ಜೀವನಾನುಭವವೇ ಸಾಧನೆಗೆ ಕಾರಣ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 7
ಪ್ರತಿ ವ್ಯಕ್ತಿಯ ಸಾಧನೆಗೆ ಮೂಲ ಕಾರಣ ಅವನ ಜೀವನಾನುಭವವೇ ಆಗಿರುತ್ತದೆ. ಆದ್ದರಿಂದ ಜೀವನದ ಪ್ರತಿಯೊಂದು ಹಂತವನ್ನು ದಾಖಲೀಕರಣ ಮಾಡುವುದು ಅಗತ್ಯವಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಡಾ. ಡಿ.ಬಿ. ನಾಯಕ ಹೇಳಿದರು.
ಕರ್ನಾಟಕ ಕಲಾ ಕಾಲೇಜಿನಲ್ಲಿ ಕರ್ನಾಟಕ ಸಂಘದ ಕಾರ್ಯ ಚಟುವಟಿಕೆಗಳ ವಾರ್ಷಿಕ ಸಮಾರೋಪದಲ್ಲಿ ವಿದ್ಯಾರ್ಥಿ ವಿನೋದ ಚವಾಣ ಅವರ ಸರಾಗ ಕವನ ಸಂಕಲವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಧನೆಯನ್ನು ಸಿದ್ಧಿರೂಪಕ್ಕೆ ತರಬೇಕಾದರೆ ಬದುಕಿನ ನೈಜತೆ ಮತ್ತು ಅನುಭವಿಸಿದ ಸುಖ ದುಃಖಗಳು ಕಾರಣವಾಗಿರುತ್ತವೆ ಎಂದರು. ಕವಿತೆಗೆ ಸ್ಫೂರ್ತಿ, ಪ್ರೇಮ, ಕಾಮದೊಂದಿಗೆ ಭವಿಷ್ಯದ ಕನಸು ಮುಖ್ಯ. ಯುವಕ-ಯುವತಿಯರು ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ರೂಢಿಸಿಕೊಂಡಾಗ ಜೀವನದ ಪಕ್ವತೆ ಉಂಟಾಗುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕರ್ನಾಟಕ ಕಾಲೇಜ್ ತನ್ನದೇ ಆದ ಸ್ಥಾನಮಾನ ಮತ್ತು ಘನತೆ, ಗೌರವಗಳನ್ನು ಹೊಂದಿದೆ. ಇಲ್ಲಿನ ಪರಿಸರ ಕವಿ, ಗಾಯಕ ಹಾಗೂ ರಾಜಕಾರಣಿಯಂತಹ ಅಪರೂಪದ ಆದರ್ಶ ವ್ಯಕ್ತಿತ್ವಗಳನ್ನು ರೂಪಿಸುತ್ತಾ ಬಂದಿದೆ ಎಂದರು. ಸಾಹಿತ್ಯ ರಚನೆಗೊಂಡ ನಂತರ ಅದು ಸಮಾಜದ ಸ್ವತ್ತು. ಆದರ್ಶವನ್ನು ಬಿಂಬಿಸುವ ಮತ್ತು ವಾಸ್ತವಿಕತೆಗಳನ್ನು ಜನರ ಮುಂದೆ ತೆರೆದುಬಿಡಲು ಸಾಹಿತ್ಯದ ಆದ್ಯ ಕರ್ತವ್ಯ. ನೇರ, ನಿಷ್ಠುರ ಮತ್ತು ಸತ್ಯವಾದುದನ್ನು ಕಹಿಯಾಗಿದ್ದರೂ ಇನ್ನೊಬ್ಬರ ಒಳಿತಿಗಾಗಿ ದಾಖಲಿಸುವುದು ಸಾಹಿತಿಯ ಮನೋಧೈರ್ಯ, ಸಮಾಜನಿಷ್ಠೆ ಎತ್ತಿತೋರಿಸುತ್ತದೆ ಎಂದು ನಾಯಕ ತಿಳಿಸಿದರು.
ಡಾ. ಬಿ.ಎಸ್. ಭಜಂತ್ರಿ ಕೃತಿ ಪರಿಚಯಿಸಿದರು. ಮಹೇಶ ಹಿರೇಮಠ ಮತ್ತು ನಿರ್ಮಲಾ ಬಾಳಿ ಕವನ ಸಂಕಲನ ಕುರಿತು ಮಾತನಾಡಿದರು. ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಆರ್.ಎಸ್. ತಳವಾರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ.ಎಸ್.ಎಸ್. ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.
ತಿರಕಪ್ಪ ಉಂಡಿ, ವಿನೋದ ಚವಾಣ, ಡಾ. ಮಹಾದೇವಿ ಹಿರೇಮಠ, ಡಾ. ಸಿದ್ರಾಮ ಕಾರ್ಣಿಕ, ಡಾ. ಸುರೇಶ ಹಿರೇಮಠ, ಡಾ. ಅನಿತಾ ಗುಡಿ ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಡಿ.ಬಿ. ಕರಡೋಣಿ ಸ್ವಾಗತಿಸಿದರು. ಸಂಘದ ಕಾರ್ಯಾಧ್ಯಕ್ಷ ಡಾ. ವಾಮದೇವ ಎಚ್.ಟಿ. ವಾರ್ಷಿಕ ವರದಿ ವಾಚಿಸಿದರು. ರಂಗನಾಥ ಬನಹಟ್ಟಿ ಮತ್ತು ರಾಣಿ ಎಸ್. ನಿರೂಪಿಸಿದರು. ವಿಜಯಲಕ್ಷ್ಮಿ ಕುರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

