ ಬೆಲೆಗೆ ಮಾರುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಾರೆ ತಾಲೂಕಿನ ಶಿವಳ್ಳಿ ಗ್ರಾಮದ ನಿವಾಸಿ ಬಸಯ್ಯ ಬಕ್ಕಯ್ಯನವರ.
ದೇಶದ ಬೆನ್ನೆಲುಬು, ರೈತ ದೇಶಕ್ಕೆ ಅನ್ನದಾತ, ರೈತ ಲೋಕವನ್ನೆ ಸಲಹುವ ದೇವರು ಎಂದು ರೈತನನನ್ನು ಎಲ್ಲರೂ ಗುಣಗಾನ ಮಾಡುತ್ತಾರೆ. ಆದರೆ ರೈತನ ಸಮಸ್ಯೆಗಳನ್ನು ಆಲಿಸುವವರು ಮಾತ್ರ ಯಾರೂ ಇಲ್ಲ. ಮೊದಲೇ ಈ ಬಾರಿ ಸಾಲ-ಸೋಲ ಮಾಡಿ ಕಡಲೆ ಬೆಳೆದಿದ್ದವು. ಕ್ವಿಂಟಲ್ಗೆ 4 ರಿಂದ 5 ಸಾವಿರ ರುಪಾಯಿ ಬದಲಾಗಿ ರು. 2,500 ರಿಂದ ರು. 3 ಸಾವಿರದವರೆಗೆ ಮಾರುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಿದರೆ ಆಸರೆ ಆಗುತ್ತದೆ. ಆದರೆ ಬೆಂಬಲ ಬೆಲೆ ಹೆಸರಿನಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಇಂತಹ ಕಾರಣಗಳಿಂದ ರೈತ ಕೃಷಿಯಿಂದ ವಿಮುಖನಾಗುತ್ತಿದ್ದಾನೆ ಎಂದು ಬಸಯ್ಯ ಬೇಸರ ವ್ಯಕ್ತಪಡಿಸುತ್ತಾರೆ.
ದಲ್ಲಾಳಿಗಳೂ ಹಾಗೂ ಖರೀದಿ ಕೇಂದ್ರದವರು ಒಂದಾಗಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ರೈತನ ಹೆಸರಿನಲ್ಲಿ ಉತಾರ ಪಡೆದು ದಲ್ಲಾಳಿಗಳೂ ಕಡಲೆ ಮಾರುತ್ತಿದ್ದಾರೆ. ಖರೀದಿ ಕೇಂದ್ರದಲ್ಲಿ ರೈತರಿಗಿಂತ ದಲ್ಲಾಳಿಗಳಿಗೆ ಅವಕಾಶ ಹೆಚ್ಚಾಗಿದೆ. ಜಿಲ್ಲಾಧಿಕಾರಿ ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆ ಸಹ ಸುಮ್ಮನಾಗಿದ್ದು, ರೈತರ ಸಂಕಷ್ಟ ಕೇಳುವವರ್ಯಾರು ಎನ್ನುತ್ತಾರೆ ಹೆಬ್ಬಳ್ಳಿಯ ಮಂಜುನಾಥ ಮುಗ್ಗನವರ.
ರೈತರು ಪ್ರಭಾವ, ವಸೂಲಿ ಹಾಗೂ ಪರಿಚಯವಿಟ್ಟುಕೊಂಡು ಬಂದರೆ ಮಾತ್ರ ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಸಾಮಾನ್ಯ ರೈತರು ಬಂದರೆ ನಾನಾ ಕಾರಣಗಳನ್ನು ಹೇಳಿ ಕಡಲೆ ಖರೀದಿಸದೇ ಸಾಗಹಾಕಲಾಗುತ್ತದೆ.
ಇಲ್ಲಿಯವರೆಗೆ 7,031 ಕ್ವಿಂಟಲ್ ಕಡಲೆ ಖರೀದಿಸಿದ್ದು, ಏ. 10ರ ವರೆಗೂ ಖರೀದಿಸುತ್ತೇವೆ. ಈ ವಿಷಯದಲ್ಲಿ ರೈತರಿಗೆ ಯಾವ ಅನ್ಯಾಯ ಮಾಡಿಲ್ಲ. ರೈತರಿಗೆ ನೀಡಿದ ದಿನಾಂಕದಂದು ಬಂದರೆ ಸರಳವಾಗಿ ಕಡಲೆ ಖರೀದಿಸುತ್ತೇವೆ. ಯಾವುದೇ ದಲ್ಲಾಳಿಗಳಿಂದ ಖರೀದಿಸಿಲ್ಲ.
- ಎಸ್.ಜಿ. ಕೆಲಗೇರಿ
ಖರೀದಿ ಕೇಂದ್ರ ಸಿಬ್ಬಂದಿ
- ಹೊನ್ನಪ್ಪ ಲಕ್ಕಮ್ಮನವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

